ಕಾಪು: ಶಿಕ್ಷಣ ಮತ್ತು ಆರೋಗ್ಯ ಪ್ರತೀಯೊಬ್ಬರ ಅಗತ್ಯತೆಯಾಗಿದೆ. ಶಾಸಕನಾಗಿ ಜನರ ಬೇಡಿಕೆಗೆ ಅನುಗುಣವಾಗಿ ಸರಕಾರದ ಅನುದಾನವನ್ನು ತಂದು ಮೂಲ ಸೌಕರ್ಯಗಳ ಜೋಡಣೆಗೆ ನೀಡುವಷ್ಟೇ ಮಹತ್ವವನ್ನು ಕಾಪು ಕ್ಷೇತ್ರದ ಜನತೆಯ ಬೇಡಿಕೆಗೆ ಅನುಗುಣವಾಗಿ ಆರೋಗ್ಯ ಮತ್ತು ಶೈಕ್ಷಣಿಕ ಅಭಿವೃದ್ಧಿಗೂ ನೀಡಲು ಬದ್ಧರಿದ್ದೇನೆ. ಕ್ಷೇತ್ರದ ಜನತೆಯ ಆರೋಗ್ಯದ ಸಮಸ್ಯೆಗಳಿಗೆ ಸ್ಪಂಧಿಸಲು ಗುರ್ಮೆ ಫೌಂಡೇಷನ್ ಮೂಲಕ ಹಿಂದಿನಿಂದಲೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇದನ್ನು ಮುಂದುವರಿಸಲಾಗುವುದು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಆ. 27ರಂದು ಪೊಲಿಪು ಸರಕಾರಿ ಹಿ. ರಾ. ಸಾಲೆಯ ಆವರಣದಲ್ಲಿ ಗುರ್ಮೆ ಫೌಂಡೇಶನ್ ಕಳತ್ತೂರು, ಶತ ವಜ್ರ, ಸ್ವರ್ಣ ಸಂಭ್ರಮ ಸಮಿತಿ ಪೊಲಿಪು ಮತ್ತು ಮುಂಬೈ, ಪೊಲಿಪು ಮೊಗವೀರ ಮಹಾಸಭಾ ಪೊಲಿಪು ಮತ್ತು ಮುಂಬೈ, ಶಾಲಾ ಹಳೇ ವಿದ್ಯಾರ್ಥಿ ಸಂಘ ಪೊಲಿಪು ಮತ್ತು ಮುಂಬೈ, ಶ್ರೀ ಗಣೇಶೋತ್ಸವ ಸಮಿತಿ ಪೊಲಿಪು ಇವರ ಜಂಟಿ ಆಶ್ರಯದಲ್ಲಿ ಸುರತ್ಕಲ್ – ಮುಕ್ಕ ಶ್ರೀನಿವಾಸ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರುಗಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸುರತ್ಕಲ್ ಶ್ರೀನಿವಾಸ ವೈದ್ಯಕೀಯ ಕಾಲೇಜಿನ ಉಪಾಧ್ಯಕ್ಷ ಶ್ರೀನಿವಾಸ ರಾವ್ ಮಾತನಾಡಿ, ಕಾಪುವಿನಂತಹ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಶಿಬಿರವನ್ನು ಆಯೋಜಿಸಲು ಹೆಮ್ಮೆಯೆಂದೆನಿಸುತ್ತಿದೆ. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಮನವಿಯ ಮೇರೆಗೆ ಅವರು ಸೂಚಿಸಿದ ಗ್ರಾಮವೊಂದನ್ನು ದತ್ತು ಪಡೆದುಕೊಂಡು ಅಲ್ಲಿನ ಜನರ ಆರೋಗ್ಯ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ಅದೇ ರೀತಿಯಲ್ಲಿ ಕಮ್ಯುನಿಟಿ ಹೆಲ್ತ್ ಸೆಂಟರ್ ಮೂಲಕವಾಗಿ ಅಗತ್ಯವುಳ್ಳ ಜನರಿಗೆ ಆರೋಗ್ಯ ಸೇವೆಯನ್ನು ನೀಡಲು ಬದ್ಧರಿದ್ದೇವೆ ಎಂದರು.
ಪೊಲಿಪು ಶಿಕ್ಷಣ ಸಂಸ್ಥೆಗಳ ಶತ, ವಜ್ರ, ಸ್ವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಸರ್ವೋತ್ತಮ ಕುಂದರ್ ಪೊಲಿಪು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಅಂಚೆ ಅಧೀಕ್ಷಕ ರಮೇಶ್ ಪ್ರಭು, ಶ್ರೀನಿವಾಸ ಆಸ್ಪತ್ರೆಯ ಮೆಡಿಕಲ್ ಸೂಪರಿಂಡೆಂಟ್ ಡಾ| ಡೇವಿಡ್, ಪುರಸಭೆ ಸದಸ್ಯರಾದ ರಾಧಿಕಾ ಸುವರ್ಣ, ಅನಿಲ್ ಕುಮಾರ್, ಲತಾ ದೇವಾಡಿಗ, ಪೊಲಿಪು ಮೊಗವೀರ ಮಹಾಸಭೆಯ ಅಧ್ಯಕ್ಷ ಶ್ರೀಧರ ಕಾಂಚನ್, ಶತ ವಜ್ರ ಸ್ವರ್ಣ ಮುಂಬಯಿ ಸಮಿತಿ ಅಧ್ಯಕ್ಷ ಸುರೇಂದ್ರ ಸುವರ್ಣ, ಪೊಲಿಪು ಗಣೇಶೋತ್ಸವ ಸಮಿತಿ ಅಧ್ಯಕ್ಷ ಧನಂಜಯ ಸಾಲ್ಯಾನ್, ಮೂಳೆ ತಜ್ಞ ಡಾ. ಶಶಿರಾಜ್ ಶೆಟ್ಟಿ, ಮೊಗವೀರ ಮಹಿಳಾ ಮಂಡಳಿಯ ಅಧ್ಯಕ್ಷೆ ಕವಿತಾ ಮೆಂಡನ್, ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಪ್ರವೀಣ್ ಕುಂದರ್ ಪೊಲಿಪು, ಜಂಟಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಶಿವಲಿಂಗಯ್ಯ, ರಮಣಿ, ಗಾಯತ್ರಿ ಎಸ್. ರಾವ್ ಉಪಸ್ಥಿತರಿದ್ದರು.
ಅಂಚೆ ಇಲಾಖೆಯ ಸಹಯೋಗದೊಂದಿಗೆ ಅಂಚೆ ಇಲಾಖೆಯ ಸೇವೆಗಳ ಮಾಹಿತಿ ಅಭಿಯಾನ ಹಾಗೂ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ನಡೆಯಿತು. ಉಪ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠಲ ಭಟ್ ಅಂಚೆ ಇಲಾಖೆಯ ಕುರಿತಾದ ಮಾಹಿತಿ ನೀಡಿದರು.
ಕಾಪು ಪುರಸಭೆ ಸದಸ್ಯ ಕಿರಣ್ ಆಳ್ವ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಆರತಿ ವಾಸುದೇವನ್ ವಂದಿಸಿದರು. ಅಮಿತಾ ಮತ್ತು ಪ್ರೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.