ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ (ವರ್ಕ್ ವೀಸಾ) ಹೇಳಿ ಹಣ ಪಡೆದು ವಂಚಿಸಿದ ಆರೋಪದಲ್ಲಿ ಮಂಗಳೂರು ಪೊಲೀಸರು ಬಲ್ಮಠದ ಜೆರಿ ಇಥಿಯಲ್ ಸಿಕಾ (32)ನನ್ನು ಬಂಧಿಸಿದ್ದಾರೆ.
ಈತ ಬೆಂದೂರ್‌ನಲ್ಲಿ ಕಚೇರಿ ಹೊಂದಿದ್ದ. ಒಬ್ಬನೇ ವಂಚನೆ ಮಾಡುತ್ತಿದ್ದನೇ ಅಥವಾ ತಂಡ ಭಾಗಿಯಾಗಿದೆಯೇ ಎನ್ನುವ ಬಗ್ಗೆ ತನಿಖೆ ಮುಂದು ವರಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಕಾವೂರಿನ ಮಹಿಳೆಯೋರ್ವರು ವಿದೇಶದಲ್ಲಿ ಉದ್ಯೋಗಕ್ಕೆ ತೆರಳಲು ಎಪ್ರಿಲ್ ಮೊದಲ ವಾರದಲ್ಲಿ ತನ್ನ ಪರಿಚಿತ, ಆರೋಪಿ ಜೆರಿ ಇಥಿಯಲ್ ಸಿಖಾನ ಕಚೇರಿಗೆ ಹೋಗಿ ವಿಚಾರಿಸಿದ್ದರು. ಆಗ ಆತ ಕಚೇರಿ ಕೆಲಸದ ಬಗ್ಗೆ “ವರ್ಕ್ ವೀಸಾ’ ಇದೆ. ಅದಕ್ಕೆ 5.50 ಲ.ರೂ. ನೀಡಬೇಕು. ತಿಂಗಳಿಗೆ 3.50 ಲ.ರೂ. ವೇತನ ಇದೆ ಎಂದಿದ್ದ. ಇದನ್ನು ನಂಬಿದ ಮಹಿಳೆ ಚಿನ್ನಾಭರಣ ಅಡವಿಟ್ಟು 1 ಲ.ರೂ. ನಗದು ನೇರವಾಗಿ,
1 ಲ.ರೂ.ಗಳನ್ನು ನೆಫ್ಟ್ ಮೂಲಕ ಆರೋಪಿಯ ಖಾತೆಗೆ ಜಮೆ ಮಾಡಿದ್ದರು. ಅನಂತರ ವಿಚಾರಿಸಿ ದಾಗ ಆರೋಪಿ ಯಾವುದೇ ಪರವಾನಿಗೆ ಹೊಂದದೆ ಅನಧಿಕೃತವಾಗಿ ವ್ಯವಹಾರ ನಡೆಸುತ್ತಿರುವುದು ಗೊತ್ತಾಯಿತು. ಹಣ ಹಿಂದಿರುಗಿಸುವಂತೆ ಹೇಳಿದಾಗ ಆರೋಪಿ ವಂಚಿಸಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ವಂಚನೆಗೊಳಗಾಗಿರುವ ನಾಲ್ಕು ಮಂದಿ ಕೂಡ ದೂರು ನೀಡಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ವಂಚನೆಯಾಗಿದ್ದರೆ ದೂರು ನೀಡಿ :
ವಿದೇಶದಲ್ಲಿ ಉದ್ಯೋಗ ಕೊಡಿಸುವು ದಾಗಿ ಹೇಳಿ ವಂಚಿಸುತ್ತಿರುವ ಸಂಸ್ಥೆಗಳ ಬಗ್ಗೆ ಎಚ್ಚರ ವಹಿಸುವಂತೆ ವಿದೇಶಾಂಗ ವ್ಯವಹಾರ ಸಚಿವಾಲಯದ ವಲಸಿಗರ ಸಂರಕ್ಷಣಾಧಿಕಾರಿ ಸೂಚಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಸುತ್ತಮುತ್ತಲಿನ ಅಧಿಕೃತ ಏಜೆನ್ಸಿಗಳ ಬಗ್ಗೆ ಸಾರ್ವಜನಿಕರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ವಿದೇಶಿ ಉದ್ಯೋಗದ ಆಮಿಷ ನೀಡಿ ಯಾವುದೇ ಸಂಸ್ಥೆಯವರು ವಂಚಿಸಿದ್ದರೆ ಸಂತ್ರಸ್ತರು ಪೊಲೀಸರಿಗೆ ದೂರು ನೀಡಬಹುದಾಗಿದೆ.
– ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು