Advertisement

Bangalore: ಶಾಸಕ ಶಾಮನೂರು ಹೆಸರಿನಲ್ಲಿ ವಂಚನೆ: ಇಬ್ಬರ ಸೆರೆ

07:58 PM Aug 26, 2024 | Team Udayavani |

ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಕಲಿ ಸಹಿ ಮಾಡಿ ಮತ್ತು ಲೆಟರ್‌ ಹೆಡ್‌ ಬಳಸಿ ವಿಧಾನಸಭೆ ಸಚಿವಾಲಯಕ್ಕೆ ಪತ್ರ ಬರೆದು ಉದ್ಯೋಗ ಪಡೆದುಕೊಂಡಿದ್ದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಸಚಿವಾಲಯದ ಅಧಿಕಾರಿ ಲಲಿತಾ ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು ರಾಮನಗರ ಜಿಲ್ಲೆ ಕುದೂರು ನಿವಾಸಿ ಸ್ವಾಮಿ (35) ಹಾಗೂ ಅಂಜನ್‌ ಕುಮಾರ್‌ ಎಂಬವರನ್ನು ಬಂಧಿಸಿದ್ದಾರೆ. ಮತ್ತೂಬ್ಬ ಆರೋಪಿ ಕೆ.ಸಿ. ವಿನುತಾ (ಸ್ವಾಮಿಯ ಪತ್ನಿ)ಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಎಸೆಸೆಲ್ಸಿ ಓದಿರುವ ಸ್ವಾಮಿ ಈ ಹಿಂದೆ ಪರಿಚಿತ ಶಾಸಕರ ನೆರವಿನಿಂದ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿದ್ದ. ಅನಂತರ ರಾಜಕಾರಣಿಗಳ ಜತೆ ಓಡಾಡುತ್ತಿದ್ದ. ಶಿವಶಂಕರಪ್ಪ ಅವರು ವಿನುತಾಳನ್ನು ತಮ್ಮ ಆಪ್ತ ಸಹಾಯಕಿಯಾಗಿ ನೇಮಿಸಲು ಶಿಫಾರಸು ಮಾಡಿದಂತೆ ನಕಲಿ ಲೆಟರ್‌ಹೆಡ್‌ ಸೃಷ್ಟಿಸಿ ಅವರ ನಕಲು ಸಹಿ ಮಾಡಿದ ಪತ್ರವನ್ನು ವಿಧಾನಸಭೆ ಸಚಿವಾಲಯಕ್ಕೆ ಕಳುಹಿಸಿದ್ದ. ಪತ್ರದ ನೈಜತೆಯನ್ನು ಪರಿಶೀಲಿಸದ ಸಚಿವಾಲಯ ಸಿಬಂದಿ ವಿನುತಾಳನ್ನು ಶಿವಶಂಕರಪ್ಪರ ಆಪ್ತ ಸಹಾಯಕಿಯಾಗಿ ನೇಮಿಸಿ 2023ರ ಮೇಯಲ್ಲಿ ಆದೇಶ ಹೊರಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ವಂಚನೆ ಬೆಳಕಿಗೆ
ವಿನುತಾ ವಿಧಾನಸೌಧದಲ್ಲಿನ ಶಿವಶಂಕರಪ್ಪ ಅವರ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗದೆ ಮನೆಯಲ್ಲೇ ಇದ್ದುಕೊಂಡು ಕಳೆದೊಂದು ವರ್ಷದಿಂದ ಮಾಸಿಕ 30 ಸಾವಿರ ರೂ. ವೇತನ ಪಡೆದಿದ್ದಳು. ಈ ನಡುವೆ ಗರ್ಭಿಣಿಯಾದ ಆಕೆ ಕಾರಣ ಶಾಸಕರ ಆಪ್ತ ಸಹಾಯಕಿ ಹುದ್ದೆಯ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ಪತ್ರ ಬರೆದಿದ್ದಳು. ಸಚಿವಾಲಯದ ಸಿಬಂದಿ ಅನುಮಾನಗೊಂಡು ಪರಿಶೀಲಿಸಿದಾಗ ವಂಚನೆ ಗೊತ್ತಾಗಿದೆ. ವಿನುತಾ ಗರ್ಭಿಣಿಯಾಗಿರುವ ಕಾರಣ ಆಕೆಯನ್ನು ಬಂಧಿಸಿಲ್ಲ. ಹೆರಿಗೆಯ ಅನಂತರ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕ ರಘು ಹೆಸರಲ್ಲೂ ವಂಚನೆ
ಸ್ವಾಮಿಯನ್ನು ಬಂಧಿಸಿ ವಿಚಾರಿಸಿದಾಗ ಆತ ಇದೇ ರೀತಿ ಬೆಂಗಳೂರಿನ ಸಿ.ವಿ. ರಾಮನ್‌ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌. ರಘು ಹೆಸರಿನಲ್ಲೂ ನಕಲಿ ಲೆಟರ್‌ಹೆಡ್‌ ಸೃಷ್ಟಿಸಿ ನಕಲಿ ಸಹಿ ಮಾಡಿ ಅಂಜನ್‌ ಕುಮಾರ್‌ ಎಂಬಾತನಿಗೆ ಶಾಸಕರ ಆಪ್ತ ಸಹಾಯಕನ ಹುದ್ದೆ ಕೊಡಿಸಿದ್ದ ಸಂಗತಿ ಬಯಲಾಗಿದೆ. ಅಂಜನ್‌ ಕೂಡ ಕೆಲಸಕ್ಕೆ ಹಾಜರಾಗದೆ ಹಲವು ತಿಂಗಳಿಂದ ವೇತನ ಪಡೆಯುತ್ತಿದ್ದ. ಆತ 5 ಸಾವಿರ ರೂ. ಮಾತ್ರ ಇಟ್ಟುಕೊಂಡು ಉಳಿದ ಮೊತ್ತವನ್ನು ಸ್ವಾಮಿಗೆ ಕೊಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next