ಭಾಲ್ಕಿ: ನಿಯಂತ್ರಣವಿಲ್ಲದ ಆಹಾರ ಸೇವನೆ ಅನಾರೋಗ್ಯಕ್ಕೆ ನಾಂದಿಯಾಗುತ್ತದೆ ಎಂದು ಸಿದ್ಧರಾಮೇಶ್ವರ ಪಟ್ಟದ್ದೇವರು ಹೇಳಿದರು.
ಗೋರಚಿಂಚೋಳಿಯಲ್ಲಿ ನಾಗನಾಥಪ್ಪ ಫೌಂಡೇಶನ್ ಮತ್ತು ಶಿವಯೋಗಿ ಸಿದ್ಧರಾಮೇಶ್ವರ ಮಠದ ಸಹಯೋಗದಲ್ಲಿ 18ನೇ ಅನುಭವ ಮಂಟಪ ಕಾರ್ಯಕ್ರಮ ನಿಮಿತ್ತ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮೇಲ್ನೋಟಕ್ಕೆ ರುಚಿಕರವಾಗಿ ಕಾಣುವ ಸಾಕಷ್ಟು ಪದಾರ್ಥಗಳು ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತವೆ. ಮಿತ ಮತ್ತು ಪೌಷ್ಟಿಕ ಆಹಾರ ಸೇವನೆ ಎಲ್ಲರ ರೂಢಿಯಾಗಬೇಕು. ನೈಸರ್ಗಿಕವಾಗಿ ದೊರೆಯುವ ಅನೇಕ ಸಾಮಗ್ರಿಗಳು ದಿವ್ಯ ಔಷಧಗಳಾಗಿ ಪರಿಣಮಿಸಿವೆ. ಆಹಾರ ಸೇವನೆ ಪದ್ಧತಿ ಮಕ್ಕಳಿಗೆ ಪಠ್ಯದ ರೂಪದಲ್ಲಿ ಹೇಳಿಕೊಡಬೇಕಿರುವುದು ಸದ್ಯದ ಅನಿವಾರ್ಯತೆ ಎಂದರು.
ಬೀದರನ ತಜ್ಞ ವೈದ್ಯ ಡಾ| ಬಸವಂತ ಗುಮ್ಮೇದ “ಆಹಾರದಿಂದ ಉಂಟಾಗುವ ಪರಿಣಾಮಗಳು’ ವಿಷಯ ಕುರಿತು ಉಪನ್ಯಾಸ ಮಂಡಿಸಿದರು. ಬೀದರನ ಮೂಳೆ ರೋಗ ತಜ್ಞ ಡಾ| ಸಂತೋಷ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಂತ ವೈದ್ಯ ಡಾ| ಅಮಿತ್ ಅಷ್ಟೂರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯ ಅಶೋಕ ರಾಜೋಳೆ, ಡಾ| ಅನೀಲಕುಮಾರ ಸುಕಾಳೆ ಮಾತನಾಡಿದರು. ಮಠದ ಅನುಭವ ಮಂಟಪ ಕಾರ್ಯಕ್ರಮದ ಆಜೀವ ಸದಸ್ಯತ್ವ ದಾನಿಗಳಾದ ದೊಂಡಿ ಹಿಪ್ಪರಗಾ ಗ್ರಾಪಂ ಅಧ್ಯಕ್ಷೆ ಜಗದೇವಿ ಸೋಮೇಶ್ವರ ಪಟ್ವಾರಿ ಅವರನ್ನು ಮಠದಿಂದ ಸನ್ಮಾನಿಸಲಾಯಿತು.
ಈ ವೇಳೆ ಸುಭಾಷ ಬಾವಗೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಮ್ಮಿ ಪಟೇಲ, ಪ್ರಭು ಕುಲಕರ್ಣಿ, ಸಚಿನ, ಮಲ್ಲಿಕಾರ್ಜುನ ಇದ್ದರು. ಮಹಾದೇವ ಚಕೋತೆ ಸ್ವಾಗತಿಸಿದರು. ಮುಖ್ಯ ಶಿಕ್ಷಕ ರಮೇಶ ಬರ್ಮಾ ನಿರೂಪಿಸಿದರು. ಗ್ರಾಮದ ಮುಖಂಡ ವೀರಣ್ಣ ಕಾರಬಾರಿ ವಂದಿಸಿದರು.