ಬೆಂಗಳೂರು: ಮಣಿಪಾಲ ಸಹಿತ ರಾಜ್ಯದ ವಿವಿಧೆಡೆಗಳಲ್ಲಿ ಹಲವರಿಗೆ ವಂಚಿಸಿ ಜೈಲು ಸೇರಿರುವ ಉಡುಪಿ ಮೂಲದ ಸ್ವರೂಪ್ ಶೆಟ್ಟಿ ವಿರುದ್ಧ ಮತ್ತೂಂದು ವಂಚನೆ ಪ್ರಕರಣ ದಾಖಲಾಗಿದೆ.
“ಸಹೋದರನಿಗೆ ಪ್ರತಿಷ್ಠಿತ ಹೊಟೇಲ್‌ನಲ್ಲಿ ಕೆಲಸ ಕೊಡಿಸುವು ದಾಗಿ ನಂಬಿಸಿ 28.70 ಲ. ರೂ. ಪಡೆದು ಸ್ವರೂಪ್ ಶೆಟ್ಟಿ ವಂಚಿಸಿದ್ದಾನೆ’ ಎಂದು ಕಿರಣ್ ಎಂಬವರು ಕಾಡುಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಸ್ವರೂಪ್ ಶೆಟ್ಟಿ ಹಾಗೂ ಆತನ ತಂದೆ ಮಂಜುನಾಥ್ ಶೆಟ್ಟಿ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ವಿವರ :
ರ್ಯಾಡಿಸನ್ ಬ್ಲೂ ಏಟ್ರಿಯಾ ಹೊಟೇಲ್‌ನಲ್ಲಿ ಉಳಿದುಕೊಳ್ಳುತ್ತಿದ್ದ ಸ್ವರೂಪ್ ಶೆಟ್ಟಿ, ಅಲ್ಲಿನ ಸಿಬಂದಿ ಆರ್ಶದ್‌ನಿಂದ ಕಳೆದ ಮಾರ್ಚ್‌ನಲ್ಲಿ ಮ್ಯಾನೇಜರ್ ಕಿರಣ್‌ನ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಮೇ ತಿಂಗಳಿನಲ್ಲಿ ಕಿರಣ್‌ನ ಸಹೋದರನಿಗೆ ಪ್ರತಿಷ್ಠಿತ ಹೊಟೇಲ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಬಳಿಕ ವಿವಿಧ ಕಾರಣ ಮುಂದಿಟ್ಟು ಹಂತಹಂತವಾಗಿ ಒಟ್ಟು 28. 70 ಲ. ರೂ. ವಂಚಿಸಿದ್ದಾನೆ. ಆತನ ತಂದೆ ಮಂಜುನಾಥ್ ಶೆಟ್ಟಿಯೂ ಕರೆ ಮಾಡಿ, ಮಗ ಕೊಡಬೇಕಾಗಿರುವ ಹಣವನ್ನು ತಾನು ಕೊಡುತ್ತೇನೆ. ಪೊಲೀಸರಿಗೆ ದೂರು ನೀಡಬೇಡಿ ಎಂದು ಕೇಳಿಕೊಂಡಿದ್ದರು. ಆದರೆ ಹಣ ಕೊಟ್ಟಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲವೆಡೆ ಪ್ರಕರಣ :
ಸ್ವರೂಪ್ ಶೆಟ್ಟಿ ವಿರುದ್ಧ ಮಣಿಪಾಲ, ಶಿವಮೊಗ್ಗೆ, ಪುಣೆ ಸಹಿತ ಹಲವು ಕಡೆಗಳಲ್ಲಿ ವಂಚನೆ ಪ್ರಕರಣಗಳಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.