ಬೆಂಗಳೂರು: ಮುಂಬೈ ಪೊಲೀಸರ ಸೋಗಿನಲ್ಲಿ ಎಂಜಿನಿಯರ್‌ಗೆ ಕರೆ ಮಾಡಿದ ಸೈಬರ್ ಕಳ್ಳರು 26 ಲಕ್ಷ ರೂ. ವಂಚಿಸಿದ್ದಾರೆ.
ದೇವರಬೀಸನಹಳ್ಳಿಯ ನಿವಾಸಿ ಅಜಯ್ ಮಿಯಾನ್ (48) ವಂಚನೆಗೊಳಗಾದ ಎಂಜಿನಿಯರ್.
ಇತ್ತೀಚೆಗೆ ಅಜಯ್ ಮಿಯಾನ್‌ಗೆ ಅಪರಿಚಿತರು ಕರೆ ಮಾಡಿ, ಅಕ್ರಮ ವಸ್ತುಗಳನ್ನು ಒಳಗೊಂಡ ಪಾರ್ಸೆಲ್ ಅಜಯ್ ಮಿಯನ್ ಹೆಸರಲ್ಲಿ ಮುಂಬೈನಿಂದ ತೈವಾನ್‌ಗೆ ಬಂದಿರುವುದಾಗಿ ಹೇಳಿದ್ದರು. ನಂತರ ಪಿರ್ಯಾದುದಾರ ಆಧಾರ್ ಕಾರ್ಡಗೆ ಸಂಬಂಧಿಸಿದಂತೆ ಹಲವಾರರು ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ಇರುವುದಾಗಿ ಹೇಳಿದ್ದಾರೆ.
ನಂತರ ಅಪರಿಚಿತರು ಅಜಯ್‌ಗೆ ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಇದು ಪೊಲೀಸ್ ಕೇಸ್ ಆಗುವುದಾಗಿ ಬೆದರಿಸಿ ಸಹಾಯ ಮಾಡುವುದಾಗಿ ನಂಬಿಸಿದ್ದರು. ನಂತರ ಸ್ಕೈಪ್ ಮೂಲಕ ವಿಡಿಯೋ ಕರೆ ಮಾಡಿ ಈ ಕರೆಯನ್ನು ರೆಕಾರ್ಡ್ ಮಾಡಿಕೊಳ್ಳುವುದಾಗಿ ಹೇಳಿದ್ದರು. ಪರಿಶೀಲನೆಗಾಗಿ ಆಧಾರ್ ಕಾರ್ಡ್, ಬ್ಯಾಂಕ್ ಮಾಹಿತಿ ನೀಡುವಂತೆ ಸೂಚಿಸಿದ್ದರು. ಅದರಂತೆ ಅಜಯ್ ಅವರು ಕೇಳಿದ ಮಾಹಿತಿ ಒದಗಿಸಿದ್ದರು. ನಂತರ ವೆರಿಫಿಕೇಶನ್‌ಗಾಗಿ ಒಂದಿಷ್ಟು ಹಣ ಹಾಕಿದರೆ ಅದನ್ನು ವೆರಿಫಿಕೇಶನ್ ಬಳಿಕ ಹಿಂತಿರುಗಿಸುವುದಾಗಿ ನಂಬಿಸಿದ್ದರು. ಅದರಂತೆ ಹಂತ-ಹಂತವಾಗಿ ಅಪರಿಚಿತರು ಸೂಚಿಸಿರುವ ಬ್ಯಾಂಕ್ ಖಾತೆಗೆ ಅಜಯ್ 26.25 ಲಕ್ಷ ರೂ. ಜಮೆ ಮಾಡಿದ್ದಾರೆ.
ನಂತರ ಸಂಪರ್ಕಕ್ಕೆ ಸಿಗದೇ ವಂಚಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.