ಉದ್ಯಾವರ: ಈ ಬಾರಿಯೂ ತೆನೆ ಹಬ್ಬಕ್ಕೆ ಉದ್ಯಾವರ ಕುತ್ಪಾಡಿಯ ಜೂಲಿಯನ್ ದಾಂತಿ ಅವರ ಅರ್ಧ ಎಕರೆ ಗದ್ದೆಯಲ್ಲಿ ತೆನೆಭರಿತ ಪೈರಿನ ಫಸಲು ಸಿದ್ಧಗೊಂಡಿದೆ.
ಜೂಲಿಯನ್ ದಾಂತಿ ಅವರು ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವರ ಅವಭೃಥೋತ್ಸವ ದಿನದ ಸಾಂಸ್ಕೃತಿಕ ವೈಭವದ ಕಾರ್ಯಕ್ರಮಗಳಿಗೂ ಈ ಕೃಷಿ ಗದ್ದೆಯ ಪ್ರದೇಶದಲ್ಲಿ ಸ್ಥಳಾವಕಾಶ ಒದಗಿಸುವ ಜತೆಗೆ ಚೌತಿ ಹಬ್ಬದ ಸಂದರ್ಭ ಕಟ್ಟುವ ತೆನೆ ಹಬ್ಬಕ್ಕೂ ತಮ್ಮ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಯನ್ನು ಉಚಿತವಾಗಿ ಒದಗಿಸಲಿದ್ದಾರೆ.
ಈ ತೆನೆ ಹಬ್ಬಕ್ಕಾಗಿಯೇ ತನ್ನ ಅರ್ಧ ಎಕರೆ ಗದ್ದೆಯಲ್ಲಿ ಎಪ್ರಿಲ್-ಮೇ ತಿಂಗಳಲ್ಲಿಯೇ ನಾಟಿ ಕೆಲಸ ಪೂರೈಸುತ್ತಾರೆ. ಸುಡು ಮಣ್ಣು, ಹಟ್ಟಿಗೊಬ್ಬರ ಬಳಸಿ ಸಾವಯವ ಕೃಷಿಯನ್ನು ಹೆಚ್ಚು ನೆಚ್ಚಿಕೊಂಡಿದ್ದು, ಸಮರ್ಪಕ ಮಳೆ ಸುರಿಯುವ ಮುನ್ನವೇ ಪಂಪ್ ಮೂಲಕ ಗದ್ದೆಗೆ ನೀರು ಹಾಯಿಸಿ ಕೃಷಿ ಚಟುವಟಿಕೆ ನಿರತರಾಗುವ ಇವರ ಸೇವಾ ನಿಷ್ಠೆಯಲ್ಲಿ ಬೆಳೆದ ಈ ಗದ್ದೆಯ ತೆನೆ ಭರಿತ ಫಸಲನ್ನು ತೆನೆ ಹಬ್ಬ ಹಾಗೂ ಬಾನಾಡಿಗಳ ಆಹಾರಕ್ಕಾಗಿ ಮೀಸಲಿಡುವುದು ಸರ್ವತ್ರ ಮಾದರಿಯಾಗಿದೆ.
ಕೃಷಿ ಮಣ್ಣಿನ ಕಂಪಿನ ಫಸಲನ್ನು ಕಳೆದ 25 ವರ್ಷಗಳಿಂದಲೂ ರಾಷ್ಟ್ರ, ಅಂತಾರಾಷ್ಟ್ರದಲ್ಲಿನ ಇಗರ್ಜಿಗಳಿಗೆ ಕನ್ಯಾ ಮರಿಯಮ್ಮನ ಜನ್ಮದಿನದಂದು ಆಚರಿಸುವ ತೆನೆ (ಕದಿರು)ಕಟ್ಟಲು ಹಾಗೂ ದೇಗುಲಗಳು, ಸಂಘ, ಸಂಸ್ಥೆಗಳು, ಕೌಟುಂಬಿಕವಾಗಿಯೂ ಫಸಲು ಭರಿತ ತೆನೆಯನ್ನು ಒದಗಿಸುತ್ತಾ ಬಂದಿರುವ ಉದ್ಯಾವರ ಕುತ್ಪಾಡಿಯ ಜೂಲಿಯನ್ ದಾಂತಿ ಸಮಗ್ರ ಕೃಷಿಕರಾಗಿಯೂ ಗುರುತಿಸಿಕೊಂಡಿರುತ್ತಾರೆ.
ಜಾತಿ-ಧರ್ಮದ ಭೇದಭಾವದ ನಡುವೆಯೂ ಧಾರ್ಮಿಕ ಸೌಹಾರ್ದತೆಯು ಸಮಾಜದ ಸಾಮರಸ್ಯಕ್ಕೆ ಆವಶ್ಯಕ ಎನ್ನುವುದಕ್ಕೆ ಮಾದರಿ ಸೇವೆಯಾಗಿದೆ.