ಶಿವಮೊಗ್ಗ: ಸೇನೆ ಸೇರಬೇಕು. ಗಡಿಯಲ್ಲಿ ನಿಂತು ದೇಶ ಸೇವೆ ಮಾಡಬೇಕು ಅನ್ನುವ ಗುರಿ ಹೊಂದಿರುವ ಮಲೆನಾಡಿನ ಯುವಕರಿಗೆ, ಶಿವಮೊಗ್ಗದ ಮಾಜಿ ಯೋಧರ ತಂಡವೊಂದು ಉಚಿತ ತರಬೇತಿ ನೀಡುತ್ತಿದೆ. ಸೂಕ್ತ ಮಾರ್ಗದರ್ಶನ ನೀಡಿ ಸೇನಾ ನೇಮಕಾತಿ ರ್ಯಾಲಿಗೆ ಕಳುಹಿಸುತ್ತಿದೆ.
ಶಿವಮೊಗ್ಗದ ಮನೆ- ಮನೆಯಲ್ಲೂ ಯೋಧರಿರಬೇಕು ಎನ್ನುವ ಸದುದ್ದೇಶದಿಂದ, ಮಾಜಿ ಯೋಧರ ತಂಡ, ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್ ಸ್ಥಾಪಿಸಿದೆ. ಆಕಾಂಕ್ಷಿಗಳಿಗೆ ಉಚಿತವಾಗಿ ಸೇನಾ ತರಬೇತಿ ನೀಡುತ್ತಿದೆ. ಇವರ ಗರಡಿಯಲ್ಲಿ ಪಳಗಿದವರು ಈಗ ಗಡಿಯಲ್ಲಿ ದೇಶ ಕಾಯುತ್ತಿದ್ದಾರೆ. ಮಾ. 17ರಿಂದ ಉಡುಪಿಯಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ. ಇದಕ್ಕೆ ಶಿವಮೊಗ್ಗದಲ್ಲಿ ಆಕಾಂಕ್ಷಿಗಳಿಗೆ ಉಚಿತವಾಗಿ ತರಬೇತಿ ನೀಡಲಾಯಿತು.
ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ವಿವಿಧೆಡೆಯಿಂದ ಆಕಾಂಕ್ಷಿಗಳು ತರಬೇತಿಗೆ ಬಂದಿದ್ದರು. ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ದೈಹಿಕ ತರಬೇತಿ, ಜಿಲ್ಲಾ ತರಬೇತಿ ಕೇಂದ್ರದಲ್ಲಿ ಪರೀಕ್ಷೆಗೆ ಬೇಕಿರುವ ಪೂರ್ವ ಸಿದ್ಧತಾ ತರಬೇತಿ ನೀಡಲಾಯಿತು. ಆಕಾಂಕ್ಷಿಗಳಿಗೆ ಹದಿನೈದು ದಿನ ತರಬೇತಿ ನೀಡಲಾಯಿತು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ದೈಹಿಕ ಸಾಮರ್ಥ್ಯ ಹೆಚ್ಚಿಸುವ ವಿವಿಧ ವ್ಯಾಯಾಮಗಳನ್ನು ಹೇಳಿ ಕೊಡಲಾಗುತ್ತಿದೆ. ನೇಮಕಾತಿಗೆ ಅಗತ್ಯವಿರುವ ರನ್ನಿಂಗ್, ಹೈಜಂಪ್ ಸೇರಿದಂತೆ ವಿವಿಧ ತರಬೇತಿ ನೀಡಲಾಗುತ್ತಿದೆ ಎನ್ನುತ್ತಾರೆ ಮಾಜಿ ಯೋಧ, ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಸುಭಾಷ್ ಚಂದ್ರ ತೇಜಸ್ವಿ.
ಮಾಜಿ ಯೋಧರಾದ ಕಿಶೋರ್ ಭೈರಾಪುರ ಮತ್ತು ಸುಭಾಷ್ ಚಂದ್ರ ತೇಜಸ್ವಿ ಅವರು ದೈಹಿಕ ತರಬೇತಿ ನೀಡುತ್ತಾರೆ. ಇವರ ಜೊತೆಗೆ ರಜೆಗಾಗಿ ಊರಿಗೆ ಬಂದಿರುವ ಯೋಧರು ಕೂಡ ಕೈ ಜೋಡಿಸಿದ್ದಾರೆ. ದೈಹಿಕ ತರಬೇತಿ ಜೊತೆಗೆ ವಿವಿಧ ಕಾಲೇಜುಗಳ ಉಪನ್ಯಾಸಕರಿಂದ ಲಿಖೀತ ಪರೀಕ್ಷೆಗೆ ಅಗತ್ಯವಿರುವ ತರಬೇತಿ ನೀಡಲಾಯಿತು. ಇಲ್ಲಿ ಬಂದ ಮೇಲೆ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ಸೇನಾ ನೇಮಕಾತಿ ರ್ಯಾಲಿಯಲ್ಲಿ ಮುಂಚೂಣಿ ಕಾಯ್ದುಕೊಳ್ಳುವ ಭರವಸೆ ಮೂಡಿದೆ ಎನ್ನುತ್ತಾರೆ ಶಿಬಿರಾರ್ಥಿ ಉಡುಪಿಯ ಗೌತಮ್. ತರಬೇತಿಯ ಜೊತೆಗೆ ನಮ್ಮ ದಾಖಲೆಗಳನ್ನು ಪರಿಶೀಲಿಸಿ, ಸರಿಪಡಿಸಲಾಗಿದೆ. ಮೈ ಮೇಲೆ ಹಚ್ಚೆ ಇದ್ದವರಿಗೆ ತೆಗೆಸಿದ್ದಾರೆ. ಎಲ್ಲ ಬಗೆಯಲ್ಲಿ ನಾವು ಸನ್ನದ್ಧರಾಗಿದ್ದೇವೆ. ಆಯ್ಕೆ ಆಗುತ್ತೇವೆ ಎಂಬ ಭರವಸೆಯಲ್ಲಿದ್ದೇವೆ ಅನ್ನುತ್ತಾರೆ ಶಿಬಿರಾರ್ಥಿ ರಿಪ್ಪನ್ ಪೇಟೆಯ ರವಿರಾಜ್.