Advertisement

ಮುಕ್ತ ಸಂವಹನವೇ ಸುಮಧುರ ಸಂಬಂಧದ ಅಡಿಪಾಯ

08:24 PM Jul 03, 2021 | Team Udayavani |

ಅವಿಭಕ್ತ ಕುಟುಂಬದ ಸೊಸೆಯಾಗಿ ವಿಭಕ್ತ ಕುಟುಂಬದಿಂದ ಬಂದವಳು ನಾನು. ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದೆ. ಒಂದೇ ಮನೆ, ಹಲವಾರು ಮಂದಿ. ಸುಖ, ಸಂತೋಷ, ನೆಮ್ಮದಿ ಇರಬಹುದು ಎಂದುಕೊಂಡಿದ್ದೆ. ಮದುವೆಯಾದ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು.

Advertisement

ಆದರೆ ನಾನು ಕೆಲಸಕ್ಕೆ ಹೋಗಲು ಶುರು ಮಾಡಿದ ಮೇಲೆ ಸ್ವಲ್ಪ ಸಮಸ್ಯೆಗಳಾಗುತ್ತಿದೆ. ನಾನು ಅಫೀಸ್‌ ಡ್ಯೂಟಿ ಮುಗಿಸಿ ಬಂದ ತಕ್ಷಣ ನನ್ನ ಅತ್ತೆ ನನಗೆ ನನ್ನ ಗಂಡನ ಬಗ್ಗೆ ಸಾಕಷ್ಟು ದೂರು ನೀಡುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದರೆ ಅಥವಾ ನಾನೇದರೂ ನನ್ನ ಸಮಸ್ಯೆಗಳನ್ನು ಹೇಳಿದರೆ ತಕ್ಷಣ ಅದನ್ನು ನನ್ನ ಗಂಡನಿಗೆ ಹೇಳಿ, ನಾನೂ ಅವರೊಂದಿಗೆ ಸಂತೋಷವಾಗಿಲ್ಲ ಎನ್ನುವಂತೆ ಹೇಳುತ್ತಾಳೆ. ಒಂದು ರೀತಿಯಲ್ಲಿ ಇದು ನನಗೆ ಕಿರಿಕಿರಿ ಉಂಟು ಮಾಡಿದೆ ಎಂದು ಸ್ನೇಹಿತೆಯೊಬ್ಬಳು ಹೇಳಿಕೊಂಡಾಗ ನನಗೂ ದುಃಖವಾಯಿತು. ಆ ಕ್ಷಣ ಅವಳಿಗೆ ಒಂದಷ್ಟು ಸಮಾಧಾನ ಹೇಳಿದೆ.

ಆದರೆ ಯಾಕೆ ಹೀಗೆ ಎಂಬ ಆಲೋಚನೆ ಸಾಕಷ್ಟು ಹೊತ್ತು ಕೊರೆಯಲಾರಂಭಿಸಿತು. ಸಾಮಾನ್ಯವಾಗಿ ಅವಿಭಕ್ತ ಕುಟುಂಬದ ವ್ಯವಸ್ಥೆಗಳು ಭಿನ್ನವಾಗಿರುತ್ತದೆ. ಇಲ್ಲಿ ಸಂವಹನವೇ ಎಲ್ಲರನ್ನೂ ಒಂದಾಗಿರಿಸಿರುತ್ತದೆ. ವಿಭಕ್ತ ಕುಟುಂಬದಿಂದ ಬಂದವರು ಇದಕ್ಕೆ ಹೊಂದಿ ಕೊಳ್ಳಲು ಸ್ವಲ್ಪ ಸಮಯ ಬೇಕಾಗ ಬಹುದು. ಇಂತ ಸಂದರ್ಭದಲ್ಲಿ ಕೆಲವೊಂದು ವಿಚಾರಗಳನ್ನು ರೂಢಿಸಿ ಕೊಳ್ಳಬೇಕಿದೆ. ಇದರಿಂದ ಮನೆ, ಮನಸ್ಸು ಸಂತೋಷವಾಗಿರಲು ಸಾಧ್ಯವಿದೆ.

ಮುಕ್ತ ಸಂವಹನ
ಅವಿಭಕ್ತ ಕುಟುಂಬದಲ್ಲಿ ಮುಕ್ತ ಸಂವಹನ ಬಹುಮುಖ್ಯವಾಗುತ್ತದೆ. ಯಾಕೆಂದರೆ ಒಬ್ಬರ ವಿಚಾರ ಇನ್ನೊಬ್ಬರಿಗೆ ಹೇಳಿ, ಅದು ಮತ್ತೂಬ್ಬರನ್ನು ತಲುಪುವಾಗ ಭಿನ್ನವಾಗಿರಬಹುದು. ಹೇಳದೇ ಇರುವ ವಿಷಯಗಳು ಅದರಲ್ಲಿ ಸೇರಿರಬಹುದು ಅಥವಾ ಹೇಳಬೇಕಾದ ಮುಖ್ಯ ವಿಷಯವೇ ಇರದೇ ಇರಬಹುದು. ಇಂಥ ಸಂದರ್ಭದಲ್ಲಿ ಮುಕ್ತ ಸಂವಹನ ನಡೆಸುವುದು ಅತೀ ಅಗತ್ಯವಾಗುತ್ತದೆ. ಇಲ್ಲಿ ಯಾವುದೇ ಅನುವಾನಕ್ಕೆ ಅವಕಾಶ ಸಿಗಲಾರದು. ಏನೇ ಇದ್ದರೂ ನೇರಾನೇರ ಮಾತನಾಡಿ ಸಮಸ್ಯೆ ಬಗೆ ಹರಿಸಿಕೊಳ್ಳಬಹುದು.

