Advertisement

Bhopal: ರಸ್ತೆ ಬದಿ ಕುಳಿತಿದ್ದವರ ಮೇಲೆ ಏಕಾಏಕಿ ನರಿ ದಾಳಿ: ವಿಡಿಯೋ ವೈರಲ್

06:50 PM Sep 10, 2024 | Team Udayavani |

ಭೋಪಾಲ್:‌  ಇಬ್ಬರು ವ್ಯಕ್ತಿಗಳ ಮೇಲೆ ನರಿಯೊಂದು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆಯೊಂದು ಮಧ್ಯಪ್ರದೇಶದ ಸೆಹೋರ್‌ ಜಿಲ್ಲೆಯಲ್ಲಿ ಸೋಮವಾರ‌ (ಸೆ.09) ನಡೆದಿದೆ.

Advertisement

ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಬ್ಬರು ಸಂಜೆಯ ಹೊತ್ತಿನಲ್ಲಿ ರಸ್ತೆ ಬದಿಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಬಂದ ನರಿಯು ಏಕಾಏಕಿ ಇಬ್ಬರ ಮೇಲೂ ದಾಳಿ ನಡೆಸಿದೆ. ಮೊದಲೊಬ್ಬನ ಮೇಲೆ ದಾಳಿ ನಡೆಸಿದ ನರಿಯನ್ನು ಆತ ದೂರ ತಳ್ಳಲು ಪ್ರಯತ್ನಿಸಿದರೂ ಸಾದ್ಯವಾಗಲಿಲ್ಲ. ಅದೇ ಸಮಯಕ್ಕೆ  ನರಿ ಜೊತೆಗಿದ್ದ ಮತ್ತೊಬ್ಬನ ಮೇಲೆ ದಾಳಿ ನಡೆಸಿದೆ. ಆತ ಅದನ್ನು ಸುಮಾರು 15 ಅಡಿಯಷ್ಟು ದೂರ ಎಸೆದಿದ್ದುದರಿಂದ ನರಿಯು ಹೆದರಿ ಓಡಿದೆ. ಇದೀಗ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗಾಯಗೊಂಡವರು ಶ್ಯಾಮ್‌ ಯಾದವ್‌ ಹಾಗೂ ನರ್ಮದಾ ಪ್ರಸಾದ್‌ ಎಂದು ಗುರುತಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ನರ್ಮದಾಪುರಂ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಸಲುವಾಗಿ ಸ್ಥಳೀಯ ಅಧಿಕಾರಿಗಳು ಸ್ಥಳೀಯರಿಗೆ ಮನೆಯಿಂದ ಹೊರಗಡೆ ಹೋಗುವಾಗ ಬಹಳ ಜಾಗರೂಕವಾಗಿರಬೇಕು, ಒಂಟಿಯಾಗಿ ಹೊರ ಹೋಗುವುದನ್ನು ತಡೆಯಬೇಕು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

“ನಾವು ಹಳ್ಳಿಯ ಜನರಿಗೆ ಮನೆಯಿಂದ ಹೊರಹೋಗುವ ಸಂದರ್ಭ ಬಂದಾಗ ಗುಂಪುಗಳಾಗಿ ತೆರಳುವಂತೆ ತಿಳಿಸಿದ್ದೇವೆ. ಜೊತೆಗೆ ಈ ಘಟನೆಯ ಕುರಿತು ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಈಗಾಗಲೆ ರೇಂಜರ್ ಹರೀಶ್‌ ಮಹೇಶ್ವರಿ ಗಾಯಾಳುಗಳನ್ನು ಭೇಟಿ ಮಾಡಿ ಪರಿಹಾರವನ್ನು ವಿತರಿಸಿದ್ದಾರೆ” ಎಂದು ಗ್ರಾಮ ಪಂಚಾಯತಿ ಸಹಾಯಕ ಕಾರ್ಯದರ್ಶಿ ರಾಮಕೃಷ್ಣ ಉಯ್ಕೆ ತಿಳಿಸಿದ್ದಾರೆ.

Advertisement

ಇತ್ತೀಚೆಗೆ ನಡೆದ ನರಿಗಳ ದಾಳಿಯಿಂದಾಗಿ ಭಯಭೀತರಾದಂತಹ ಸ್ಥಳೀಯರು ಮನೆಯಿಂದ ಹೊರಹೋಗುವ ಸಂದರ್ಭದಲ್ಲಿ ಕೋಲುಗಳನ್ನು ಜೊತೆಗೆ ತೆಗೆದುಕೊಂಡು ಹೋಗಲು ಪ್ರಾರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ.

ಹಳ್ಳಿಯ ಸುತ್ತಲೂ ಅರಣ್ಯ ಸುತ್ತುವರೆದುದರಿಂದ ನರಿಗಳು ಪೊದೆಗಳ ಒಳಗೆ ಅಡಗಿರುವ ಸಾಧ್ಯತೆ ಇದ್ದು, ಅವು ಮರಳಿ ದಾಳಿ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಸೋಮವಾರದಂದೇ ಇಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಸಲ್ಕಂಪುರ ನಲ್ಲಿ ಐದು ಜನರ ಮೇಲೆ ನರಿಯು ದಾಳಿ ನಡೆಸಿದ್ದು, ಇಬ್ಬರಿಗೆ ಗಾಯಗಳಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next