ಜಮೈಕಾ : ಕೋವಿಡ್ ಎನ್ನುವ ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ಹೆದರಿಸಿ ಮೂಲೆಗೆ ಕೂರಿಸಿತು. ಕೋವಿಡ್ ಮಾರಕ ರೋಗಕ್ಕೆ ನಲುಗದಿರುವ ಕ್ಷೇತ್ರಗಳೇ ಇಲ್ಲ. ಕೋವಿಡ್ ಕಾಣಿಸಿಕೊಂಡ ನಂತರವಂತೂ ಪ್ರವಾಸೋದ್ಯಮ, ಹೋಟೆಲ್ ಉದ್ಯಮ ನೆಲಕಚ್ಚಿದವು. ಇವು ಮೊದಲಿನಂತಾಗಲೂ ಇನ್ನೂ ಅದೆಷ್ಟು ದಿನಗಳ ಕಾಲ ಕಾಯಬೇಕೋ ಗೊತ್ತಿಲ್ಲ.
ಸದ್ಯ ಕೋವಿಡ್ ಅಬ್ಬರ ಕೊಂಚ ತಗ್ಗಿದ್ದರೂ ಕೂಡ ಜನರು ಪ್ರವಾಸದಂತಹ ಸಾಹಸಕ್ಕೆ ಕೈ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಮೋಜು ಮಸ್ತಿ ಹಾಗೂ ಮಧುಚಂದ್ರಕ್ಕೆ ವಿದೇಶಕ್ಕೆ ಹಾರುವುದು ತೀರ ವಿರಳವಾಗಿದೆ. ಮನೆಯಿಂದ ಹೊರಗೆ ಕಾಲಿಡಲು ನೂರು ಬಾರಿ ಯೋಚಿಸುವಂತೆ ಮಾಡಿತು ಕೋವಿಡ್ ಎನ್ನುವ ಮಾರಕ ಕಾಯಿಲೆ.
ಮೊದಲೇ ಹೇಳಿದಂತೆ ಕೋವಿಡ್ ಸೃಷ್ಟಿಸಿದ ಅವಾಂತರಕ್ಕೆ ಹೆಚ್ಚು ನಷ್ಟ ಎದುರಿಸಿದ್ದ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮವು ಒಂದು. ಇದರ ಜತೆಗೆ ಸುಂದರ ಹಾಗೂ ಪ್ರೇಕ್ಷಣಿಯ ಸ್ಥಳಗಳಲ್ಲಿರುವ ಐಷಾರಾಮಿ ಹೋಟೆಲ್ ಗಳೂ ಸಹ ಭರಿಸಲಾರದ ನಷ್ಟದ ಸುಳಿಯಲ್ಲಿ ಸಿಲುಕಿದವು. ಸದ್ಯ ಕೋವಿಡ್ ಸಂಕೋಲೆ ತೊಡೆದು ಹಾಕಿ ಮತ್ತೆ ಮೊದಲಿನಂತೆ ಚೇತರಿಕೆ ಕಾಣಲು ಜಮೈಕಾದಲ್ಲಿಯ ಹೋಟೆಲ್ ಉದ್ಯಮ ಮುಂದಾಗಿದೆ. ಇದಕ್ಕೆ ಹೊಸ ಹೊಸ ಐಡಿಯಾಗಳನ್ನು ಕಾರ್ಯರೂಪಕ್ಕೆ ತಂದಿವೆ.
ಕೋವಿಡ್ ಫಾಸಿಟಿವ್ ಹೊಂದಿರುವವರಿಗೆ ಉಚಿತ ರೂಂ :
ಪ್ರವಾಸಿಗಳ ತಾಣ ಮೆಕ್ಸಿಕೊ ಮತ್ತು ಜಮೈಕಾದಲ್ಲಿರುವ ಚೈನ್ ಹೆಸರಿನ ಐಷಾರಾಮಿ ಹೋಟೆಲ್ ತನ್ನ ಉದ್ಯಮ ಮೊದಲಿನಂತಾಗಲೂ ಹೊಸ ಪ್ಲ್ಯಾನ್ ಮಾಡಿದೆ. ಈ ಎರಡು ದೇಶಗಳಲ್ಲಿರುವ ತನ್ನ 10 ಕ್ಕೂ ಹೆಚ್ಚು ದುಬಾರಿ ರೆಸಾರ್ಟ್ ಹಾಗೂ ಹೋಟೆಲ್ ಗಳಲ್ಲಿ 14 ದಿನಗಳ ವರೆಗೆ ಉಚಿತವಾಗಿ ವಾಸ ಮಾಡಲು ಅವಕಾಶ ನೀಡುತ್ತಿದೆ. ಆದರೆ, ಅದಕ್ಕೊಂದು ಕಟ್ಟಪ್ಪನೆ ವಿಧಿಸಿದೆ. ಅದು ಏನಂದರೆ, ಕೋವಿಡ್ ಫಾಸಿಟಿವ್ ಹೊಂದಿದವರಿಗೆ ಮಾತ್ರ ಇಲ್ಲಿ ಉಚಿತ ರೂಂ ದೊರೆಯಲಿದೆ.