ದೃಢವಾಗಿರಿ
ಸಂಬಂಧಗಳ ವಿಚಾರಗಳಲ್ಲಿ ನಿಮ್ಮ ಮಾತು ಮತ್ತು ನಡತೆಯ ಮೇಲೆ ದೃಢವಾಗಿರಬೇಕು. ಸಂವಹನದ ವೇಳೆಯೂ ದೃಢತೆಯಿಂದ ಇರಬೇಕು. ಆಗ ಯಾವುದೇ ತಪ್ಪುಗಳಾಗಲು ಸಾಧ್ಯವಿಲ್ಲ.

Advertisement

ದೃಷ್ಟಿಕೋನ ಪರಿಶೀಲಿಸಿ
ಸಂಬಂಧಗಳಲ್ಲಿ ಯಾರೇ ಆಗಿರಲಿ ತಂದೆ, ತಾಯಿ, ಮಗ, ಸೊಸೆ, ಮಗಳು,ಅಳಿಯ… ಹೀಗೆ ಎಲ್ಲರ ದೃಷ್ಟಿಕೋನವನ್ನು ಪರಿಶೀಲಿಸುವುದು ಅವಿಭಕ್ತ ಕುಟುಂಬದಲ್ಲಿ ಮುಖ್ಯವಾಗಿರುತ್ತದೆ. ಮಗ ಮತ್ತು ಸೊಸೆಯ ನಡುವೆ ಮಧ್ಯಸ್ಥಿಕೆ ವಹಿಸುವುದು ಅತ್ತೆ, ಮಾವನ ಜವಾಬ್ದಾರಿ ಎಂದು ಅಂದುಕೊಂಡಿರುತ್ತಾರೆ. ಅದೇ ರೀತಿ ಅತ್ತೆಯ ಕಾಳಜಿ, ಮಾವನ ಆರೈಕೆ ತನ್ನ ಕರ್ತವ್ಯವೆಂದು ಸೊಸೆ ಅಂದುಕೊಂಡಿರುತ್ತಾಳೆ. ಇದರ ನಡುವೆ ಬೇರೆ ವಿಚಾರಗಳು ಬಂದರೆ ಅವರಿಗೆ ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ.ಹೀಗಾಗಿ ಎಲ್ಲರ ದೃಷ್ಟಿಕೋನವನ್ನು ಪರಿಶೀಲಿಸಿಯೇ ಮುನ್ನಡೆಯುವುದು ಅತ್ಯುತ್ತಮ ಸಂಬಂಧಕ್ಕೆ ಭದ್ರ ಅಡಿಪಾಯ ಹಾಕಿದಂತಾಗುತ್ತದೆ.

ಗಡಿ ನಿಯಂತ್ರಣವಿರಲಿ
ಮನೆಯಲ್ಲಿ ಯಾರ ವಿಷಯ ಯಾರಲ್ಲಿ ಹೇಳಬೇಕು ಎನ್ನುವ ಅರಿವು ಇರಲಿ. ಗಂಡನ ವಿಷಯವನ್ನು ಅತ್ತೆಯ ಬಳಿ ಹೇಳುವುದಕ್ಕಿಂತ ಮೊದಲು ಗಂಡನಿಗೆ ಹೇಳಬೇಕು. ಅತ್ತೆ ವಿಷಯವನ್ನು ಗಂಡನಿಗೆ ಹೇಳುವುದಕ್ಕೆ ಮೊದಲು ಅತ್ತೆಯ ಬಳಿಯೇ ಹೇಳಬೇಕು. ಅವರವರ ತಪ್ಪುಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಸಬೇಕು. ಅಲ್ಲದೇ ಅತ್ತೆಯು ಗಂಡನ ವಿರುದ್ಧ ಏನಾದರೂ ಹೇಳಲು ಬಂದರೆ ಅವರ ಗಡಿಗಳ ಪ್ರಾಮುಖ್ಯತೆಯನ್ನು ವಿವರಿಸಿ ಮತ್ತು ಅವುಗಳನ್ನು ಗೌರವಿಸಲು ತಿಳಿಸಿ. ಒಂದು ವೇಳೆ ಅದನ್ನು ಅವರು ಮತ್ತೆ ಮುಂದುವರಿಸಿದರೆ ಇದು ತಾಯಿ, ಮಗನ ಸಂಬಂಧದ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಿ. ಇದನ್ನು ಆಕೆ ಅರ್ಥ ಮಾಡಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next