ಚನ್ನಪಟ್ಟಣ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಿಮಿತ್ತ ಇ-ಗ್ರಂಥಾಲಯಕ್ಕೆ ಉಚಿತ ನೋಂದಣಿ ಆಭಿಯಾನ ಆರಂಭಗೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳ ಬೇಕು ಎಂದು ಜಿಲ್ಲಾ ಗ್ರಂಥಾಲಯ ಕೇಂದ್ರದ ಮುಖ್ಯ ಗ್ರಂಥಾಲಯ ಅಧಿಕಾರಿ ಕೆ.ಎಸ್. ಮಮತಾ ತಿಳಿಸಿದರು.
ಪಟ್ಟಣದ ಡಿ.ಎ.ಆರ್. ಪೊಲೀಸ್ ಮೈದಾನದಲ್ಲಿ ಚನ್ನಪಟ್ಟಣ ಶಾಖಾ ಗ್ರಂಥಾಲಯ ಹಾಗೂ ಡಿ.ಎ.ಆರ್ ಪೊಲೀಸ್ ಸೇವಾ ಕೇಂದ್ರ ಗ್ರಂಥಾಲಯದಸಹಯೋಗದೊಂದಿಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ , ಪೊಲೀಸ್ ತರಬೇತಿ ಸಿಬ್ಬಂದಿಗೆಏರ್ಪಡಿಸಿದ್ದವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವ ಜನರಲ್ಲಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಮನೋಭಾವ ಹುಟ್ಟು ಹಾಕುವ ಆಶಯವನ್ನು ಗ್ರಂಥಾಲಯ ಇಲಾಖೆ ಹೊಂದಿದೆ. ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದಡಾ.ಸತೀಶ್ ಕುಮಾರ ಎಸ್. ಹೊಸಮನಿ,ಕೊರೊನಾ ವೇಳೆ ಡಿಜಿಟಲ್ ಗ್ರಂಥಾಲಯ ಅನುಷ್ಠಾನಕ್ಕೆ ಉಚಿತ ನೋಂದಣಿಮಾಡಲುಆದೇಶ ನೀಡಿದ್ದರಿಂದ, ರಾಮನಗರ ಜಿಲ್ಲೆಯಲ್ಲಿ 32,582 ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಜಿಲ್ಲೆ ರಾಜ್ಯದಲ್ಲಿ 4ನೇ ಸ್ಥಾನದಲ್ಲಿರುವುದು ಸಂತಸದ ಸಂಗತಿ. ಸಾರ್ವಜನಿಕರು ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡಲ್ಲಿ, ಸಮಾಜದ ವಿಕಾಸ ಸಾಧ್ಯ ಎಂದರು.
ಮನೋವಿಕಾಸ: ಡಿ.ಎ.ಆರ್. ಪೊಲೀಸ್ ನಿರೀಕ್ಷಕ ಎ. ರವಿ ಮಾತನಾಡಿ,ಯುವ ಜನರ ಮನೋವಿಕಾಸಕ್ಕೆ ಗ್ರಂಥಾಲಯಗಳು ಸಹಕಾರಿ. ಸಾಹಿತ್ಯದ ಓದಿನಿಂದ ವ್ಯಕ್ತಿ ಪರಿಪೂರ್ಣನಾಗುತ್ತಾನೆ ಎಂದರು.
ಚನ್ನಪಟ್ಟಣ ಶಾಖಾ ಗ್ರಂಥಾಲಯದ ಸಹಾಯಕರಾದ ಸಿ. ಮಂಗಳ ಗೌರಮ್ಮ ಮಾತನಾಡಿ, ಗ್ರಂಥಾಲಯಗಳಲ್ಲಿ ಅತ್ಯುತ್ತಮ ಪುಸ್ತಕಗಳು ಲಭ್ಯವಿದೆ. ಸ್ಪರ್ಧಾತ್ಮಕ ಪರೀಕ್ಷೆ, ಸಂಶೋಧನೆ, ಜ್ಞಾನ,-ವಿಜ್ಞಾನಕ್ಕೆ ನೆರವಾಗುವ ಅನೇಕಾನೇಕ ಕೃತಿಗಳ ಭಂಡಾರವನ್ನು ಓದುಗರು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪೊಲೀಸ್ ತರಬೇತಿ ಸಿಬ್ಬಂದಿಯ 50 ಸ್ಪರ್ಧಿಗಳು ಪ್ರಬಂಧ,ಆಶುಭಾಷಣ ಮತ್ತು ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಹಿರಿಯ ಗಾಯಕಿ ಶಾರದಾ ನಾಗೇಶ್, ಲಕ್ಷ್ಮಣ್ ಮತ್ತು ಮಹೇಶ್ ಮೌರ್ಯ ತೀರ್ಪುಗಾರರಾಗಿದ್ದರು. ಸೇವಾಕೇಂದ್ರದ ಜಯ ಲಿಂಗಯ್ಯ, ಡಿ.ಎ.ಆರ್. ಪೊಲೀಸ್ ಸಿಬ್ಬಂದಿ ವರ್ಗ ಹಾಜರಿದ್ದರು.