Advertisement

ಮೀನು ಮಾರಲು ಮುಕ್ತ ಮಾರುಕಟ್ಟೆ

09:53 AM Apr 21, 2022 | Team Udayavani |

ಸುಳ್ಯ: ಸುಳ್ಯ ನಗರ ಪಂಚಾಯತ್‌ನ ಮೀನು ಮಾರುಕಟ್ಟೆ ಏಲಂ ವಿಚಾರದಲ್ಲಿ ಗಂಭೀರ ಚರ್ಚೆ ನಡೆದು ಮುಕ್ತ ಮೀನು ಮಾರುಕಟ್ಟೆ ಬಗ್ಗೆ ಸುಳ್ಯ ನಗರ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವವಾಯಿತು.

Advertisement

ಸಭೆ ನ.ಪಂ. ಅಧ್ಯಕ್ಷ ವಿನಯ ಕುಮಾರ್‌ ಕಂದಡ್ಕ ಅಧ್ಯಕ್ಷತೆಯಲ್ಲಿ ನ.ಪಂ. ಸಭಾಂಗಣದಲ್ಲಿ ನಡೆಯಿತು.

ವಿಪಕ್ಷ ಸದಸ್ಯ ಎಂ. ವೆಂಕಪ್ಪ ಗೌಡ ಮಾತನಾಡಿ, ಬೇರೆ ಬೇರೆ ವ್ಯವಸ್ಥೆಗಳನ್ನು ಏಲಂ ನಡೆಸಿರುವ ಕುರಿತು ಸಾಮಾನ್ಯ ಸಭೆಯಲ್ಲಿ ಇಡಲಾಗಿದೆ. ಆದರೆ ಮೀನು ಮಾರುಕಟ್ಟೆ ಏಲಂ ಆಗಿದ್ದರೂ ಅದನ್ನು ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಯಾಕೆ ಇಟ್ಟಿಲ್ಲ ಎಂದು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿ ಮೀನು ಮಾರುಕಟ್ಟೆಯನ್ನು ಮರು ಏಲಂಗೆ ಇಟ್ಟಿರುವ ಉದ್ದೇಶ ಏನು ಎಂದ ಕೇಳಿದರಲ್ಲದೆ ನಿಮಗೇನಾದರೂ ಪರ್ಸೆಂಟೇಜ್‌ ಬರಬೇಕೆ ಎಂದು ಪ್ರಶ್ನಿಸಿದರು. ಆದಾಯ ಹೆಚ್ಚು ಬರಬೇಕು ಎನ್ನುವ ಉದ್ದೇಶದಿಂದ ಮರು ಏಲಂಗೆ ಕರೆದಿರಬಹುದೆಂದು ಸದಸ್ಯ ರಾಧಾಕೃಷ್ಣ ರೈ ಹೇಳಿದರು.

ಅಧ್ಯಕ್ಷರು ಪ್ರತಿಕ್ರಿಯೆ ನೀಡಿ, ಈ ಹಿಂದೆ ಮೀನು ಮಾರುಕಟ್ಟೆ ಉತ್ತಮ ದರದಲ್ಲೇ ಹರಾಜಾಗಿದೆ. ವರ್ಷದ ಹಿಂದೆ ಯಾರು ಮೀನು ವ್ಯಾಪಾರ ಮಾಡುತ್ತಾರೋ ಅವರೆಲ್ಲರೂ ಸೇರಿ ವ್ಯವಸ್ಥಿತವಾಗಿ ನ.ಪಂ. ಆದಾಯ ಇಳಿಸುವ ಪ್ರಯತ್ನಗಳು ನಡೆಯಿತು. ಕಳೆದ ವರ್ಷ ಇ-ಟೆಂಡರ್‌ ಮಾಡಬೇಕೆಂದುಕೊಂಡೆವು ಆದರೆ ಆಗಿಲ್ಲ. ಈ ಬಾರಿ ಇ ಟೆಂಡರ್‌ ಹಾಕಿದೆವು. ನ.ಪಂ. ಮೂಲ ಬೆಲೆ ಇರುವುದು 8.50 ಲಕ್ಷ ರೂ. ಮೀನು ಮಾರುಕಟ್ಟೆಯನ್ನು ಏಲಂ ಪಡೆ ದವರೇ ಸ್ವಚ್ಛತೆ ಮಾಡಬೇಕೆನ್ನುವ ನಿಯಮ ಇದ್ದರೂ ಸ್ವಚ್ಛತೆ ಮಾಡುತ್ತಿಲ್ಲ. ಅದಕ್ಕಾಗಿ ಓರ್ವನನ್ನು ನೇಮಿಸುವುದು ಎಂದು ನಿರ್ಧರಿಸಿ ಅವನ ಸಂಬಳವೂ ಸೇರಿ ಒಟ್ಟು 10.68 ಲಕ್ಷ ರೂ. ನ.ಪಂ. ಮೂಲ ಬೆಲೆ ಎಂದು ಕಾಣಿಸಲಾಗಿತ್ತು.

