ಗುರುಮಠಕಲ್: ವಾರದೊಳಗೆ ನೀವು ಕೊಟ್ಟ ಹಣಕ್ಕೆ ಡಬಲ್ ಹಣ ನೀಡಲಾಗುವುದು ಎಂದು ಜನರನ್ನು ವಂಚಿಸುತ್ತಿದ್ದ ದಂಪತಿಯನ್ನು ರವಿವಾರ ಪಿಐ ಖಾಜಾಹುಸೇನ್ ನೇತೃತ್ವದಲ್ಲಿ ಬಂಧಿಸಲಾಯಿತು.
ಗಾಜರಕೋಟ್ ಗ್ರಾಮದ ಲಕ್ಷ್ಮೀ ಗುನ್ನೆನ್ನೋರ ಮತ್ತು ಅವರ ಪತಿ ರಾಮರಡ್ಡಿ ಆಶಪ್ಪ ಗುನ್ನೆನ್ನೋರ್‌ಎಂಬುವವನ್ನು ಬಂಧಿಸಲಾಗಿದ್ದು, ವಿಜಯಕುಮಾರ ಎಂಬುವಾತ ಪರಾರಿಯಾಗಿದ್ದಾರೆ ಎಂದು ಪಿಐ ಖಾಜಾಹುಸೇನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುಮಠಕಲ್ ಪಟ್ಟಣದ ಬಟ್ಟೆ ವ್ಯಾಪಾರಿ ಬೀಬೀ ಹಸೀನಾ ಬಷೀರ್ ಶೇಖ್ ಮತ್ತು ಇನ್ನಿತರರ ಬಳಿ ರೂ. 5,000 ಕೊಟ್ಟರೆ ವಾರದಲ್ಲಿ ರೂ.10 ಸಾವಿರ ನೀಡಲಾಗುತ್ತದೆ ಎಂದು ಒಟ್ಟು 15.70 ಲಕ್ಷ ರೂ. ಪಡೆದು ಜನರಿಗೆ ವಂಚಿಸಿದ್ದಾರೆ ಎಂದು ದೂರು ನೀಡಲಾಗಿತ್ತು. ಪಿಎಸ್‌ಐ ಶಿವಲಿಂಗಪ್ಪ ತಂಡದವರು ಪಿಐ ಖಾಜಾಹುಸೇನ್ ಅವರ ಮಾರ್ಗದರ್ಶನದಲ್ಲಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿಕೊಂಡು 1.25 ಲಕ್ಷ ನಗದು ಹಣವನ್ನು ಜಪ್ತಿ ಮಾಡಿ ಇನ್ನೊಬ್ಬ ಆರೋಪಿಯ ತನಿಖೆ ಮಾಡಲಾಗುತ್ತಿದೆ. ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.