Advertisement
ದೇಶಾದ್ಯಂತ 142ಕ್ಕೆ ಏರಿಕೆ ಅತ್ತ ಮಹಾರಾಷ್ಟ್ರ, ಕೇರಳ, ಲಡಾಖ್‌ಗಳಲ್ಲಿ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಭಾರತದಲ್ಲಿ ಒಟ್ಟಾರೆಯಾಗಿ ಕೊರೊನಾ ಪೀಡಿತರ ಸಂಖ್ಯೆ 142ಕ್ಕೆ ಏರಿದೆ. ಸದ್ಯ ಕೇಂದ್ರ ಆರೋಗ್ಯ ಸಚಿವಾಲಯ 137 ಪ್ರಕರಣಗಳ ಬಗ್ಗೆಯಷ್ಟೇ ಹೇಳಿದ್ದರೂ ಮಹಾರಾಷ್ಟ್ರದಲ್ಲಿನ ಒಟ್ಟಾರೆ ಸಂಖ್ಯೆಗಳನ್ನು ಅಪ್ ಡೇಟ್ ಮಾಡಿಲ್ಲ.
ದೇಶಾದ್ಯಂತ 54 ಸಾವಿರ ಮಂದಿ ಮೇಲೆ ಸಾಮುದಾಯಿಕ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ಹರ್ಷ ವರ್ಧನ್ ಮಂಗಳವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಸಾರ್ವಜನಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದೂ ಹೇಳಿದ್ದಾರೆ. ಖಾಸಗಿ ಲ್ಯಾಬ್‌ಗಳಿಗೆ ಅವಕಾಶ
ಕೊರೊನಾ ಭೀತಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸೋಂಕು ಪತ್ತೆ ಸಾಮರ್ಥ್ಯ ಹೆಚ್ಚಳಕ್ಕಾಗಿ ಮಾನ್ಯತೆ ಪಡೆದಿರುವ ಖಾಸಗಿ ಪ್ರಯೋಗಾಲಯಗಳಿಗೂ ಕೊರೊನಾ ಪರೀಕ್ಷೆ ನಡೆಸುವ ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲ, ಕೋವಿಡ್-19 ಪರೀಕ್ಷೆಯನ್ನು ಉಚಿತವಾಗಿಯೇ ಮಾಡಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಸದ್ಯ ಸರಕಾರಿ ಪ್ರಯೋಗಾಲಯಗಳು ಮಾತ್ರ ಪರೀಕ್ಷೆ ನಡೆಸುತ್ತಿವೆ. ಸದ್ಯದಲ್ಲೇ ಕೇಂದ್ರ ಸರಕಾರ 60 ಖಾಸಗಿ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಅನುಮತಿ ನೀಡಲಿದೆ.
Related Articles
ಸೋಮವಾರ ರಾತ್ರಿಯಷ್ಟೇ ಕರ್ನಾಟಕದಲ್ಲಿ ಮತ್ತೆರಡು ಪ್ರಕರಣಗಳು ದೃಢಪಟ್ಟಿದ್ದು, ಮಂಗಳವಾರದ ವೇಳೆಗೆ ಮತ್ತೂಂದು ಬಯಲಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಕಳೆದ ವಾರ ದುಬಾೖಯಿಂದ ಬೆಂಗಳೂರಿಗೆ ಹಿಂದಿರುಗಿದ್ದ 67 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಮಾ.3ರಿಂದ 8ರ ವರೆಗೆ ದುಬಾೖಯಲ್ಲಿ ಇದ್ದ ಈ ಮಹಿಳೆ ಗೋವಾಕ್ಕೆ ಬಂದು ಅಲ್ಲಿಂದ ದೇಶೀ ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದರು. ಅವರಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ಅವರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಅವರೊಂದಿಗಿನ ಪ್ರಥಮ ಮತ್ತು ಎರಡನೇ ಹಂತದಲ್ಲಿ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ.
