ಹುಳಿಯಾರು: ತನ್ನ ಇಲಾಖೆಯ ಸಿಬ್ಬಂದಿ ಮತದಾನಕ್ಕಾಗಿ ಕೆಎಸ್ಸಾರ್ಟಿಸಿ 300 ಕಿ.ಮೀ. ಉಚಿತ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಿದ ಅಪರೂಪದ ಘಟನೆ ಬುಧವಾರ ಜರುಗಿದೆ.
ತುಮಕೂರು ಜಿಲ್ಲೆ ತುರುವೇಕೆರೆ ಘಟಕನ ಚಾಲಕ ಶಿವಲಿಂಗಯ್ಯ 2023ರ ಮೇ 9ರಂದು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಅವರು ಚುನಾವಣಾ ಅಧಿಕಾರಿ ಹಾಗೂ ಘಟಕ ವ್ಯವಸ್ಥಾಪಕರಲ್ಲಿ ಮತ ಚಲಾವಣೆ ಮಾಡಬೇಕಾಗಬಹುದು ಎಂದು ತಿಳಿಸಿದ್ದರೂ ಅವರನ್ನು ಬಲವಂತದಿಂದ ಚುನಾವಣಾ ಕರ್ತವ್ಯಕ್ಕೆ ಚಿಕ್ಕನಾಯಕನಹಳ್ಳಿಯಿಂದ ಪಾವಗಡಕ್ಕೆ ಕಳಿಸಲಾಗಿತ್ತು. ಶಿವಲಿಂಗಯ್ಯ ಚುನಾವಣಾ ಕರ್ತವ್ಯಕ್ಕೆ ತೆರಳಿದ ನಂತರ ನನಗೆ ಮತದಾನ ಮಾಡಲು ಅವಕಾಶ ಕೊಡುವಂತೆ ತುಮಕೂರು ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳ ಗಮನಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಚುನಾವಣಾ ಅಧಿಕಾರಿಗಳು ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವಂತೆ ಸೂಚಿಸಿದ್ದರು.
ಚುನಾವಣಾಧಿಕಾರಿಗಳ ಸೂಚನೆ ಮೇರೆಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಇತಿಹಾಸದಲ್ಲಿ ಪ್ರಥಮ ಎನ್ನುವಂತೆ ಸುಮಾರು 300 ಕಿ.ಮೀ. ದೂರದ ಅಂದರೆ ತುರುವೇಕೆರೆಯಿಂದ ತುಮಕೂರು, ಮಧುಗಿರಿ ಮಾರ್ಗವಾಗಿ ಪಾವಗಡ ಹತ್ತಿರ ಆಂಧ್ರ ಗಡಿ ಪ್ರದೇಶದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಶಿವಲಿಂಗಯ್ಯನವರಿಗೆ ತನ್ನ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಲು ಕೆಎಸ್ಸಾರ್ಟಿಸಿ ಪ್ರತ್ಯೇಕ ಖಾಲಿ ಬಸ್ ವ್ಯವಸ್ಥೆ ಮಾಡಿಕೊಟ್ಟರು.
ಈ ವಿಶೇಷ ವ್ಯವಸ್ಥೆಗೆ ತುರುವೇಕೆರೆಯಲ್ಲಿ ಮತದಾನ ಮಾಡಿದ್ದ ಚಾಲಕ ಚೇತನ್ ಅವರನ್ನು ನಿಯೋಜಿಸಿದ್ದು ಚೇನತ್ ಖಾಲಿ ಬಸ್‌ನಲ್ಲಿ ಶಿವಲಿಂಗಯ್ಯ ಅವರನ್ನು ಕೂರಿಸಿಕೊಂಡು ಸುಮಾರು ನಾಲ್ಕು ಗಂಟೆಗೆ ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯ ಮತದಾನ ಕೇಂದ್ರದಲ್ಲಿ ಬಸ್‌ನಲ್ಲಿ ಕರೆರತಂದು ಮತದಾನಕ್ಕೆ ನೆರವಾಗಿದ್ದಾರೆ. ಶಿವಲಿಂಗಯ್ಯ ಅವರ ಕರ್ತವ್ಯ ಸ್ಥಳಕ್ಕೆ ಮತದಾನ ಮಾಡಿದ್ದ ತುರುವೇಕೆರೆಯ ಉಮಾಯಿಲ್ ಎಂಬ ಚಾಲಕನನ್ನು ನಿಯೋಜಿಸಲಾಗಿತ್ತು. ಶಿವಲಿಂಗಯ್ಯ ಮತದಾನದ ನಂತರ ಬಸ್ ಹುಳಿಯಾರಿನಿಂದ ಬೆಂಗಳೂರಿಗೆ ಪ್ಯಾಸೆಂಜರ್ ರೂಟ್ ಟ್ರಿಪ್‌ಗೆ ಕಳುಹಿಸಲಾಯಿತು.
ಕೆಎಸ್ಸಾರ್ಟಿಸಿ ಇತಿಹಾಸದಲ್ಲಿ ಪ್ರಥಮ: ಒಬ್ಬ ವ್ಯಕ್ತಿಯ ಮನದಾನಕ್ಕೋಸ್ಕರ 300 ಕಿ. ಮೀ. ಖಾಲಿ ವಾಹನ ವ್ಯವಸ್ಥೆ ಮಾಡಿರುವುದು ಕೆಎಸ್ಸಾರ್ಟಿಸಿ ಇತಿಹಾಸದಲ್ಲಿ ಮೊಲದ ಘಟನೆಯಾಗಿದೆ. ಮತದಾನಕ್ಕೋಸ್ಕರ ಚುನಾವಣಾ ಆಯೋಗ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ.