Advertisement

Fraud: ಇನ್ಫೋಸಿಸ್‌ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ

10:47 AM Dec 19, 2023 | Team Udayavani |

ಬೆಂಗಳೂರು: ಇನ್ಫೋಸಿಸ್‌ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆರು ಮಂದಿ ಟೆಕಿಗಳಿಂದ 12 ಲಕ್ಷ ರೂ. ಪಡೆದು ವಂಚಿಸಿದ್ದ ಮೂವರ ವಿರುದ್ಧ ಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಜಯನಗರ 6ನೇ ಬ್ಲಾಕ್‌ ನಿವಾಸಿ ಎಸ್‌.ಎಂ.ಕಾರ್ತಿಕ್‌ ಎಂಬುವರು ನೀಡಿದ ದೂರಿನ ಮೇರೆಗೆ ಪಾವನಿ, ಶ್ರೀನಿವಾಸ ಹಾಗೂ ಗೋಪಿ ಚಿಲುಕುಲ ವಿರುದ್ಧ ಜಯನಗರ ಠಾಣೆ ಪೊಲೀಸರು ಎಫ್ಐಆರ್‌ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.

ಏನಿದು ಪ್ರಕರಣ?: ದೂರುದಾರ ಕಾರ್ತಿಕ್‌ ಎಂಜಿನಿಯರ್‌ ಪದವಿ ಮುಗಿಸಿದ್ದು, ವಿದೇಶಿ ಮೂಲದ ಸಾಫ್ಟ್ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್‌ ಎಂಬಾತನ ಮೂಲಕ 2022ರ ಆಗಸ್ಟ್‌ನಲ್ಲಿ ಪಾವನಿ ಎಂಬಾಕೆಯ ಪರಿಚಯವಾಗಿದೆ. ನಗರದ ವಿವಿಧ ಖಾಸಗಿ ಕಂಪನಿಗಳಲ್ಲಿ ಪಾವನಿ ಕೆಲಸ ಕೊಡಿಸುತ್ತಾರೆ ಎಂದು ಕಿರಣ್‌ ಪರಿಚಯಿಸಿದ್ದ. ಈ ವೇಳೆ ಪಾವನಿ ಜತೆಗೆ ಶ್ರೀನಿವಾಸ ಮತ್ತು ಗೋಪಿ ಚಿಲುಕುಲಾ ಇದ್ದರು.

ಇನ್ನು ಆರೋಪಿಗಳು ತಾವು ಇನ್ಫೋಸಿಸ್‌ ಕಂಪನಿಯಲ್ಲಿ ಎಚ್‌.ಆರ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಬಹಳ ಮಂದಿಗೆ ಕೆಲಸ ಕೊಡಿಸಿದ್ದೇವೆ ಎಂದು ಹೇಳಿಕೊಂಡಿದ್ದರು. ಅಲ್ಲದೆ, ದೂರುದಾರ ಕಾರ್ತಿಕ್‌ ಮಾತ್ರವಲ್ಲ, ಅವರ ಸ್ನೇಹಿತರಾದ ಮುರಳಿ, ಸಂದೀಪ್‌, ಎಂ.ಜೆ.ಕಾರ್ತಿಕ್‌, ಧರಣಿ ಹಾಗೂ ಕುಮುದಾಗೂ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾರೆ. ಈ ವೇಳೆ ಕೆಲಸ ಕೊಡಿಸಲು ಹಣ ಕೊಡಬೇಕೆಂದು ಲಕ್ಷಾಂತರ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಕಾರ್ತಿಕ್‌ ದೂರಿನಲ್ಲಿ ತಿಳಿಸಿದ್ದಾರೆ.

ಬಳಿಕ ದೂರುದಾರ ಕಾರ್ತಿಕ್‌ ಹಾಗೂ ಆತನ ಐದು ಮಂದಿ ಸ್ನೇಹಿತರು ಆರೋಪಿಗಳ ಮಾತು ನಂಬಿ, ಫೋನ್‌ ಪೇ ಹಾಗೂ ಗೂಗಲ್‌ ಪೇ ಮೂಲಕ 2022ರ ಆಗಸ್ಟ್‌ನಿಂದ 2023ರ ಮಾರ್ಚ್‌ ವರೆಗೆ ಒಟ್ಟು 12 ಲಕ್ಷ ರೂ. ಪಡೆದಿದ್ದಾರೆ. ಆದರೆ, ಇದುವರೆಗೂ ಇನ್ಫೋಸಿಸ್‌ ಕಂಪನಿಯಲ್ಲಿ ಉದ್ಯೋಗ ಕೊಡಿಸಿಲ್ಲ. ಹಣವನ್ನೂ ವಾಪಸ್‌ ನೀಡಿಲ್ಲ ಎಂದು ಕಾರ್ತಿಕ್‌ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next