Advertisement
ಇಲ್ಲದ ವ್ಯಕ್ತಿಯೊಬ್ಬರನ್ನು ಸೃಷ್ಟಿಸಿ, ಬಳಿಕ ಆ ವ್ಯಕ್ತಿಯೇ ಮೃತಪಟ್ಟಿದ್ದಾನೆೆ ಎಂದು ನಂಬಿಸಿ ಮೋಸ ಮಾಡಿರುವ ಈ ತಂಡ, ಇದಕ್ಕಾಗಿ ಹಲವರಿಗೆ ಬೇರೆಬೇರೆ ವೇಷ ತೊಡಿಸಿದೆ. ಮೋಸ ಹೋದವರು ನೀಡಿದ ದೂರಿನ ಮೇರೆಗೆ ಇಡೀ ತಂಡ ಈಗ ಪೊಲೀಸರ ಅತಿಥಿಯಾಗಿದೆ.
Related Articles
Advertisement
ಗೋವಿಂದ ಬಾಬು ಪೂಜಾರಿ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೆ ಸ್ನೇಹಿತರ ಮೂಲಕ ಚೈತ್ರಾ ಹಾಗೂ ಆಕೆಯ ಮೂಲಕ ಗಗನ್ ಕಡೂರು ಪರಿಚಯವಾಗಿದೆ.
ವಿಶ್ವನಾಥ್ ಜೀ ಪಾತ್ರ ಸೃಷ್ಟಿ
ಚಿಕ್ಕಮಗಳೂರಿನಲ್ಲಿ ಗಗನ್‌ನನ್ನು ಭೇಟಿಯಾದಾಗ, ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಚಿಕ್ಕಮಗಳೂರಿನ ವಿಶ್ವನಾಥ್ ಜೀ ಮೂಲಕ ಶಿಫಾರಸು ಮಾಡಿಸುತ್ತೇನೆ ಎಂದು ನಂಬಿಸಿದ್ದ. ಬಳಿಕ 2022ರ ಜುಲೈ 4ರಂದು ವಿಶ್ವನಾಥ್ ಜೀ ಅವರನ್ನು ಪರಿಚಯಿಸಿದ್ದ. ಆಗ ವಿಶ್ವನಾಥ್ ಜೀ, ಹಣ ಕೊಟ್ಟರೆ ಟಿಕೆಟ್ ಕೊಡಿಸುತ್ತೇನೆ ಎಂದಿದ್ದ. ಮುಂಗಡ 3 ಕೋ.ರೂ.ಗೆ ಬೇಡಿಕೆ ಇಟ್ಟಿದ್ದ ಆತನಿಗೆ ಉದ್ಯಮಿಯು 50 ಲಕ್ಷ ರೂ. ಅನ್ನು ಶಿವಮೊಗ್ಗದ ಆರೆಸ್ಸೆಸ್ ಕಚೇರಿ ಎದುರು ಕೊಟ್ಟಿದ್ದರು ಎನ್ನಲಾಗಿದೆ.
ಸ್ವಾಮೀಜಿಗೆ 1.5 ಕೋ. ರೂ.
ದೂರುದಾರರಿಗೆ ಕರೆ ಮಾಡಿದ ಗಗನ್, ಟಿಕೆಟ್‌ಗೆ ಹೊಸಪೇಟೆ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ ಶಿಫಾರಸು ಬೇಕಾಗುತ್ತದೆ ಎಂದಿದ್ದ. ಹೀಗಾಗಿ ಅವರನ್ನು ಭೇಟಿ ಮಾಡಲಾಗಿತ್ತು. ಆಗ ಸ್ವಾಮೀಜಿ 1.5 ಕೋ.ರೂ. ಕೊಡಬೇಕು ಎಂದಿದ್ದರು. ಅವರಿಗೆ ಬೆಂಗಳೂರಿನ ವಿಜಯಗರದಲ್ಲಿರುವ ಸ್ವಾಮೀಜಿ ಮನೆಯಲ್ಲೇ ಭೇಟಿಯಾಗಿ ಹಣ ಕೊಡಲಾಗಿದೆ. ಆನಂತರ 2022ರ ಅ.23ರಂದು ಬೆಂಗಳೂರಿನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಚನ್ನ ನಾಯ್ಕ ಎಂಬಾತನನ್ನು ಕೇಂದ್ರೀಯ ಚುನಾವಣ ಸಮಿತಿ ಸದಸ್ಯ ಎಂದು ಗಗನ್ ಮತ್ತು ಚೈತ್ರಾ ಪರಿಚಯಿಸಿದ್ದರು.
ವಿಶ್ವನಾಥ್ ಜೀ ಸಾವು!
ಕೆಲವು ದಿನಗಳ ಬಳಿಕ ದೂರು ದಾರರಿಗೆ ಕರೆ ಮಾಡಿದ ಗಗನ್, ವಿಶ್ವನಾಥ್ ಜೀ ಕಾಶ್ಮೀರದಲ್ಲಿ ಮೃತ ಪಟ್ಟಿದ್ದಾರೆ ಎಂದಿದ್ದ. ಅನುಮಾನ
ಗೊಂಡ ದೂರುದಾರ, ಕಾಶ್ಮೀರದ ಲ್ಲಿರುವ ಸ್ನೇಹಿತ, ನಿವೃತ್ತ ಸೇನಾಧಿಕಾರಿ ಯೋಗೇಶ್‌ಗೆ ಮಾಹಿತಿ ನೀಡಿದ್ದರು. ಆರೆಸ್ಸೆಸ್ ಜತೆಗೆ ಯೋಗೇಶ್ ವಿಚಾರಿಸಿದಾಗ, ವಿಶ್ವನಾಥ್ ಹೆಸರಿನ ಯಾರೂ ಇಲ್ಲ ಎಂಬುದು ಗೊತ್ತಾಯಿತು. ಬಳಿಕ ಗಗನ್ ಮತ್ತು ಚೈತ್ರಾರನ್ನು ಕರೆಸಿಕೊಂಡು ಹಣ ವಾಪಸ್ ಕೊಡಲು ಹೇಳಿದ್ದರು. ಅದಕ್ಕೆ ಅವರಿಬ್ಬರೂ “ನಿಮ್ಮ ಹಣ ವಿಶ್ವನಾಥ್ ಜೀ ಅವರಲ್ಲಿತ್ತು’ ಎಂದು ಹೇಳಿ ಹೋಗಿದ್ದರು. ಅನಂತರ ಹಾಲಶ್ರೀ ಸ್ವಾಮೀಜಿಯನ್ನು ಭೇಟಿಯಾಗಿ ವಿಚಾರ ತಿಳಿಸಿದಾಗ ಆತ ಕೂಡ, “ವಿಶ್ವನಾಥ್ ಜೀ ಎಂಬವರು ಗೊತ್ತಿಲ್ಲ. ನೀವು ಕೊಟ್ಟ ಒಂದೂವರೆ ಕೋಟಿ ರೂ. ಕೊಡುತ್ತೇನೆ. ತನ್ನನ್ನು ಬಿಟ್ಟು ಬಿಡಿ’ ಎಂದು ಬೇಡಿ ಕೊಂಡಿದ್ದರು ಎಂದು ದೂರುದಾರರು ಹೇಳಿದ್ದಾರೆ.
ನಕಲಿ ಪಾತ್ರಗಳು ಸೃಷ್ಟಿ
ಗೋವಿಂದಬಾಬು ಪೂಜಾರಿ, ಚಿಕ್ಕಮಗಳೂರಿನ ಪರಿಚಯಸ್ಥ ಬಿಜೆಪಿ ಕಾರ್ಯಕರ್ತ ಮಂಜುಗೆ ಈ ಬಗ್ಗೆ ತಿಳಿಸಿದ್ದರು. ಆಗ ಮಂಜುಗೆ ಸಲೂನ್‌ನಲ್ಲಿ ಇಬ್ಬರು ಆರೆಸ್ಸೆಸ್ ಕಾರ್ಯಕರ್ತರಂತೆ ಮೇಕಪ್ ಮಾಡಿಸಿಕೊಂಡು ಹೋಗಿದ್ದ ಮಾಹಿತಿ ಸಿಕ್ಕಿತ್ತು. ಅದು ರಮೇಶ್ ಮತ್ತು ಧನರಾಜ್ ಎಂಬುದು ಗೊತ್ತಾಯಿತು. ಮಂಜು ಸಹಾಯದಿಂದ ಧನರಾಜ್ ಮತ್ತು ರಮೇಶ್‌ರನ್ನು ಪತ್ತೆಹಚ್ಚಿ ವಿಚಾರಿಸಿದಾಗ, ರಮೇಶ್ ಎಂಬಾತ 1.20 ಲಕ್ಷ ರೂ. ಪಡೆದು ವಿಶ್ವನಾಥ್ ಜೀಯಂತೆ ನಟಿಸಿದ್ದಾನೆ. ಧನರಾಜ್, 2.50 ಲಕ್ಷ ರೂ. ಪಡೆದು ಆರೆಸ್ಸೆಸ್‌ನ ನಾಯಕನಾಗಿ ನಟಿಸಿದ್ದಾನೆ. ಕುಮಾರಕೃಪಾದಲ್ಲಿ ಪರಿಚಯವಾಗಿದ್ದ ಚನ್ನ ನಾಯ್ಕ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಚಿಕನ್ ಕಬಾಬ್ ವ್ಯಾಪಾರಿ. ಆತನಿಗೆ ಗಗನ್ 93 ಸಾ. ರೂ. ಕೊಟ್ಟಿರುವುದು ತಿಳಿಯಿತು.
