ನವದೆಹಲಿ: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಎಂ.ಫಿಲ್ ಮತ್ತು ಪಿಎಚ್.ಡಿ ಅಧ್ಯಯನಕ್ಕೆ ಅನುಮತಿ ನೀಡದ ಹೊರತಾಗಿಯೂ ಅಧ್ಯಯನ ಪೀಠದ ಮುಖ್ಯಸ್ಥ ಡಾ.ಪುರುಷೋತ್ತಮ ಬಿಳಿಮಲೆ ಉಚಿತವಾಗಿ ಕನ್ನಡ ಭಾಷಾ ಕಲಿಕೆಯ ತರಗತಿಗಳನ್ನು ಆರಂಭಿಸಲು ಮುಂದಾಗಿದ್ದಾರೆ. ಸದ್ಯ 40 ಮಂದಿ ಆಸಕ್ತಿ ತೋರಿದ್ದಾರೆ ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿಗಳ ಜತೆಗೆ ಹೊರಗಿನವರೂ ಕನ್ನಡ ಕಲಿಯಲು ಆಸಕ್ತಿ ತೋರಿದ್ದಾರೆ.
ಈ ಕೋರ್ಸ್ ಪೂರ್ತಿಯಾದ ಬಳಿಕ ಯಾವುದೇ ರೀತಿಯ ಪ್ರಮಾಣ ಪತ್ರ ನೀಡಲಾಗುವುದಿಲ್ಲ. ಆದರೂ ಆರು ತಿಂಗಳ ಬಳಿಕ ಅವರು ಸುಲಲಿತವಾಗಿ ಕನ್ನಡ ಮಾತನಾಡಲು ಮತ್ತು ಭಾಷೆಯ ಬಗ್ಗೆ ಅರಿಯುವುದರಲ್ಲಿ ಪ್ರಾವಿಣ್ಯತೆ ಸಾಧಿಸಲಿದ್ದಾರೆ ಎಂದರು. ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಜೆ 4ಗಂಟೆಯಿಂದ 6 ಗಂಟೆಯಿಂದ ತರಗತಿಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಕನ್ನಡ ಅಧ್ಯಯನ ಪೀಠಕ್ಕಾಗಿ 12 ಸಾವಿರ ಪುಸ್ತಕಗಳು ಇರುವ ಗ್ರಂಥಾಲಯವೂ ಸಿದ್ಧಗೊಂಡಿದೆ. ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಡಾ. ಪುರುಷೋತ್ತಮ ಬಿಳಿಮಲೆ 2015ರ ಅಕ್ಟೋಬರ್‌ನಲ್ಲಿ ಜವಾಹರ್‌ಲಾಲ್ ನೆಹರೂ ವಿವಿಯಲ್ಲಿ ಕನ್ನಡ ಅಧ್ಯಯನ ಪೀಠ ಆರಂಭವಾದಾಗ ಅದರ ಮುಖ್ಯಸ್ಥರಾಗಿ ಸೇರಿದ್ದರು.
ಮೂರು ತಿಂಗಳ ಒಳಗಾಗಿ ಎಂ.ಫಿಲ್ ಮತ್ತು ಪಿಎಚ್.ಡಿ ಕೋರ್ಸ್‌ಗಳನ್ನು ಆರಂಭಿಸುವ ಗುರಿ ಹೊಂದಿದ್ದರು. ಕರ್ನಾಟಕ ಸರ್ಕಾರ ಮತ್ತು ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ ನಡುವೆ ಸಹಿ ಹಾಕಲಾಗಿರುವ ಒಪ್ಪಂದದ ಅನ್ವಯ ಈ ಪೀಠ ಆರಂಭಿಸಲಾಗಿತ್ತು. ಜತೆಗೆ 43 ಲಕ್ಷ ರೂ. ಕರ್ನಾಟಕ ಸರ್ಕಾರ ನೀಡಿದೆ.
2016ರ ಡಿಸೆಂಬರ್‌ನಲ್ಲಿ ವಿವಿ ಸೀಟ್‌ಗಳನ್ನು ಕಡಿತಗೊಳಿಸುವ ತೀರ್ಮಾನ ಪ್ರಕಟಿಸಿತ್ತು. ಇದು ಒಪ್ಪಂದದ ಉಲ್ಲಂಘನೆ ಎನ್ನುತ್ತಾರೆ ಡಾ.ಬಿಳಿಮಲೆ. “ಇದು ನಿಜಕ್ಕೂ ಒಪ್ಪಂದದ ಉಲ್ಲಂಘನೆ. ನಂತರದ ವರ್ಷದ ಪ್ರವೇಶ ಪ್ರಕ್ರಿಯೆಗಳಿಗೂ ಅದು
ಮುಂದುವರಿಯಿತು’ ಎಂದರು.
ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯುವ ಸೂಚನೆ ಇಲ್ಲದೇ ಇದ್ದುದರಿಂದ ಉಚಿತವಾಗಿ ಕನ್ನಡ ಕಲಿಸುವ ಮತ್ತು ಕನ್ನಡ ಪ್ರಮುಖ ಕೃತಿಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡುವ ಕಾರ್ಯಕ್ಕೂ ಅವರು ಮುಂದಾಗಿದ್ದಾರೆ. ಸದ್ಯ ಕವಿರಾಜಮಾರ್ಗ
ಕೃತಿ ಇಂಗ್ಲಿಷ್‌ಗೆ ಭಾಷಾಂತರ ಮಾಡುವ ಕೆಲಸ ಮುಗಿದಿದೆ. ಶಿವಕೋಟ್ಯಾಚಾರ್ಯರ ವಡ್ಡಾರಾಧನೆ ಮತ್ತು ರನ್ನ ಬರೆದ ಸಾಹಸ ಭೀಮ ವಿಜಯ ಕೃತಿಗಳ ಭಾಷಾಂತರ ನಡೆಸಬೇಕಿದೆ ಎಂದಿದ್ದಾರೆ. ಈ ವರ್ಷಾಂತ್ಯಕ್ಕೆ ಡಾ.ಬಿಳಿಮಲೆ ಅವರ ಅಧಿಕಾರದ ಅವಧಿ
ಮುಕ್ತಾಯವಾಗಲಿದೆ.