ಬಂಗಾರಪೇಟೆ: ತಾಲೂಕಿನ ಕೇತಗಾನಹಳ್ಳಿ ಗ್ರಾಪಂ ನಲ್ಲಿ 2022-23ನೆ ಸಾಲಿನ 15ನೇ ಹಣಕಾಸಿನಲ್ಲಿ ನಕಲಿ ಬಿಲ್ ಸೃಷ್ಠಿಸಿ 21ಲಕ್ಷ ರೂ. ಗಳನ್ನು ಅಧ್ಯಕ್ಷರು ಹಾಗೂ ಪಿಡಿಒ ಸೇರಿ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸದಸ್ಯರಿಂದಲೇ ಲೋಕಾಯುಕ್ತಕ್ಕೆ ಹಾಗೂ ಜಿಪಂ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ತಾಲೂಕಿನ ಕಾಮಸಮುದ್ರ ಹೋಬಳಿಯ ಕೇತಗಾನಹಳ್ಳಿ ಗ್ರಾಪಂ ಅಧ್ಯಕ್ಷರಾದ ಆಶಾಲತ ಮತ್ತು ಪಿಡಿಒಎಂ.ರವಿ 15ನೇ ಹಣಕಾಸು ಖರ್ಚು ಮಾಡುವ ನಿಯಮಾವಳಿಯನ್ನು ಉಲ್ಲಂಘನೆ ಮಾಡಿದ್ದು, ವಿವಿಧ ಅಭಿವೃದ್ಧಿಗೆ ಬಳಸಬೇಕಾದ 15ನೇ ಹಣಕಾಸಿನಲ್ಲಿ ಸದಸ್ಯರಿಗೆ ಮಂಕು ಬೂದಿ ಎರಚಿ 21ಲಕ್ಷ ಡ್ರಾ ಮಾಡಿ ಅದಕ್ಕೆ ನಕಲಿ ಬಿಲ್ ತಯಾರಿಸಿ ವಂಚಿಸಿರುವುದು ಬೆಳಕಿಗೆ ಬಂದಿದೆ. 15ನೇ ಹಣಕಾಸಿನಲ್ಲಿ 11ಲಕ್ಷಕ್ಕಿಂತ ಹೆಚ್ಚಿನ ಹಣ ಡ್ರಾ ಮಾಡಬಾರೆಂದು ಕಾನೂನು ಇದ್ದರೂ, ಸಹ ಅಧ್ಯಕ್ಷರು ಹಾಗೂ ಪಿಡಿಒ ಒಂದಾಗಿ ಎರಡೇ ತಿಂಗಳಲ್ಲಿ ಇಬ್ಬರ ಹೆಸರಿನಲ್ಲಿ 21ಲಕ್ಷ ಡ್ರಾ ಮಾಡಿರುವುದನ್ನು ಸದಸ್ಯರು ಪತ್ತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಒಂದೇ ತಿಂಗಳಲ್ಲಿ ಹತ್ತಾರು ಬಾರಿ ಹಣ ಡ್ರಾ: ತಾಲೂಕಿನ ಕಾಮಸಮುದ್ರದ ಮೋಹನ್ ಎಲೆಕ್ಟ್ರಿಕಲ್ಸ್ ಮತ್ತು ಹಾರ್ಡ್‌ವೇರ್ ಹಾಗೂ ಕೋಲಾರದ ಕರ್ನಾಟಕ ಎಲೆಕ್ಟ್ರಿಕಲ್ಸ್ ಏಜೆನ್ಸಿ ಎಂಬ ಹೆಸರಿನಲ್ಲಿ, ಒಂದೇ ತಿಂಗಳಲ್ಲಿ ಹತ್ತಾರು ಬಾರಿ ಎರಡು ಸಂಸ್ಥೆಗಳಿಗೆ ಹಣ ನೀಡಿರುವಂತೆ ನಕಲಿ ಬಿಲ್ ತಯಾರಿಸಿ 21ಲಕ್ಷ ರೂಗಳನ್ನು ಸರ್ಕಾರಕ್ಕೆ ವಂಚಿಸಲಾಗಿದೆ. ಈ ಹಿಂದೆ ಈ ಗ್ರಾಪಂ ಉತ್ತಮ ಹಾಗೂ ಭ್ರಷ್ಟಾಚಾರ ಇಲ್ಲದೆ ಆಡಳಿತ ನಡೆಸಿ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ದ್ದರಿಂದ ಎರಡು ಬಾರಿ ಮಹಾತ್ಮಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಇಂತಹ ಗ್ರಾಪಂ ನಲ್ಲಿ ಈಗ ಭ್ರಷ್ಟಾಚಾರ ನಡೆದಿರುವುದು ಗ್ರಾಪಂ ಆಡಳಿತ ಎತ್ತ ಸಾಗಿದೆ ಎಂದು ಗ್ರಾಮಸ್ಥರು ಪ್ರಶ್ನಿಸುವಂತಾಗಿದೆ.
