Advertisement
ಆಟೋ ಚಾಲಕರ ಹೃದಯ ವೈಶಾಲ್ಯ ಆಗಾಗ್ಗೆ ಮಾದರಿಯ ಸೋಜಿಗ ಸೃಷ್ಟಿಸುತ್ತಲೇ ಇರುತ್ತದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಆಟೋ ಚಾಲಕ ಮಲ್ಲಯ್ಯ ಕೊಂಡಯ್ಯ ಹಿರೇಮಠ್ ಅವರದೂ ಅಂಥದ್ದೇ ಮಾದರಿಯ ಹೆಜ್ಜೆ. ಗರ್ಭಿಣಿ ಹಾಗೂ ಬಾಣಂತಿಯರೇನಾದರೂ ಇವರ ಆಟೋವನ್ನು ಹತ್ತಿದರೆ, ಇವರು ಹಣ ಕೇಳುವುದಿಲ್ಲ! ಉಚಿತವಾಗಿ ಮನೆಗೆ ಡ್ರಾಪ್ ಕೊಡುತ್ತಾರೆ!
ಚಾಲಕ ಮಲ್ಲಯ್ಯ ಅವರ ಪತ್ನಿ ಗರ್ಭಿಣಿಯಾಗಿದ್ದ ಸಮಯದಲ್ಲಿ ಸಕಾಲಕ್ಕೆ ಆಸ್ಪತ್ರೆಗೆ ತೆರಳದೇ ಹೆರಿಗೆ ಸಮಯದಲ್ಲಿ ಸಮಸ್ಯೆಯಾಗಿತ್ತು. ತನ್ನ ಪತ್ನಿಗೆ ತೊಂದರೆಯಾದಂತೆ, ಈ ಹಳ್ಳಿಯಲ್ಲಿ ಯಾರಿಗೂ ಆ ರೀತಿಯ ಸಮಸ್ಯೆ ಆಗಬಾರದೆಂದು, ಕಳೆದ 10 ವರುಷಗಳಿಂದ ಗರ್ಭಿಣಿಯರಿಗೆ ಉಚಿತ ಪ್ರಯಾಣ ಕಲ್ಪಿಸುತ್ತಿದ್ದಾರೆ. ಇದುವರೆಗೂ ಸುಮಾರು 145 ಮಹಿಳೆಯರಿಗೆ ಈ ಉಚಿತ ಸಂಚಾರ ಭಾಗ್ಯ ಸಿಕ್ಕಿದೆ.
Related Articles
ಸ್ತ್ರೀಯರಿಗೆ ಹೆರಿಗೆ ನೋವು ಯಾವಾಗ ಬರುತ್ತದೆಂದು ಹೇಳಲಾಗದು. ಎಷ್ಟೋ ಸಲ ಮಧ್ಯರಾತ್ರಿಯೂ ಹೆರಿಗೆ ಬೇನೆಯಿಂದ ನರಳಿದ ಗರ್ಭಿಣಿಯರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಕನಿಷ್ಠ ತಿಂಗಳಿಗೆ 3-5 ಗರ್ಭಿಣಿಯರನ್ನು ಹೀಗೆ ಉಚಿತವಾಗಿ ಆಸ್ಪತ್ರೆಗೆ ಒಯ್ಯುತ್ತಾರೆ, ಮಲ್ಲಯ್ಯ. ಕೇವಲ ಆಸ್ಪತ್ರೆಗೆ ಉಚಿತವಾಗಿ ದಾಖಲಿಸುವುದಷ್ಟೇ ಇವರು ತಮ್ಮ ಸೇವೆ ಎಂದು ಭಾವಿಸಿಲ್ಲ. ಗರ್ಭಿಣಿಯರನ್ನು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲು ನೆರವಾಗುತ್ತಾರೆ. ಅವರನ್ನು ಒಳರೋಗಿಯಾಗಿ ದಾಖಲು ಮಾಡಿಸಿ, ದಾಖಲಾತಿಯ ಅರ್ಜಿಯನ್ನೂ ಸ್ವತಃ ತಾವೇ ಭರ್ತಿ ಮಾಡುತ್ತಾರೆ. ಅಲ್ಲದೆ, ಉಳಿದಂತೆ ಒಳರೋಗಿಗಳು ಭರ್ತಿ ಮಾಡಬೇಕಾದ ಅರ್ಜಿಗಳನ್ನೂ ಇವರೇ ತುಂಬುತ್ತಾರೆ.
Advertisement
ಗರ್ಭಿಣಿಯಾಗಿದ್ದಾಗ ನನ್ನ ಪತ್ನಿಗಾದ ಕಷ್ಟ ಬೇರಾರಿಗೂ ಆಗಬಾರದು. ಈ ಕಾರಣದಿಂದ ನಾನು ಉಚಿತ ಸಂಚಾರ ಕಲ್ಪಿಸುತ್ತಿದ್ದೇನೆ. ಇಂಥ ಸಂದಿಗ್ಧತೆಯ ವೇಳೆ ಮಾಡಿದ ನೆರವನ್ನು, ಬದುಕಿನ ಕೊನೆಯ ತನಕವೂ ಆ ಎರಡು ಜೀವಗಳು ನೆನಪಿಟ್ಟುಕೊಳ್ಳುತ್ತವೆ. ಅದೇ ನನ್ನ ಪಾಲಿಗೆ ಭರಿಸಲಾಗದ ಶುಲ್ಕ!– ಮಲ್ಲಯ್ಯ ಕೊಂಡಯ್ಯ ಹಿರೇಮಠ್, ಆಟೋ ಚಾಲಕ – ಗುರುರಾಜ ಬ. ಕನ್ನೂರ