Advertisement

ಸೈನಿಕರಿಗೆ ರಿಯಾಯ್ತಿ-ಹುತಾತ್ಮರ ಕುಟುಂಬಕ್ಕೆ ಉಚಿತ

02:58 PM Jul 08, 2017 | |

ವಿಜಯಪುರ: ಐತಿಹಾಸಿಕ ಗುಮ್ಮಟನಗರಿಗೆ ಭೇಟಿ ನೀಡುವ ಭಾರತೀಯ ಸೈನಿಕರಿಗೆ ಸಿಹಿ ಸುದ್ದಿ ಇದೆ. ನಗರದ ಬಸ್‌ ನಿಲ್ದಾಣದ
ಮುಂಭಾಗದಲ್ಲಿರುವ ಈ ಹೋಟೆಲ್‌ಗೆ ಭೇಟಿ ನೀಡಿದರೆ ನಿಮಗೆ ಊಟ-ವಸತಿ ವೆಚ್ಚದಲ್ಲಿ ರಿಯಾಯ್ತಿ ಸಿಗಲಿದೆ. ಹುತಾತ್ಮ ಯೋಧರ
ಕುಟುಂಬಕ್ಕೆ ಸಂಪೂರ್ಣ ಉಚಿತ ಸೇವೆ ನೀಡುವ ಮೂಲಕ ದೇಶ ರಕ್ಷಕರಿಗೆ ಗೌರವ ಸಲ್ಲಿಸುತ್ತಿದೆ. 

Advertisement

ನಗರದ ಲಲಿತ ಮಹಲ್‌ ಹೋಟೆಲ್‌ ಮಾಲೀಕರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ, ನಿವೃತ್ತರಾದ ಸೈನಿಕರು ತಮ್ಮ
ಲಾಡ್ಜ್ ಹಾಗೂ ರೆಸ್ಟೋರೆಂಟ್‌ಗೆ ಭೇಟಿ ನೀಡಿ, ಉಪಾಹಾರ, ಊಟ, ವಸತಿ ಮಾಡಿದರೆ ರಿಯಾಯ್ತಿ ನೀಡಲು ನಿರ್ಧರಿಸಿದ್ದಾರೆ. ಸಮವಸ್ತ್ರ ಧರಿಸಿ ಬರುವ ಸೈನಿಕರಿಗೆ ಶೇ. 50ರಷ್ಟು ರಿಯಾಯ್ತಿ ಘೋಷಿಸಿದ್ದರೆ, ಉಳಿದವರಿಗೂ ಶೇ. 25 ರಿಯಾಯ್ತಿ ನೀಡಲು ನಿರ್ಧರಿಸಿದ್ದಾರೆ. ಹುತಾತ್ಮ ಯೋಧರ ಅವಲಂಬಿತರಿಗೆ ಹೋಟೆಲ್‌ ಸೇವೆ ಸಂಪೂರ್ಣ ಉಚಿತವಾಗಿರಲಿದೆ. 

ಸೌಲಭ್ಯ ಪಡೆಯುವುದು ಹೇಗೆ?: ಸಮವಸ್ತ್ರ ಇಲ್ಲದ ಸೈನಿಕರು, ನಿವೃತ್ತ, ಹುತಾತ್ಮ ಸೈನಿಕರ ಕುಟುಂಬ ಸದಸ್ಯರು ರಕ್ಷಣಾ ಪಡೆಯಿಂದ ನೀಡುವ ಗುರುತಿನ ಪತ್ರ (ಐಡೆಂಟಿಟಿ ಕಾರ್ಡ್‌) ತೋರಿಸಿದರೆ ಅಥವಾ ನಕಲು ಪ್ರತಿ ನೀಡಿದರೂ ಸಾಕು, ಈ ಹೋಟೆಲ್‌ನಲ್ಲಿ ರಿಯಾಯ್ತಿ ಸೌಲಭ್ಯ ಪಡೆಯಬಹುದು. ಕುಟುಂಬದ ಸದಸ್ಯರಿಂದ ದೂರವಿದ್ದು ಗಡಿಯಲ್ಲಿ ಹಗಲಿರುಳು ಸೇವೆ ಮಾಡುತ್ತ ನಮಗೆ ನೆಮ್ಮದಿಯ ಬದುಕು ಸೃಷ್ಟಿಸುತ್ತಿರುವ ಸೈನಿಕರ ಸೇವೆ ಅವರ್ಣನೀಯ. ಹಗಲು-ರಾತ್ರಿ, ಮಳೆ, ಛಳಿ, ಬಿಸಿಲೆನ್ನದೆ ನಮಗಾಗಿ ತಮ್ಮ ಬದುಕನ್ನೇ ಪಣಕ್ಕಿಡುವ ಸೈನಿಕರ ತ್ಯಾಗ-ಬಲಿದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಭಾರತೀಯ ಸೇನಾನಿಗಳಿಗೆ 
ತಾವೂ ಏನಾದರೂ ಕೊಡುಗೆ ನೀಡಬೇಕು, ಅವರ ಸೇವೆಗೆ ತಮ್ಮ ಕೈಲಾದ ಕೃತಜ್ಞತೆ ಸಲ್ಲಿಸಬೇಕು ಎಂದು ನಿರ್ಧರಿಸಿ ಹೋಟೆಲ್‌
ಮಾಲೀಕರು ಈ ರಿಯಾಯಿತಿ ಘೋಷಿಸಿದ್ದಾರೆ. 