ಟೆಂಡರ್‌ಗೆ 6 ಜನ ಅರ್ಜಿ ಸಲ್ಲಿಸಿದರೂ ಅದರಲ್ಲಿ ಇಬ್ಬರಿಗೆ ತಾಂತ್ರಿಕ ಕಾರಣದಿಂದ ಭಾಗವಹಿಸಲು ಆಗಿಲ್ಲ. ಮತ್ತೆ 4 ಜನ ಉಳಿ ದಿದ್ದರೂ ಇಬ್ಬರಿಗೆ ಆ ದಿನ ಭಾಗವಹಿಸಲು ಆಗಿಲ್ಲ. ಟೆಂಡರ್‌ ನಡೆದ ತತ್‌ಕ್ಷಣವೇ ಟೆಂಡರ್‌ ಹಾಕಿ ಭಾಗವಹಿಸಲು ಆಗದೇ ಇರುವವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇದರ ಜತೆಗೆ ಏಲಂನಲ್ಲಿ ಅಧ್ಯಕ್ಷರು, ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ದೂರು ಹೋಗಿದೆ. ಈಗ ಆಗಿರುವ ಟೆಂಡರ್‌ ಅಸೆಪ್ಟ್ ಮಾಡಿಲ್ಲ. ಅವರು ನ್ಯಾಯಾಲಯಕ್ಕೂ ಹೋಗಿದ್ದಾರೆ. ಈ ಎಲ್ಲ ಕಾರಣಗಳಿಂದ ನಾವು ಮರು ಏಲಂಗೆ ನಿರ್ಧರಿಸಿದ್ದೇವೆ ಎಂದರು.

Advertisement

ಬಳಿಕ ಈ ಕುರಿತು ಸಭೆಯಲ್ಲಿ ಅಭಿಪ್ರಾಯ ಕೇಳಿ ಓಪನ್‌ ಮಾರುಕಟ್ಟೆ ಮಾಡೋಣವೇ ಎಂದು ಅಧ್ಯಕ್ಷರು ಸಲಹೆ ಕೇಳಿದರು. ಹಾಗೆ ಮಾಡಿದರೆ ಬಡವರಿಗೆ ಕಡಿಮೆ ಬೆಲೆಗೆ ಮೀನು ಸಿಗಬಹುದು ಎಂದು ಶರೀಫ್, ರಿಯಾಜ್‌ ಸಲಹೆ ನೀಡಿದರು. ಕಾನೂನು ಪ್ರಕಾರ ಹೇಗಿದೆಯೋ ಹಾಗೆ ಮಾಡಿ. ನ.ಪಂ. ಆದಾಯ ಕುಂಠಿತ ಆಗಬಾರದು ಎಂದು ಉಮ್ಮರ್‌ ಹೇಳಿದರು.

ಸುಳ್ಯ ನಗರ ಪಂಚಾಯತ್‌ ಮುಖ್ಯಾಧಿಕಾರಿ ಎಂ.ಆರ್‌ . ಸ್ವಾಮಿ , ಎಂಜಿನಿಯರ್‌ ಶಿವಕುಮಾರ್‌, ಉಪಾಧ್ಯಕ್ಷೆ ಸರೋಜಿನಿ ಪೆಲತ್ತಡ್ಕ, ಸ್ಥಾಯೀ ಸಮಿತಿ ಅಧ್ಯಕ್ಷೆ ಶೀಲಾ ಅರುಣ್‌ ಕುರುಂಜಿ, ಸದಸ್ಯರಾದ ಬಾಲಕೃಷ್ಣ ಭಟ್‌ ಕೊಡೆಂಕಿರಿ, ರಿಯಾಜ್‌ ಕಟ್ಟೆಕಾರ್‌, ಶರೀಫ್ ಕಂಠಿ, ಬುದ್ಧ ನಾಯ್ಕ ಜಿ., ನಾರಾಯಣ ಶಾಂತಿನಗರ, ಸುಧಾಕರ ಕುರುಂಜಿಭಾಗ್‌, ಬಾಲಕೃಷ್ಣ ರೈ ದುಗಲಡ್ಕ, ವಾಣಿಶ್ರೀ ಬೊಳಿಯಮಜಲು, ಪೂಜಿತಾ ಕೆ.ಯು., ಪ್ರವಿತಾ ಪ್ರಶಾಂತ್‌, ಕಿಶೋರಿ ಶೇಟ್‌, ಶಿಲ್ಪಾ ಸುದೇವ್‌, ಸುಶೀಲಾ ಜಿನ್ನಪ್ಪ ಪೂಜಾರಿ, ನಾಮ ನಿರ್ದೇಶಿತ ಸದಸ್ಯರಾದ ಯತೀಶ್‌ ಬೀರಮಂಗಲ, ರೋಹಿತ್‌ ಕೊಯಿಂಗೋಡಿ ಉಪಸ್ಥಿತರಿದ್ದರು.

ಅಕ್ರಮ ಕಟ್ಟಡ ಕ್ರಮಕ್ಕೆ ಆಗ್ರಹ

ನ.ಪಂ. ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಅಕ್ರಮ ಕಟ್ಟಡ ನಿರ್ಮಿಸುತ್ತಿರುವವರಿಗೆ ನೋಟಿಸ್‌ ನೀಡುವುದು ಮಾತ್ರವಲ್ಲ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ಕಟ್ಟಡ ಕಟ್ಟುವಾಗಲೇ ನಿಲ್ಲಿಸಬೇಕು ಎಂದ ಸದಸ್ಯರು ತಿಳಿಸಿದರು.

ಕಂದಡ್ಕ, ಮಿಲಿಟರಿ ಗ್ರೌಂಡ್‌ ಕೆಎಫ್ಡಿಸಿ ನೌಕರರ ಕಾಲನಿಯಲ್ಲಿ ಮೂಲ ಸೌಲಭ್ಯ ಒದಗಿಸಲು ನಿಗಮದವರು ಸಹಕಾರ ನೀಡುತ್ತಿಲ್ಲ ಎಂಬ ದೂರು ಸಭೆಯಲ್ಲಿ ವ್ಯಕ್ತವಾಯಿತು. ನಿಗಮಕ್ಕೆ ಪತ್ರ ಬರೆಯಲು ನಿರ್ಧರಿಸಲಾಯಿತು.

ಇಲಾಖಾಧಿಕಾರಿಗಳು ಗೈರು

ಆಕ್ರೋಶ ಮೆಸ್ಕಾಂ, ಅರಣ್ಯ, ಸಾರಿಗೆ, ಪೊಲೀಸ್‌ ಇಲಾಖೆಯವರು ಬಾರದೇ ಇರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಪೇಟೆಯ ಪಾರ್ಕಿಂಗ್‌, ಮ್ಯಾನ್‌ಹೋಲ್‌ ಸಮಸ್ಯೆ ಬಗ್ಗೆ ಚರ್ಚಿಸಲು ಸಂಬಂಧಿಸಿದವರು ಬರಬೇಕಾಗಿತ್ತು ಎಂದು ವೆಂಕಪ್ಪ ಗೌಡರು ತಿಳಿಸಿದರು. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಸಹಕಾರ ನೀಡಿ ಕೆಲಸ ಮಾಡಿ ಎಂದು ಸದಸ್ಯರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next