ಬೆಂಗಳೂರು: ವಿದೇಶಗಳಿಂದ ಮದ್ಯ ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುವ ವ್ಯವಹಾರ ನಡೆಸುವುದಾಗಿ ನಂಬಿಸಿ ಹೈದ್ರಾಬಾದ್ ಮೂಲದ ಉದ್ಯಮಿಗೆ ಲಕ್ಷಾಂತರ ರೂ. ವಂಚಿಸಿದ ಕೇರಳ ಮೂಲದ ದಂಪತಿ ಎಚ್‌ಎಎಲ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೇರಳ ಮೂಲದ ಸುಬೀಷ್ ಪಿ.ವಾಸು ಮತ್ತು ಆತನ ಪತ್ನಿ ಶಿಲ್ಪಾ ಬಾಬು ಬಂಧಿತರು. ಆರೋಪಿಗಳು ಹೈದ್ರಾಬಾದ್ ಮೂಲದ ಉದ್ಯಮಿ ಕೆ.ಆರ್.ಕಮಲೇಶ್‌ಗೆ 65 ಲಕ್ಷ ರೂ. ವಂಚಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೆಯೇ ವಿಚಾರಣೆ ವೇಳೆ ಆರೋಪಿಗಳು ಈ ಹಿಂದೆ ರಾಜಕೀಯ ಮುಖಂಡ ಹೆಸರು ಹೇಳಿಕೊಂಡು ಚೈನ್‌ಲಿಂಕ್ ಮಾದರಿಯ ವ್ಯವಹಾರ ನಡೆಸುವುದಾಗಿ ನಂಬಿಸಿ ಹತ್ತಾರು ಮಂದಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಬಿಸೆನೆಸ್ ಎಕ್ಸ್‌ಚೇಂಜ್ ಗ್ರೂಪ್ ಎಲ್‌ಎಲ್‌ಪಿ ಕಂಪನಿ ನಡೆಸುತ್ತಿದ್ದು, ಕಂಪನಿ ಹೆಸರಿನಲ್ಲಿ 2022ರಲ್ಲಿ ಕಮಲೇಶ್‌ಗೆ ಕರೆ ಮಾಡಿ, ಲಿಕ್ಕರ್ ವ್ಯವಹಾರದ ಬಗ್ಗೆ ತಿಳಿಸಿದ್ದರು. ಬಳಿಕ ಮಾರತ್ತಹಳ್ಳಿಯಲ್ಲಿರುವ ಆರೋಪಿಗಳ ಕಂಪನಿಗೆ ಭೇಟಿ ನೀಡಿದ ದೂರುದಾರರಿಗೆ ಮದ್ಯದ ವ್ಯವಹಾರದ ಬಗ್ಗೆ ಮಾಹಿತಿ ನೀಡಿ, ವಿದೇಶಗಳಿಂದ ಮದ್ಯವನ್ನು ಭಾರತಕ್ಕೆ ತರಿಸಿಕೊಂಡು, ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡುತ್ತೇವೆ. ನೀವುಗಳು ಸಹ ಕರ್ನಾಟಕದ ಸಬ್ ಡಿಲರ್‌ಶಿಪ್ ಪಡೆದುಕೊಳ್ಳಿ, ನಂತರ ಮಾರಾಟದ ಎಲ್ಲ ವ್ಯವಹಾರ ನಾವು ನೋಡಿಕೊಳ್ಳುತ್ತೇವೆ ಎಂದಿದ್ದಿರು.
ಅಲ್ಲದೆ, ಪ್ರತಿ ಮದ್ಯದ ಬಾಟಲಿಗೆ 120 ರೂ. ಲಾಭ ಪಡೆಯಬಹುದು ಎಂದು ನಂಬಿಸಿದ್ದರು. ಹೀಗಾಗಿ ಮುಂಗಡ ಡೆಪಾಸಿಟ್ ಎಂದು ಕಮಲೇಶ್ ಹಂತವಾಗಿ 67 ಲಕ್ಷ ರೂ.ಅನ್ನು ಆರೋಪಿಗಳ ಕಂಪನಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದರು. ಜತೆಗೆ ಅಗ್ರಿಮೆಂಟ್ ಕೂಡ ಮಾಡಿಕೊಂಡಿದ್ದರು.
ಮತ್ತೂಂದೆಡೆ ಕಮಲೇಶ್, ಲಿಕ್ಕರ್ ವ್ಯವಹಾರಕ್ಕಾಗಿ ರೆಡ್ ಗೋಟ್ರೆಡಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಕಂಪನಿ ಆರಂಭಿಸಿದ್ದರು. ಆದರೆ, ಸುಮಾರು ತಿಂಗಳು ಕಳೆದರೂ ಆರೋಪಿಗಳು ವ್ಯವಹಾರದ ಬಗ್ಗೆ ಮಾಹಿತಿ ನೀಡಲಿಲ್ಲ. ಹೀಗಾಗಿ ಹಣ ವಾಪಸ್ ಕೇಳಿದ್ದಾರೆ. ಒಂದು ತಿಂಗಳ ಒಳಗಾಗಿ ಹಣ ವಾಪಸ್‌ಕೊಡುತ್ತೇವೆ ಎಂದಿದ್ದ ಆರೋಪಿಗಳು ಇದುವರೆಗೂ ಹಣ ನೀಡಿಲ್ಲ ಎಂದು ಕಮಲೇಶ್ ದೂರಿನಲ್ಲಿ ಆರೋಪಿಸಿದ್ದರು. ಈ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ರಾಜಕೀಯ ಮುಖಂಡರ ಜತೆ ಫೋಟೋ:
ಆರೋಪಿಗಳ ಪೈಕಿ ಶಿಲ್ಪಾ ಬಾಬು, ಕೇರಳ ಮತ್ತು ರಾಷ್ಟ್ರೀಯ ಪಕ್ಷವೊಂದರ ಮುಖಂಡರ ಜತೆ ಪೋಟೋ ತೆಗೆಸಿಕೊಂಡು, ವೇದಿಕೆ ಹಂಚಿಕೊಂಡು ಅವರ ಹೆಸರುಗಳನ್ನು ವಂಚನೆಗೆ ಬಳಸಿಕೊಂಡಿ ರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿಂದೆ ಲಿಕ್ಕರ್ ಮತ್ತು ತಾಜಾ ಮೀನು ವ್ಯಪಾರ ನಡೆಸುವುದಾಗಿ ನಂಬಿಸಿ ಹತ್ತಾರು ಮಂದಿಯಿಂದ ಕೋಟ್ಯಂತರ ರೂ. ಪಡೆದುಕೊಂಡಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮಂತ್ರಿಗಳ, ಅಧಿಕಾರಿಗಳ ಹೆಸರುಗಳನ್ನು, ಅವರ ಜತೆಗಿನ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಪಶ್ಚಿಮ ವಿಭಾಗದ ಪೊಲೀಸರು ದಂಪತಿಯನ್ನು ಬಂಧಿಸಿದ್ದರು. ಬಳಿಕ ಜಾಮೀನು ಪಡೆದುಕೊಂಡು ಇದೀಗ ಮತ್ತೆ ಅದೇ ಮಾದರಿಯಲ್ಲಿ ವಂಚಿಸಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.