ಬೆಂಗಳೂರು: ಖಾಸಗಿ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ(ಎಂ.ಡಿ) ಜಿ.ಎಂ.ಕುಮಾರ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಂಚನೆ ಪ್ರಕರಣ ಸಂಬಂಧ ಕೋರ್ಟ್‌ಗೆ ಹಾಜರಾಗಲು ಬಂದಾಗ ಆರೋಪಿಯನ್ನು ಬಂಧಿಸಿದ್ದು, 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಕೊಂಡಿದ್ದಾರೆ.
ಅಶ್ವಿನ್ ಮಹೇಂದ್ರ ಎಂಬುವರು 2022ರಲ್ಲಿ ವಿಜಯನಗರ ಠಾಣೆಯಲ್ಲಿ ಕುಮಾರ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಆದರೆ, ಕುಮಾರ್ ಹೈಕೋರ್ಟ್‌ನಲ್ಲಿ ಜಾಮೀನು ಪಡೆದುಕೊಂಡಿದ್ದರು. ಅದನ್ನು ಪ್ರಶ್ನಿಸಿ ದೂರುದಾರರು ಸುಪ್ರೀ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿ, ಕೋರ್ಟ್‌ಗೆ ಶರಣಾಗುವಂತೆ ಸೂಚಿಸಿತ್ತು. ಈ ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.
ದೂರುದಾರ ಅಶ್ವಿನ್ ಮಹೇಂದ್ರ ಮತ್ತು ಕುಮಾರ್ ಪಾಲುದಾರಿಕೆಯಲ್ಲಿ ಈಗಲ್ ಸೈಟ್ ಮಿಡಿಯಾ ಕಂಪನಿ ಆರಂಭಿಸಿದ್ದರು. ಇಬ್ಬರು ಕಂಪನಿಯ ನಿರ್ದೇಶಕರಾಗಿದ್ದರು. ಆದರೆ, ಆರೋಪಿ ಕುಮಾರ್ ಒಬ್ಬರೇ ಕಾನೂನು ಬಾಹಿರವಾಗಿ ಆಡಳಿತ ಮಂಡಳಿ ಸಭೆ ನಡೆಸಿದ್ದರು. ಅಶ್ವಿನ್ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಬ್ಯಾಂಕ್ ಗಳಲ್ಲಿ ಖಾತೆ ತೆರೆದು ಕೋಟ್ಯಂತರ ರೂ. ವಂಚಿಸಿದ್ದರು ಎಂದು ಪ್ರಕರಣ ದಾಖಲಾಗಿತ್ತು.