ಒಂದು ದಟ್ಟಾರಣ್ಯದಲ್ಲಿ ಸಿಂಹರಾಜ ವಾಸವಿದ್ದ. ಅವನು ಬಾಯಿಬಿಟ್ಟರೆ, ಅರ್ಧ ಕಾಡಿನಲ್ಲಿ ದುರ್ಗಂಧವೇ ತುಂಬಿಕೊಳ್ಳುತ್ತಿತ್ತು. ಆತನ ಗಬ್ಬು ದುರ್ನಾತ ತಾಳಲಾರದೇ, ಎಷ್ಟೋ ಜೀವಿಗಳು ಆತನ ಆಸುಪಾಸಿನಲ್ಲಿ ಸುಳಿಯುತ್ತಿರಲಿಲ್ಲ. ಹೇಗೋ ಒಂದು ದಿನ ಅದಕ್ಕೆ, ತನ್ನ ಬಾಯಿ ಗಬ್ಬು ವಾಸನೆಯಿಂದ ಕೂಡಿರುವ ಸಂಗತಿ ಕಿವಿಗೆ ಬಿತ್ತು. ಆದರೆ, ಅದನ್ನು ಒಪ್ಪಿಕೊಳ್ಳಲು ಸಿಂಹ ಸುತಾರಂ ತಯಾರಿಲ್ಲ.
ಒಂದು ದಿನ ಕಾಡಿನ ಹಾದಿಯಲ್ಲಿ ಸಿಂಹ ವಿರಾಜಮಾನವಾಗಿ ಹೋಗುತ್ತಿದ್ದಾಗ, ಅಲ್ಲಿ ಕಾಡುಕುರಿ ಎದುರಿಗೆ ಸಿಕ್ಕಿತು. “ಏಯ್ ನಿಲ್ಲು… ನನ್ನ ಬಾಯಿಂದ ದುರ್ವಾಸನೆ ಬರುತ್ತಾ?’ ಎಂದು ಕೇಳಿತು, ಸಿಂಹ. ಆ ಕಾಡುಕುರಿ ಮರುಯೋಚಿಸದೇ, ತನ್ನ ಸಹಜ ಪ್ರಾಮಾಣಿಕತೆಯಿಂದ “ಹೌದು ಮಹಾರಾಜ. ಭಯಂಕರ ಕೆಟ್ಟ ವಾಸನೆ ಬರುತ್ತೆ’ ಎಂದು ಹೇಳಿತು. ಸಿಂಹಕ್ಕೆ ಕೋಪ ತಾಳಲಾರದೇ, “ಕಾಡಿನ ರಾಜನಿಗೇ ಹೀಗೆ ಹೇಳುತ್ತೀಯಾ?’ ಎಂದು ಅದರ ಮೇಲೆ ಎಗರಿ, ಅದನ್ನು ಕೊಂದು ತಿಂದಿತು.
ಮರುದಿನ ಮತ್ತೆ ಸಿಂಹ ಗುಹೆಯ ಹೊರಗೆ ಸುತ್ತುತ್ತಿದ್ದಾಗ, ತೋಳ ಕಾಣಿಸಿಕೊಂಡಿತು. ತೋಳಕ್ಕೂ ಅದೇ ಪ್ರಶ್ನೆ; “ಏಯ್ ನಿಲ್ಲು… ನನ್ನ ಬಾಯಿಂದ ದುರ್ವಾಸನೆ ಬರುತ್ತಾ?’. ತೋಳ ಕೂಡ ಇದ್ದ ವಿಚಾರವನ್ನೇ ಹೇಳಬಯಸಿ, “ಹೌದು ಮಹಾರಾಜ… ನೀನು ಬಾಯಿಬಿಟ್ಟರೆ ಎದುರಿಗೆ ಯಾವ ಜೀವಿಯೂ ಒಂದು ಕ್ಷಣ ನಿಲ್ಲಲೂ ಆಗುವುದಿಲ್ಲ. ಅಷ್ಟು ದುರ್ವಾಸನೆ…’ ಎಂದಿತು. ಸಿಂಹಕ್ಕೆ ಕೋಪ ಬಂದು, ತೋಳವನ್ನೂ ಸಾಯಿಸಿತು.
ಮರುದಿನ ಸಿಂಹ ಕಾಡಿನಲ್ಲಿ ವಿಹರಿಸುತ್ತಿದ್ದಾಗ, ನರಿರಾಯ ಕಂಡ. ಅದಕ್ಕೂ ಆವಾಜ್ ಹಾಕಿ, ಕರೆಯಿತು. “ನನ್ನ ಬಾಯಿಂದ ದುರ್ವಾಸನೆ ಬರುತ್ತಾ?’ ಎಂದು ಸಿಂಹ ದರ್ಪದಿಂದ ಕೇಳಿತು. ಜಾಣ ನರಿರಾಯನಿಗೆ ಈ ಹಿಂದೆ ಪ್ರಾಣ ಕಳೆದುಕೊಂಡ, ಕಾಡುಕುರಿ ಮತ್ತು ತೋಳದ ವಿಚಾರ ತಿಳಿದಿತ್ತು. ಈಗ ಸಿಂಹನಿಂದ ಹೇಗೆ ತಪ್ಪಿಸಿಕೊಳ್ಳುವುದೆಂದು ಯೋಚಿಸಿದಾಗ ಉಪಾಯವೊಂದು ಹೊಳೆಯಿತು.
ನರಿರಾಯ ಕೆಮ್ಮುತ್ತಾ, “ನನಗೆ ಕೆಲ ದಿನಗಳಿಂದ ಕೆಮ್ಮು, ಜೋರು ನೆಗಡಿ. ಯಾವ ವಾಸನೆಯನ್ನೂ ಆಘ್ರಾಣಿಸಲಾಗುತ್ತಿಲ್ಲ. ಕ್ಷಮಿಸು ಮಹಾರಾಜ’ ಎಂದು ವಿನಂತಿಸಿಕೊಂಡಿತು. ಸಿಂಹ ಹೋಗಲಿ ಬಿಡು ಎಂದು ಹೇಳಿ ನರಿಯನ್ನು ಬೀಳ್ಕೊಟ್ಟಿತು.
* ಸೌಭಾಗ್ಯ