ರಾಮದುರ್ಗ: ಬಡ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿನ ಉದ್ಯಮಿ ಚಿಕ್ಕರೇವಣ್ಣನವರು ತಾಲೂಕಿನಲ್ಲಿ 4 ಉಚಿತ ಜನಸೇವಾ ಕೇಂದ್ರಗಳನ್ನು ಸ್ಥಾಪಿಸಿ ಜನ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಮನಿಹಾಳದ ಅಜ್ಜಯ್ಯ ಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಸುರೇಬಾನ ಗ್ರಾಮದಲ್ಲಿ ಉದ್ಯಮಿ, ಸಮಾಜ ಸೇವಕ ಚಿಕ್ಕರೇವಣ್ಣ ನಿರ್ಮಿಸಿದ ಉಚಿತ ಜನಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ತಂತ್ರಜ್ಞಾನ ಯುಗದಲ್ಲಿ ಸರಕಾರ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಗತ್ಯ ದಾಖಲೆ ಪತ್ರಗಳನ್ನು ಪಡೆದುಕೊಳ್ಳಲು ಜನಸೇವಾ ಕೇಂದ್ರ ಬಹಳಷ್ಟು ಉಪಯೋಗವಾಗಲಿದ್ದು, ಸಾರ್ವಜನಿಕರು ಉಚಿತ ಜನ ಸೇವಾ ಕೇಂದ್ರದ ಸದುಪಯೋಗ
ಪಡೆಸಿಕೊಳ್ಳಬೇಕೆಂದು ಹೇಳಿದರು.
ಚಿಕ್ಕರೇವಣ್ಣ ಆಪ್ತ ಸಹಾಯಕ ಮಾಳಿಂಗರಾಯ್ಯ ಮಾತನಾಡಿ, ತಾಲೂಕಿನಲ್ಲಿ ಚಿಕ್ಕರೇವಣ್ಣನವರು ಬಡವರ ಕಲ್ಯಾಣಕ್ಕಾಗಿ ಅನೇಕ ರೀತಿಯಲ್ಲಿ ಆರ್ಥಿಕ ನೆರವು ನೀಡುತ್ತಿದ್ದಾರೆ. ಈಗಾಗಲೆ ಪಟ್ಟಣ ಸೇರಿದಂತೆ ತಾಲೂಕಿನ ಹುಲಕುಂದ ಹಾಗೂ ಕಟಕೋಳದಲ್ಲಿ ಉಚಿತ ಜನಸೇವಾ ಕೇಂದ್ರ ಸ್ಥಾಪಿಸಿದ್ದು, ಈಗ ಸುರೇಬಾನ ಗ್ರಾಮದಲ್ಲಿ ಒಳಗೊಂಡು 4 ಉಚಿತ ಜನ ಸೇವಾ ಕೇಂದ್ರ ತೆರೆದು ಸಾಕಷ್ಟು ಬಡವರಿಗೆ ಸಹಾಯ ಕಲ್ಪಿಸುವಲ್ಲಿ ಮುಂದಾಗಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯತ ಸದಸ್ಯರಾದ ನೀಲಮ್ಮ ಬನನ್ನವರ, ಉಮೇಶ ಸವದತ್ತಿ, ಮುಖಂಡರಾದ ಗೀತಾ ಹಣಸಿ, ಕರೆಪ್ಪ ದೇಸಾಯಿ, ಹನುಮಂತ ದೇಸಾಯಿ, ಮಲ್ಲನಗೌಡ ಪಾಟೀಲ, ಮೈಲಾರಪ್ಪ ಬಡಿಗೇರ, ವಿಠಲ ಬಾಗೋಜಿ, ಮಲ್ಲಿಕಾರ್ಜುನ ಸುನ್ನಾಳ, ಯಲ್ಲಪ್ಪ ಬನನ್ನವರ, ಪಕೀರಪ್ಪ ಹಾವೋಜಿ, ಅರ್ಜುನ ಆವೋಜಿ, ಗಣಪತಿ ಬಾಗಲೇ ಹಾಗೂ ಚಿಕ್ಕರೇವಣ್ಣರವರ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.