ಗಗನ್ ಮನೆಯಲ್ಲೇ ಕಥೆ ಸೃಷ್ಟಿ
ಇಡೀ ಕಥೆ ಸಿದ್ಧಗೊಂಡಿರುವುದು ಚಿಕ್ಕಮಗಳೂರಿನ ಗಗನ್ ಮನೆಯಲ್ಲಿ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಣ ಬೆದರಿಕೆ
ಕೆ.ಆರ್.ಪುರಂನಲ್ಲಿ ಚನ್ನ ನಾಯ್ಕ ನನ್ನು ಪತ್ತೆ ಹಚ್ಚಿದ್ದ ದೂರುದಾರರಿಗೆ, ಇಡೀ ವಂಚನೆ ಬಲೆಯನ್ನು ಗಗನ್ ಮತ್ತು ಚೈತ್ರಾ ಹೆಣೆದಿದ್ದಾರೆ ಎಂಬುದು ಗೊತ್ತಾಗಿದೆ. ಆಗ ನಾಯ್ಕ ಮತ್ತೂಂದು ಸ್ಫೋಟಕ ವಿಚಾರವನ್ನು ದೂರುದಾರರಿಗೆ ಹೇಳಿದ್ದು,
“ಒಂದು ವೇಳೆ ಗೋವಿಂದಬಾಬು ಪೂಜಾರಿ ಹಣ ಕೇಳಿದರೆ, ನ್ಯಾಯಾಧೀಶರಿಗೆ ಹೇಳಿ ಶಾಶ್ವತವಾಗಿ ಜೈಲಿಗೆ ಹಾಕಿಸುತ್ತೇನೆ ಅಥವಾ ಭೂಗತ ಪಾತಕಿಗಳ ಮೂಲಕ ಕೊಲೆ ಮಾಡಿಸುತ್ತೇನೆ ಎಂದು ಚೈತ್ರಾ ಮತ್ತು ಗಗನ್ ತನ್ನ ಬಳಿ ಹೇಳಿದ್ದರು ಎಂದಿದ್ದ. ಹೀಗಾಗಿ ಒಟ್ಟಾರೆ ಐದು ಕೋಟಿ ರೂ. ಪಡೆದು ವಂಚಿಸಿದ ಚೈತ್ರಾ ಕುಂದಾಪುರ, ಹಾಲಶ್ರೀ ಸ್ವಾಮೀಜಿ, ಗಗನ್ ಕಡೂರು ಸಹಿತ ಎಲ್ಲ ಆರೋಪಿಗಳ ವಿರುದ್ಧವೂ ದೂರು ನೀಡಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತರು, ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವಹಿಸಿದ್ದರು. ಸಿಸಿಬಿಯ ಡಿಸಿಪಿ ಶ್ರೀನಿವಾಸ ಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳನ್ನು ಬೆಂಗಳೂರಿನ ಒಂದನೇ ಎಸಿಎಂಎಂ ಕೋರ್ಟ್ 10 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿದೆ.
ಧನರಾಜ್, ರಮೇಶ್‌ಗೆ ಕೊಟ್ಟಿದ್ದು 10 ಲಕ್ಷ ರೂ.
ನಕಲಿ ವಿಶ್ವನಾಥ್ ಜೀ ಮತ್ತು ಕೇಂದ್ರ ನಾಯಕನ ಪಾತ್ರ ಮಾಡಿದ್ದ ರಮೇಶ್ ಮತ್ತು ಧನರಾಜ್‌ಗೆ ಚೈತ್ರಾ ಕುಂದಾಪುರ 10 ಲಕ್ಷ ರೂ. ಕೊಟ್ಟಿರುವುದಾಗಿ ಖುದ್ದು ಧನರಾಜ್ ಹೇಳಿದ್ದಾನೆ. “ಇಷ್ಟು ದೊಡ್ಡ ಮಟ್ಟದ ವ್ಯವಹಾರ ಎಂಬುದು ಗೊತ್ತಿರಲಿಲ್ಲ. ನಿಮಗೂ ಅನುಕೂಲ ಆಗುತ್ತದೆ ಎಂದಿದ್ದಕ್ಕೆ ನಾವು ಒಪ್ಪಿಕೊಂಡಿದ್ದೇವೆ. ನಾನು ಹೇಳಿದಂತೆ ನೀವು ನಟಿಸಿ ಎಂದಿದ್ದರು. ನಾವು ಹಾಗೇ ಮಾಡಿದ್ದೀವಿ ಅಷ್ಟೇ’ ಎಂದು ಧನರಾಜ್ ಮತ್ತು ರಮೇಶ್ ಹೇಳಿದ್ದಾರೆ.
“ಎಲ್ಲವನ್ನು ಸೃಷ್ಟಿಸಿದ್ದು ಗಗನ್. ಆತ ಹೇಳಿದಂತೆ ನಟಿಸಿದ್ದೇವೆ. ಟಿಕೆಟ್ ನೀಡಿದರೆ ಅವರು (ಗೋವಿಂದಬಾಬು ಪೂಜಾರಿ) ಗೆಲ್ಲುತ್ತಾರೆ. ಆಗ ನಿಮಗೂ ಸಹಾಯವಾಗುತ್ತದೆ ಎಂದು ನಮಗೆ ಒಟ್ಟು 10 ಲಕ್ಷ ರೂ. ಕೊಟ್ಟಿದ್ದಾರೆ’ ಎಂದು ಧನರಾಜ್ ಹೇಳಿದ್ದಾನೆ.