ಚಿತ್ತಾಪುರ: ಮೇ 3ರಂದು ಉಚಿತ ಸಾಮೂಹಿಕ ವಿವಾಹ ಅದ್ಧೂರಿಯಾಗಿ ಮಾಡಲಾಗುತ್ತಿದೆ. ಸಾಮೂಹಿಕವಾಗಿ ವಿವಾಹವಾಗಲು ಹಲವಾರು ಜೋಡಿಗಳು ಸ್ವ ಇಚ್ಛೆಯಿಂದ ಹೆಸರು ನೋಂದಾಯಿಸುತ್ತಿದ್ದಾರೆ. ಕಾರ್ಯಕ್ರಮ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಬಸವ ಜಯಂತಿ, ಉಚಿತ ಸಾಮೂಹಿಕ ವಿವಾಹ ಸಮಿತಿ, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.
ಪಟ್ಟಣದ ಎಪಿಎಂಸಿ ಯಾರ್ಡ್ ಸಭಾಂಗಣದಲ್ಲಿ ಬಸವ ಜಯಂತಿ ನಿಮಿತ್ತ ಉಚಿತ ಸಾಮೂಹಿಕ ವಿವಾಹ ಕುರಿತು ಹಮ್ಮಿಕೊಂಡಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಮೇ 3ರಂದು ಬಸವ ಜಯಂತಿ ನಿಮಿತ್ತ 6ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಿದ್ದು, ಸಾಮೂಹಿಕ ವಿವಾಹವಾಗಲು ಹಲವರು ಮುಂದೆ ಬಂದಿರುವುದು ಸಂತಸ ತಂದಿದೆ ಎಂದರು.
ಎಲ್ಲ ಮದುಮಕ್ಕಳಿಗೆ ಬಟ್ಟೆ, ವಧುವಿಗೆ ತಾಳಿ, ಕಾಲುಂಗುರ ಹಾಗೂ ಮದುಮಕ್ಕಳಿಗೆ ಬಟ್ಟೆಗಳನ್ನು ಉದ್ಯಮಿ ಶೈಲಜಾ ಪ್ರಮೋದರೆಡ್ಡಿ ಯರಗಲ್ ಉಡುಗೊರೆಯಾಗಿ ನೀಡಲಿದ್ದಾರೆ. ಎಪಿಎಂಸಿ ವರ್ತಕರಿಂದ ಪ್ರಸಾದ ವ್ಯವಸ್ಥೆ ಮಾಡಲಾಗುವುದು. ಮದುಮಕ್ಕಳ ಬೀಗರು, ನೆಂಟರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಮಂಟಪ, ಅಲಂಕಾರ, ವೇದಿಕೆ, ಪ್ರಸಾದ, ಪ್ರಚಾರ ಸೇರಿದಂತೆ ಎಲ್ಲ ಸಮಿತಿಗಳನ್ನು ರಚನೆ ಮಾಡಲಾಗಿದೆ. ಮೇ 3ರಂದು ಬೆಳಗ್ಗೆ 9ಕ್ಕೆ ತಹಶೀಲ್ದಾರ್ ಕಚೇರಿಯಿಂದ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಹಾಗೂ ಜಯಂತಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ನಂತರ 12 ಗಂಟೆಗೆ ಉಚಿತ ವಿವಾಹ ಕಾರ್ಯಕ್ರಮ ಪಟ್ಟಣದ ಬಜಾಜ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಮುಖಂಡರಾದ ಚಂದ್ರಶೇಖರ ಅವಂಟಿ, ನಾಗರಾಜ ಭಂಕಲಗಿ, ಬಸವರಾಜ ಚಿನ್ನಮಳ್ಳಿ ಮಾತನಾಡಿದರು.
ವರ್ತಕರ ಸಂಘದ ಅಧ್ಯಕ್ಷ ಅಣ್ಣಾರಾವ್ ಪಾಟೀಲ ಮುಡಬೂಳ, ಚಂದ್ರಶೇಖರ ಸಾತನೂರ, ಶರಣು ಸಜ್ಜನ, ರವೀಂದ್ರ ಸಜ್ಜನಶೆಟ್ಟಿ, ಡಾ| ಚಂದ್ರಶೇಖರ ಕಾಂತಾ, ಡಾ| ಶ್ರೀನಿವಾಸರೆಡ್ಡಿ ಕಂದಕೂರ, ಡಾ| ಪ್ರಭುರಾಜ ಕಾಂತಾ, ಶ್ರೀನಿವಾಸರೆಡ್ಡಿ ಪಾಲಪ, ಕೋಟೇಶ್ವರ ರೇಷ್ಮಿ, ಶಿವರಾಜ ಪಾಳೇದ, ಸಂತೋಷ ಚೌಧರಿ, ರಮೇಶ ಬೊಮ್ಮನಳ್ಳಿ, ಶರಣಗೌಡ ಮುಡಬೂಳ, ಶಾಮ ಮುಕ್ತೇದಾರ, ಅನಿಲ ವಡ್ಡಡಗಿ, ಮಲ್ಲಿಕಾರ್ಜುನರೆಡ್ಡಿ ಇಜಾರ ಇದ್ದರು. ಶಾಂತಪ್ಪ ಚಾಳಿಕಾರ ನಿರೂಪಿಸಿದರು. ಆನಂದ ನರಬೋಳಿ ಸ್ವಾಗತಿಸಿದರು. ಅಶೋಕ ನಿಪ್ಪಾಣಿ ವಂದಿಸಿದರು.