ಏನು ಪ್ರೇರಣೆ?: ನಾಲ್ಕಾರು ತಿಂಗಳ ಹಿಂದೆ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಉತ್ತರ ಭಾರತದ ರೆಸ್ಟೋರೆಂಟ್‌ ಒಂದರಲ್ಲಿ ಸೈನಿಕರಿಗೆ
ರಿಯಾಯಿತಿ ದರದಲ್ಲಿ ಸೇವೆ ನೀಡುವ ಛಾಯಾಚಿತ್ರದ ಸಂದೇಶ ಬಂದಿತ್ತು. ಹೋಟೆಲ್‌ ಮಾಲೀಕ ಶರತ್‌ ಅವರು ತಮ್ಮ ಹಿರಿಯಣ್ಣ 
ಚಂದು ಶೆಟ್ಟಿ ಅವರಿಗೆ ಈ ಸಂದೇಶ ತೋರಿಸಿ, ತಾವೂ ತಮ್ಮ ಹೋಟೆಲ್‌-ಲಾಡ್ಜ್ನಲ್ಲಿ ಇಂಥ ಸೇವೆ ನೀಡಬಾರದೇಕೆ ಎಂದರು. ಬಳಿಕ ಚಂದು ಶೆಟ್ಟಿ ಅವರು ತಮ್ಮ ಆತ್ಮೀಯ ಸ್ನೇಹಿತರಾದ ಸುನೀಲಗೌಡ ಪಾಟೀಲ ಅವರೊಂದಿಗೆ ಈ ಕುರಿತು ಚರ್ಚಿಸಿ, ಸೈನಿಕರಿಗೆ ರಿಯಾಯ್ತಿ ಹಾಗೂ ಹುತಾತ್ಮರ ಕುಟುಂಬಕ್ಕೆ ಸಂಪೂರ್ಣ ಉಚಿತ ಸೇವೆ ನೀಡಲು ನಿರ್ಧರಿಸಿದರು.

