ಬೆಂಗಳೂರು: ಚರ್ಚ್‌ಸ್ಟ್ರೀಟ್‌ನ ಕೆಲ ವಾಣಿಜ್ಯ ಮಳಿಗೆಗಳ ಶೆಟರ್ ಮತ್ತು ಗೋಡೆಗಳ ಮೇಲೆ ಕಿಡಿಗೇಡಿಗಳು “ನೋ ಸಿಎಎ’ “ನೋ ಎನ್‌ಆರ್‌ಸಿ’ ಹಾಗೂ “ಫ್ರೀ ಕಾಶ್ಮೀರ’ ಎಂಬ ಪ್ರಚೋದನಾಕಾರಿ ಬರಹಗಳನ್ನು ಬರೆದಿರುವ ಘಟನೆ ಮಂಗಳವಾರ ನಡೆದಿದೆ. ಆಕ್ರೋಶಗೊಂಡ ಹಿಂದೂಪರ ಸಂಘಟನೆ ಕಾರ್ಯಕರ್ತರು ಆಕ್ಷೇಪಾರ್ಹ ಹೇಳಿಕೆಗಳ ಮೇಲೆ ಕೇಸರಿ ಬಣ್ಣ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹಿಂದೂ ಪರ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಈ ಬೆನ್ನಲ್ಲೇ ಘಟನೆ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಘಟನಾ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ, ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ರಚಿಸಲಾಗಿದೆ.
ನಸುಕಿನ 3 ಗಂಟೆ ಸುಮಾರಿಗೆ ಚರ್ಚ್‌ಸ್ಟ್ರೀಟ್‌ನಲ್ಲಿ ಕೋರ್ಟ್ ವ್ಯಾಜ್ಯದಲ್ಲಿರುವ ವಾಣಿಜ್ಯ ಕಟ್ಟಡದಲ್ಲಿರುವ ಆರೇಳು ಮಳಿಗೆಗಳ ಶೆಟರ್ ಮತ್ತು ಗೋಡೆಗಳ ಮೇಲೆ ಕೆಲವರು, ನೋ ಸಿಎಎ, ನೋ ಎನ್‌ಆರ್‌ಸಿ, ಯಾವುದೇ ಕಾರಣಕ್ಕೂ ನಮ್ಮ ದಾಖಲೆಗಳನ್ನು ತೋರಿಸುವುದಿಲ್ಲ ಎಂಬ ಬರಹಗಳಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಬಗ್ಗೆಯೂ ಆಕ್ಷೇಪಾರ್ಹ ಬರಹಗಳನ್ನು ಬರೆದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಳಿಗೆಗಳ ಮುಂಭಾಗದಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹಿಂದೂ ಸಂಘಟನೆಗಳಿಂದ ಕೇಸರಿ ಲೇಪನ: ಸ್ಥಳಕ್ಕೆ ದೌಡಾಯಿಸಿದ ಬಿಬಿಎಂಪಿ ಮಾಜಿ ಸದಸ್ಯ ಶಿವಕುಮಾರ್ ನೇತೃತ್ವದಲ್ಲಿ ಬಿಜೆಪಿ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆರೋಪಿಗಳ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು. ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಪೊಲೀಸರು, ಅದರಿಂದ ಇನ್ನಷ್ಟು ಜನ ಪ್ರಚೋದನೆಗೊಳ್ಳುತ್ತಾರೆ. ಕೂಡಲೇ ಸ್ಥಳದಿಂದ ತೆರಳುವಂತೆ ಮನವೊಲಿಸಿ, ಕಾರ್ಯಕರ್ತರನ್ನು ಕಳುಹಿಸಿ ಎಲ್ಲೆಡೆ ಕಪ್ಪು ಬಣ್ಣ ಬಳಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್, ಪೌರತ್ವ ಕಾಯ್ದೆ ವಿರುದ್ಧ ಕೆಲವೊಂದು ಬರಹಗಳನ್ನು ಬರೆದಿದ್ದಾರೆ. ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿ ಸಲಾಗಿದೆ. ಎರಡು ತಿಂಗಳ ಹಿಂದೆಯೂ ಇದೇ ರೀತಿ ಘಟನೆ ನಡೆದಿತ್ತು.ಆಗ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಅದೇ ಆರೋಪಿಗಳನ್ನು ಮತ್ತೂಮ್ಮೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ. ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು.
ಪತ್ರಕರ್ತನ ಜತೆ ವಾಗ್ವಾದ: ಬಿಜೆಪಿ ಕಾರ್ಯ ಕರ್ತರು ಕೇಸರಿ ಬಣ್ಣ ಬಳಿಯುತ್ತಿದ್ದುದನ್ನು ಸ್ಥಳದಲ್ಲಿದ್ದ ಆಂಗ್ಲಪತ್ರಿಕೆಯೊಂದರ ಹಿರಿಯ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ. ಅದಕ್ಕೆ ಆಕ್ರೋಶಗೊಂಡ ಕೆಲ ಹಿಂದೂಪರ ಸಂಘಟನೆ ಕಾರ್ಯಕರ್ತರು, ನೀನ್ಯಾರು ಕೇಳುವುದಕ್ಕೆ? ನೀನು ಭಾರತೀಯನಾ? ಅಥವಾ ಬೇರೆ ದೇಶ ದವನಾ ಎಂದೆಲ್ಲ ಪ್ರಶ್ನಿಸಿ ತಳ್ಳಾಡಿದರು. ಒಂದು ಹಂತದಲ್ಲಿ ಹಲ್ಲೆಗೂ ಮುಂದಾಗಿದ್ದರು ಎಂದು ಹೇಳಲಾಗಿದೆ. ಸ್ಥಳದಲ್ಲಿದ್ದ ಪೊಲೀಸರು ಪತ್ರಕರ್ತರನ್ನು ಸಮಾಧಾನ ಪಡಿಸಿ ಕೂಡಲೇ ಬೇರೆಡೆ ಕರೆದೊಯ್ದರು.