Advertisement

ಕೂಲಿ ಹಣ ಪಾವತಿಯಲ್ಲೂ ಕಿತಾಪತಿ

06:47 PM Jul 15, 2021 | Team Udayavani |

ಆಳಂದ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ದರ್ಗಾಶಿರೂರ ಗ್ರಾಪಂ ವ್ಯಾಪ್ತಿಯ ನಿಂಗದಳ್ಳಿ ಗ್ರಾಮದಲ್ಲಿ ಕಳೆದ ಮೇ ತಿಂಗಳಲ್ಲಿ ಕೈಗೊಂಡ ಹಳ್ಳದ ಹೂಳೆತ್ತುವ ಕಾಮಗಾರಿಯಲ್ಲಿ ಕಾರ್ಯ ನಿರ್ವಹಿಸಿದ್ದು ಏಳು ಮಂದಿ ಕೂಲಿ ಕಾರ್ಮಿಕರು, ಆದರೆ ಕೂಲಿ ಪಾವತಿಯಾಗಿದ್ದು 130 ಜನರಿಗೆ ಎಂದು ಮಾದನಹಿಪ್ಪರಗಾ ವಲಯ ಕರವೇ ಕಾರ್ಯಕರ್ತರು ದೂರಿದ್ದಾರೆ.

Advertisement

ಈ ಕುರಿತು ದರ್ಗಾಶಿರೂರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ಸಲ್ಲಿಸಿ ಮಾತನಾಡಿದ ಮಾದನಹಿಪ್ಪರಗಾ ಕರವೇ ವಲಯ ಅಧ್ಯಕ್ಷ ಶರಣಯ್ಯ ಹಿರೇಮಠ, ಕಳೆದ ಮೇ ತಿಂಗಳಲ್ಲಿ ನಿಂಗದಳ್ಳಿ ಗ್ರಾಮದಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿದ ಏಳು ಮಂದಿ ಸೇರಿದಂತೆ 130 ಮಂದಿಗೆ 1.80 ಲಕ್ಷ ರೂ. ಪಾವತಿಸಲಾಗಿದೆ. ಈ ಕುರಿತು ಎಲ್ಲ ದಾಖಲೆಗಳೊಂದಿಗೆ ದೂರು ಸಲ್ಲಿಸಿದರೂ, ಮೌಖೀಕವಾಗಿ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಈ ಭ್ರಷ್ಟಾಚಾರಕ್ಕೆ ಹಿಂದಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೇ ಹೊಣೆಗಾರರು. ಕೂಡಲೇ ವಾರದಲ್ಲಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಲಿ ಕಾರ್ಮಿಕರ ಹೆಸರಿನಲ್ಲಿ ಲೂಟಿ ಮಾಡಿದ ಹಣವನ್ನು ಸರ್ಕಾರಕ್ಕೆ ಮರುಪಾವತಿಸಬೇಕು. ದೂರಿಗೆ ವಾರದೊಳಗೆ ಉತ್ತರಿಸಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳುವವರೆಗೆ ಗ್ರಾಪಂ ಎದುರು ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿ ಕಾರಿ ಚಿದಾನಂದ ಅಲೆಗಾಂವ ಮಾತನಾಡಿ, ನಾನು ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಕುರಿತು ಸಂಬಂಧಿತ ಅಧಿ ಕಾರಿಗಳ ಮಾರ್ಗದರ್ಶನ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಮಾದನಹಿಪ್ಪರಗಾ ಕರವೇ ವಲಯದ ಪದಾಧಿಕಾರಿಗಳಾದ ವೀರೇಶ ಮರಾಠಿ, ಸೋಮಶೇಖರ, ಲಕ್ಷಣ ದಿಂಡೋರೆ, ನಿಂಗದಳ್ಳಿ ಕರವೇ ಅಧ್ಯಕ್ಷ ಬಸವರಾಜ ಎಸ್‌. ರಾಂಪೂರೆ, ವಿಜಯಕುಮಾರ  ಪಾಟೀಲ, ಶಿವಾನಂದ ಪಾಟೀಲ ಮತ್ತಿತರರು ಇದ್ದರು.

Advertisement

ದರ್ಗಾಶಿರೂರ ಗ್ರಾಪಂ ವ್ಯಾಪ್ತಿಯ ನಿಂಗಳ್ಳಿ ಗ್ರಾಮದಲ್ಲಿ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದ ಏಳು ಮಂದಿ ಬದಲು 130 ಮಂದಿಗೆ ಕೂಲಿ ಪಾವತಿಸಿ ಅವ್ಯವಹಾರ ಎಸಗಲಾಗಿದೆ. ಈ ಕುರಿತು ತಾಪಂ ಇಒಗೂ ಮನವಿ ಸಲ್ಲಿಸಲಾಗಿದೆ. ತನಿಖೆ ನಡೆಸುವಂತೆ ಕಾಲಾವಕಾಶ ನೀಡಲಾಗಿದೆ. ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೇ ಗ್ರಾಪಂ ಕಚೇರಿ ಎದುರು ಹೋರಾಟ ಕೈಗೊಳ್ಳಲಾಗುವುದು.
ಮಹಾಂತೇಶ ಸಣ್ಣಮನಿ,
ಕರವೇ ತಾಲೂಕು ಅಧ್ಯಕ್ಷ, ಆಳಂದ

ನರೇಗಾದಲ್ಲಿ ಕೆಲಸ ಮಾಡಿದವರಿಗೆ ಮಾತ್ರ ಕೂಲಿ ಪಾವತಿಯಾಗುತ್ತದೆ. ಆರೋಪ ಮಾಡಿದ ಮಾತ್ರಕ್ಕೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ. ಕೆಲಸ ಮಾಡದ ಯಾವ ಕೂಲಿಕಾರರಿಗೆ ಹಣ ಪಾವತಿಯಾಗಿದೆ ಎನ್ನುವುದನ್ನು ತೋರಿಸಲಿ.
ನಾಗಮೂರ್ತಿ ಕೆ. ಶೀಲವಂತ,
ಇಒ, ತಾಪಂ

Advertisement

Udayavani is now on Telegram. Click here to join our channel and stay updated with the latest news.

Next