ಮಾಹಿತಿ ಫ‌ಲಕ ಅಳವಡಿಕೆ: ಸೈನಿಕರಿಗೆ ಸೇವೆ ನೀಡುವ ಈ ನಿರ್ಧಾರ ಜೂನ್‌ ಆರಂಭದಲ್ಲಿ ಅನುಷ್ಠಾನಕ್ಕೆ ಬಂದಿದೆ. ಇದಕ್ಕಾಗಿ ಅವರು ಪ್ರಚಾರ ಮಾಡುವುದಕ್ಕೂ ಹೋಗಿಲ್ಲ. ಸೈನಿಕರಿಗೆ ಹಾಗೂ ಕುಟುಂಬದವರಿಗೆ ಗೊತ್ತಾಗಲಿ ಎಂಬ ಕಾರಣಕ್ಕೆ ಉಪಾಹಾರ ಮಂದಿರ ಹಾಗೂ ವಸತಿಗೃಹದ ಎದುರು ತಮ್ಮ ಹೋಟೆಲ್‌ ನಲ್ಲಿ ಭಾರತೀಯ ಸೈನಿಕರಿಗೆ ದೊರೆಯುವ ರಿಯಾಯ್ತಿಗಳ ಮಾಹಿತಿ ಫಲಕ ಅಳವಡಿಸಿದ್ದಾರೆ. ಸದ್ಯ ನಾಲ್ಕಾರು ಸೈನಿಕರು ಈ ಸೌಲಭ್ಯ ಪಡೆದಿದ್ದು, ಭವಿಷ್ಯದಲ್ಲಿ ತಮ್ಮ ಹೋಟೆಲ್‌ ಸೇವೆ ಪಡೆದ ಸೈನಿಕರ ಪ್ರತ್ಯೇಕ ದಾಖಲೀಕರಣ ಮಾಡಲು ಯೋಜಿಸಿದ್ದಾರೆ. ಫಲಕದಲ್ಲಿ ತಮ್ಮ ಹೋಟೆಲ್‌ಗೆ ಭೇಟಿ ನೀಡುವ ಪ್ರತಿಯೊಬ್ಬ ಗ್ರಾಹಕರೂ ಅತ್ಯಮೂಲ್ಯ. ಆದರೆ ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸುವುದು ಇನ್ನೂ ಮೌಲಿಕ. ಭಾರತೀಯ ಸೈನಿಕರಿಗೆ ನಮ್ಮ ಅತ್ಯಂತ ಹೆಮ್ಮೆಯ ಗೌರವ ಎಂದು ಬರೆದಿದ್ದರೆ, ತಮ್ಮ ಹೋಟೆಲ್‌ನಿಂದ ಸೈನಿಕರಿಗೆ ಅತ್ಯಲ್ಪ ಸೇವೆ ನೀಡಲು ಹೆಮ್ಮೆ ಎನಿಸುತ್ತದೆ ಎಂದು ಬರೆಸಿದ್ದು
ಗಮನ ಸೆಳೆಯುತ್ತಿದೆ.  ವಿಜಯಪುರದ ಲಲಿತ್‌ ಮಹಲ್‌ ಹೋಟೆಲ್‌ನಲ್ಲಿ ನೀಡುತ್ತಿರುವ ಈ ಸೇವೆ ಸಾಮಾಜಿಕ ಜಾಲತಾಣದಲ್ಲಿ ಹರಡಿಕೊಳ್ಳುತ್ತಿದೆ. ಇದನ್ನು ಗಮನಿಸಿದ ಮುಂಬೈನ ಡ್ರೀಮ್‌ ರೆಸ್ಟೋರೆಂಟ್‌ ಒಂದು ವಾರದಿಂದ ಇದೇ ಮಾದರಿಯ ಸೇವೆ ನೀಡಲು ಮುಂದಾಗಿದೆ. ಲಲಿತ ಮಹಲ್‌ ಹೋಟೆಲ್‌ ಸೇವೆಗಾಗಿ ಸೈನಿಕರು ದೂ.ಸಂ. 08352-245555, 241555 ಸಂಪರ್ಕಿಸಬಹುದು.

Advertisement

ಭಾರತೀಯ ಸೈನಿಕರ ತ್ಯಾಗ-ಬಲಿದಾನಕ್ಕೆ ಬೆಲೆ ಕಟ್ಟಲಾಗದು. ಅವರಿಗೆ ನಾವು ನೀಡುತ್ತಿರುವ ಅಳಿಲು ಸೇವೆ ಇದು.
ಇದಕ್ಕೆ ಪ್ರಚಾರದ ಅಗತ್ಯವಿಲ್ಲ. ಸೈನಿಕರು-ಕುಟುಂಬ ಸದಸ್ಯರ ಮಾಹಿತಿಗಾಗಿ ಫಲಕ ಅಳವಡಿಸಿದ್ದೇವೆ ಅಷ್ಟೇ. ಸೈನಿಕರಿಗೆ ನಮ್ಮ ಕೈಲಾದ ಸೇವೆಯ ಗೌರವ ಸಲ್ಲಿಸಲು ನಮಗೆ ಹೆಮ್ಮೆ ಅನಿಸುತ್ತದೆ.
ಚಂದು ಶೆಟ್ಟಿ, ಶರತ್‌ ಶೆಟ್ಟಿ ಮಾಲೀಕರು, ಹೋಟೆಲ್‌ ಲಲಿತ ಮಹಲ್‌, ವಿಜಯಪುರ

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next