ಹಣಕಾಸಿನ ಅವ್ಯವಹಾರ ತನಿಖೆಗೆ ಒತ್ತಾಯ: ಮಹಾತ್ಮಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗಳಿಸಿರುವ ಗ್ರಾಪಂ ನಲ್ಲಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಯಿಂದ ಸದಸ್ಯರ ಗಮನಕ್ಕೆ ತರದೆ, ಸರ್ವಾಧಿಕಾರಿಯಂತೆ ಹಣ ಡ್ರಾ ಮಾಡಿ ವಂಚನೆ ಮಾಡಿರುವ ಪ್ರಕರಣ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಸದಸ್ಯರು ಲೋಕಾಯುಕ್ತರಿಗೆ ದೂರು ನೀಡಿದ್ದರೆ. ಕಳೆದ ಎರಡು ವರ್ಷಗಳಿಂದ ಗ್ರಾಪಂಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಹಾಗೂ ಹಣಕಾಸಿನ ವ್ಯವಹಾರಗಳನ್ನು ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಸದಸ್ಯರಾದ ನಾರಾಯಣಸ್ವಾಮಿ, ಶ್ರೀಧರ್, ನಟರಾಜ್, ಅರುಣ, ರವಿ, ಸುಭ್ರಮಣಿ, ಪ್ರದೀಪ್ ಮತ್ತು ನಾಗರಾಜ್ ಒತ್ತಾಯಿಸಿದ್ದಾರೆ.
2022-23ರ ಸಾಲಿನಲ್ಲಿ 15ನೆ ಹಣಕಾಸು ಯೋಜನೆಯ 36 ಲಕ್ಷ ಅನುದಾನವನ್ನು ಖರ್ಚು ಮಾಡುವ ಬಗ್ಗೆ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಈ ವರ್ಷದಲ್ಲಿ ಅಭಿವೃದ್ಧಿಪಡಿಸದೇ ಈ ಅನುದಾನವನ್ನು ಇಲ್ಲಿಯವರೆಗೂ ಉಳಿಸಿಕೊಂಡು ಬಂದಿದ್ದು, ಪ್ರಸ್ತುತ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆಯುತ್ತಿದ್ದು, ಹಾಲಿ ಗ್ರಾಪಂ ಅಧ್ಯಕ್ಷರು ಅಧಿಕಾರ ಕೊನೆಗೊಳ್ಳುವ ಉಸಾಬರಿಯಲ್ಲಿ ಕೆಲವು ಸದಸ್ಯರು, ಹಾಲಿ ಪಿಡಿಒ ಎಂ.ರವಿ ನಕಲಿ ಬಿಲ್ ಸೃಷ್ಟಿಸಿ ಮೂರು ಅಂಗಡಿಗಳಲ್ಲಿ ಕುಡಿಯುವ ನೀರಿಗೆ ಸಂಬಂಧಪಟ್ಟ ಸಲಕರಣೆ ಖರೀದಿಸಿರುವ ಬಗ್ಗೆ ಅಕ್ರಮ ಬಿಲ್ ಮಾಡಲಾಗಿದೆ. ಈ ಕುರಿತು ತನಿಖೆ ನಡೆಸಿ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.
– ಶ್ರೀಧರ್, ಗ್ರಾಪಂ ಸದಸ್ಯರು