Advertisement
ದಂತ ಸೇವೆಗಳು ಬಂದ್ ದಂತ ಚಿಕಿತ್ಸೆ ಅತ್ಯಗತ್ಯ ಸೇವೆ ಅಲ್ಲ. ಮುಂದಿನ ಆದೇಶದವರೆಗೆ ರಾಜ್ಯದ ಎಲ್ಲ ದಂತ ಚಿಕಿತ್ಸಾ ಕೇಂದ್ರ ಮುಚ್ಚಲು ಸೂಚನೆ ನೀಡಿದ್ದೇವೆ. ಈ ಚಿಕಿತ್ಸಾ ಕ್ರಮದಲ್ಲಿ ವೈದ್ಯರಿಗೆ ರೋಗಿಗೆ ಅಂತರ ಕಡಿಮೆ ಇರುತ್ತದೆ. ಹಾಗಾಗಿ ಈ ನಿರ್ಧಾರ ಕೈಗೊಂಡಿದ್ದೇವೆ. ಫಿಸಿಯೋಥೆರಪಿ ಸದ್ಯಕ್ಕೆ ಮುಚ್ಚುವುದಿಲ್ಲ, ಪರಿಸ್ಥಿತಿ ನೋಡಿ ನಿರ್ಧರಿಸಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್ ಹೇಳಿದ್ದಾರೆ. ಎಸಿ ಆಫ್ ಮಾಡಿ
ಹವಾನಿಯಂತ್ರಿತ (ಎಸಿ) ಸ್ಥಳದಲ್ಲಿ ಹೆಚ್ಚಿನ ಜನರು ಇದ್ದರೆ ವೈರಾಣುಗಳು ಹೆಚ್ಚು ಕಾಲ ಸಕ್ರಿಯವಾಗಿದ್ದು, ಸಾಕಷ್ಟು ಜನರಿಗೆ ಹರಡುವ ಸಾಧ್ಯತೆ ಇದೆ. ಹಾಗಾಗಿ ರೆಸ್ಟೋರೆಂಟ್‌ಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಬಂದ್ ಮಾಡಲು, ಕುರ್ಚಿಗಳ ಮಧ್ಯೆ ಒಂದು ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಮಾಲಕರಿಗೆ ಸೂಚಿಸಲಾಗಿದೆ ಎಂದು ಡಾ| ಸುಧಾಕರ್ ತಿಳಿಸಿದ್ದಾರೆ. ಕೆಎಸ್‌ಆರ್‌ಟಿಸಿಗೆ ನಷ್ಟ
ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ರಸ್ತೆ ಸಾರಿಗೆ ನಿಗಮಕ್ಕೆ ಭಾರೀ ನಷ್ಟವಾಗಿದೆ. ಜತೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ತೆರಳುವ 818 ಬಸ್‌ಗಳ ಸಂಚಾರ ರದ್ದು ಮಾಡಲಾಗಿದೆ. ಮಂಗಳವಾರ ರಾತ್ರಿಯಿಂದಲೇ ಇದು ಜಾರಿಗೆ ಬಂದಿದೆ. ಕಲಬುರಗಿ ವೈದ್ಯನಿಗೂ ಸೋಂಕು
ಕೊರೊನಾ ಸೋಂಕಿನಿಂದ ಮೃತಪಟ್ಟ ಕಲಬುರಗಿಯ 76 ವರ್ಷದ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ವೈದ್ಯನಿಗೂ ಕೊರೊನಾ ಸೋಂಕು ಹರಡಿದೆ. ಈ ಮೂಲಕ ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಮೂರಕ್ಕೆ ಏರಿಕೆಯಾದಂತಾಗಿದೆ. ವೃದ್ಧನ ಸಾವಿಗೂ ಮುನ್ನ ಮನೆಯಲ್ಲಿ ಈ ವೈದ್ಯರು ಚಿಕಿತ್ಸೆ ನೀಡಿದ್ದರು ಎಂದು ಜಿಲ್ಲಾಧಿಕಾರಿ ಶರತ್ ಬಿ. ಖಚಿತಪಡಿಸಿದ್ದಾರೆ. ಕೊರೊನಾ ಸೋಂಕು ಪೀಡಿತ ವೈದ್ಯನನ್ನು ಇಎಸ್‌ಐ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಐಸೋಲೇಟೆಡ್ ವಾರ್ಡ್‌ಗೆ ರವಾನಿಸಲಾಗಿದೆ. ಅಲ್ಲದೆ ಈ ವೈದ್ಯನೊಂದಿಗೆ ಸಂಪರ್ಕ ಹೊಂದಿದ್ದವರನ್ನು ಗುರುತಿಸಲಾಗುವುದು ಮತ್ತು ವೈದ್ಯನ ಕುಟುಂಬದವರನ್ನು ಮನೆಯಲ್ಲೇ ಪ್ರತ್ಯೇಕಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇರಾನ್‌ನಲ್ಲಿ 250 ಭಾರತೀಯರಿಗೆ ಸೋಂಕು
ಕಳೆದ ಫೆಬ್ರವರಿಯಿಂದ ಇರಾನ್‌ನ ಖ್ವಾಂಮ್‌ನಲ್ಲಿ ಸಿಲುಕಿರುವ 250ಕ್ಕೂ ಹೆಚ್ಚು ಭಾರತೀಯರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಅವರನ್ನು ಕರೆತರಲು ಇರಾನ್‌ಗೆ ತೆರಳಿರುವ ವೈದ್ಯರ ತಂಡ ಹೇಳಿದೆ. ಈ ಪ್ರದೇಶದಲ್ಲಿ ಒಟ್ಟಾರೆ 800ಕ್ಕೂ ಹೆಚ್ಚು ಭಾರತೀಯರು ಸಿಲುಕಿದ್ದಾರೆ. ಜತೆಗೆ ಈ ಪ್ರದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿವೆ. ಆದರೆ ಕೇಂದ್ರ ಸರಕಾರವು ಈ ಬಗ್ಗೆ ಇನ್ನೂ ದೃಢಪಡಿಸಿಲ್ಲ. ಭಾರತದಲ್ಲಿ ಹಂತ – 2
ಸದ್ಯಕ್ಕೆ ಭಾರತವು 2ನೇ ಹಂತದಲ್ಲಿ ಅಂದರೆ, ಸ್ಥಳೀಯ ಮಟ್ಟದ ವ್ಯಾಪಿಸುವಿಕೆಯ ಹಂತದಲ್ಲಿದೆ. ಸದ್ಯ ಇರುವ ಮಾಹಿತಿ ಪ್ರಕಾರ, ಕೊರೊನಾ ಸೋಂಕು ಸ್ಥಳೀಯವಾಗಿ ಹಬ್ಬಿದೆಯೇ ವಿನಾ ಇನ್ನೂ ಸಾಮುದಾಯಿಕ ವ್ಯಾಪಿಸುವಿಕೆಯ ಹಂತಕ್ಕೆ ತಲುಪಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್)ಯ ಮಹಾನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ. ಮುನ್ನೆಚ್ಚರಿಕೆಗಳು
– ಕಳೆದ 14 ದಿನಗಳಲ್ಲಿ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಸಂಚರಿಸಿರುವ ಎಲ್ಲರೂ ಪರೀಕ್ಷೆಗೆ ಒಳಗಾಗಬೇಕು.
– ಸೋಂಕು ದೃಢಪಟ್ಟವರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳೂ ಪರೀಕ್ಷೆಗೊಳಗಾಗಬೇಕು.
– ರೋಗಿಗಳ ಪರೀಕ್ಷೆ ನಡೆಸಿರುವಂಥ ವೈದ್ಯಕೀಯ ಸಿಬಂದಿಯಲ್ಲಿ ರೋಗಲಕ್ಷಣ ಕಂಡುಬಂದರೆ ಅವರೂ ರಕ್ತ ಮತ್ತು ಗಂಟಲಿನ ದ್ರವವನ್ನು ಪರೀಕ್ಷೆಗೆ ನೀಡಬೇಕು.