ಹೌದು, ಕೇಳಲು ಅಚ್ಚರಿಯಾದರೂ ಇದು ಸತ್ಯ. ಕೋವಿಡ್ ಲಕ್ಷಣ ಹೊಂದಿರುವವರನ್ನ ಮನೆ ಒಳಗೆ ಬಿಟ್ಟುಕೊಳ್ಳಲು ಹಿಂದೇಟು ಹಾಕುವ ಈ ಸಮಯದಲ್ಲಿ ಉಚಿತವಾಗಿ ರೂಂ ನೀಡುವ ಆಫರ್ ಮಾಡಿದೆ ಚೈನ್ ಹೋಟೆಲ್.
ಯಾಕೆ ಈ ಆಫರ್ ?
ತನ್ನ ಈ ವಿಶೇಷ ಆಫರ್ ಕುರಿತು ಸ್ಪಷ್ಟನೆ ನೀಡಿರುವ ರೆಸಾರ್ಟ್ ಆಡಳಿತ ಮಂಡಳಿ, ಕೋವಿಡ್ ಹಿನ್ನೆಲೆ ಮನೆಯಲ್ಲಿಯೇ ಕುಳಿತ ಪ್ರವಾಸಿಗರಿಗೆ ಉತ್ತೇಜನ ಹಾಗೂ ಧೈರ್ಯ ತುಂಬುವುದೇ ನಮ್ಮ ಉದ್ದೇಶ. ಜನರು ಯಾವುದೇ ಭಯವಿಲ್ಲದೆ ಮನೆಯಿಂದ ಹೊರಗೆ ಬರಬೇಕು. ಜತೆಗೆ ಅವರ ಹಣವು ಉಳಿತಾಯವಾಗಬೇಕು ಎಂದಿದೆ.
14 ದಿನಗಳ ನಂತರವೂ ಕೋವಿಡ್ ಕಾಣಿಸಿಕೊಂಡರೆ ?
ಇನ್ನು ಈ ರೆಸಾರ್ಟ್ ನಲ್ಲಿ ಇರಬಯಸುವ ಕೋವಿಡ್ ಲಕ್ಷಣವುಳ್ಳವರಿಗೆ ಮತ್ತೊಂದು ಅದ್ಭುತ ಅವಕಾಶ ಕಲ್ಪಿಸುತ್ತಿದೆ. 14 ದಿನಗಳ ನಂತರ ರೂಮ್ ಖಾಲಿ ಮಾಡುವ ವೇಳೆ ಕೋವಿಡ್ ಪರೀಕ್ಷೆ ನಡೆಸುವ ವ್ಯವಸ್ಥೆ ಇದೆ. ಒಂದು ವೇಳೆ ಆಗಲೂ ಕೋವಿಡ್ ಫಾಸಿಟಿವ್ ಬಂದರೆ ಮತ್ತೆ ಎರಡು ವಾರಗಳ ಕಾಲ ಉಚಿತವಾಗಿ ಈ ಹೋಟೆಲ್ ನಲ್ಲಿ ಉಳಿದುಕೊಳ್ಳಲು (ಕ್ವಾರೆಂಟೈನ್ ) ಅವಕಾಶ ನೀಡಿದೆ. ಆದರೆ, ಈ 14 ದಿನಗಳ ನಂತರ ಮತ್ತೆ ಫಾಸಿಟಿವ್ ಕಾಣಿಸಿಕೊಂಡರೆ ರಿಯಾಯಿತಿ ನೀಡಿದ್ದು ಅರ್ಧ ಶುಲ್ಕ ಪಾವತಿಸುವ ಅವಕಾಶ ಒದಗಿಸಿದೆ.
ಈ ಹೋಟೆಲ್ ಹಿನ್ನೆಲೆ ಏನು ?
ಚೈನ್, ಮೆಕ್ಸಿಕೊ ಮತ್ತು ಜಮೈಕಾ ದೇಶಗಳಲ್ಲಿ ಕಳೆದ ಮೂರು ದಶಕಗಳಿಂದ ಉತ್ತಮ ಹೆಸರು ಸಂಪಾದಿಸಿದೆ. ಈ ಎರಡು ದೇಶಗಳಲ್ಲಿ ಪ್ರಮುಖ ಪ್ರವಾಸಿ ತಾಣಗಳಲ್ಲಿ ಐಷಾರಾಮಿ ರೆಸಾರ್ಟ್ ಹಾಗೂ ಹೋಟೆಲ್ ಹೊಂದಿದೆ.