Advertisement

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

09:17 PM May 17, 2024 | Team Udayavani |

ಬೆಳಗಾವಿ: ಪುದುಚೇರಿ-ದಾದರ್ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವ್ಯಕ್ತಿಯನ್ನು ಹತ್ಯೆಗೈದು, ಟಿಸಿ ಸೇರಿ ಇಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ತೆಗೆ ನಾಲ್ಕು ವಿಶೇಷ ತಂಡ ರಚಿಸಲಾಗಿದೆ ಎಂದು ರೈಲ್ವೆ ಇಲಾಖೆ ಡಿಐಜಿ ಶರಣಪ್ಪ ತಿಳಿಸಿದರು.

Advertisement

ನಗರದ ಬೀಮ್ಸ್ ಆಸ್ಪತ್ರೆಗಡ ಶುಕ್ರವಾರ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಟಿಸಿ ಆಶ್ರಫ ಕಿತ್ತೂರ ಹಾಗೂ ಪ್ರಯಾಣಿಕನ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ‌ ಅವರು, ಹಲ್ಲೆ ಮಾಡಿದ ಆರೋಪಿ ಪತ್ತೆಗೆ ಆರ್ ಪಿ ಎಫ್, ಜಿಆರ್ ಪಿ ಮತ್ತು ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲಿ ಐವರಂತೆ ನಾಲ್ಕು ವಿಶೇಷ ತಂಡಗಳನ್ನು ಈಗಾಗಲೇ ರಚನೆ ಮಾಡಲಾಗಿದೆ. ಆರೋಪಿಯ ಶೋಧ ಕಾರ್ಯ ನಡೆಸಿದ್ದಾರೆ ಎಂದರು.

ಐಪಿಸಿ ಸೆಕ್ಷನ್ 302, 307, 332, 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ‌. ಪುದುಚೇರಿ-ದಾದರ್ ಎಕ್ಸಪ್ರೆಸ್ ರೈಲಿನಲ್ಲಿ ಘಟನೆ ನಡೆದಿದೆ. ಅನಾಮಿಕ ಪ್ರಯಾಣಿಕ ಟಿಕೆಟ್ ವಿಚಾರಕ್ಕೆ ಟಿಟಿಇ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು, ಅವರ ಸಹಾಯಕ್ಕೆ ಬಂದ ಕೋಚ್ ಹೆಲ್ಪಿಂಗ್ ಸಿಬ್ಬಂದಿ ದೇವರ್ಷಿ ವರ್ಮಾ ಮೇಲೆ ಹಲ್ಲೆ ಆಗಿದ್ದು, ಈತ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಈಗಾಗಲೇ ರೈಲ್ವೆ ಇಲಾಖೆಯೊಂದಿಗೆ ಮಾತನಾಡಲಾಗಿದೆ. ಮೃತನ ಕುಟುಂಬಕ್ಕೆ ರೈಲ್ವೆ ಇಲಾಖೆಯಿಂದ ಪರಿಹಾರ ನೀಡಲಾಗುತ್ತಿದೆ. ದೇವರ್ಷಿ ವರ್ಮಾ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತಿದೆ ಎಂದರು.

ಜಿಆರ್ ಪಿ ಪೊಲೀಸ್ ಸಿಬ್ಬಂದಿ ಕಡಿಮೆ ಇದೆ. ಅದನ್ನು ಹೆಚ್ಚಿಸಲು ಕ್ರಮ ಕೈಗೊಳುತ್ತೇವೆ. ಆರೋಪಿಯು ಚಲಿಸುವ ರೈಲಿನಲ್ಲಿ ಇಳಿದಿರುವ ಮಾಹಿತಿ ಇದ್ದು, ಆರ್ ಪಿ ಎಫ್ ಪೊಲೀಸರು ಘಟನೆ ಆದಾಗ ಇರಲಿಲ್ಲ. ನಮ್ಮ ರಾಜ್ಯದಲ್ಲಿ ದಿನಕ್ಕೆ 14೦೦ ರೈಲು ಓಡಾಡುತ್ತವೆ. ಆದರೆ ನಮ್ಮ ಸಿಬ್ಬಂದಿ ಇರೋದು ಕೇವಲ 830 ಮಾತ್ರ. ಒಂದು ರೈಲಿ ಗೆ ಒಬ್ಬ ಸಿಬ್ಬಂದಿಯನ್ನೂ ಹಾಕಲು ನಮಗೆ ಆಗದ ಪರಿಸ್ಥಿತಿ ಇದೆ. ಅಪರಾಧ ಹಾಗೂ ಸೂಕ್ಷ್ಮ ಪ್ರದೇಶಗಳ ಆಧಾರದ ಮೇಲೆ ಸಿಬ್ಬಂದಿಯನ್ನು ನಿಯೋಜನೆ ಮಾಡುತ್ತಿದ್ದೇವೆ ಎಂದು ಡಿಐಜಿ ಹೇಳಿದರು.

ಬಿಮ್ಸ್ ಆಸ್ಪತ್ರೆಗೆ ರೈಲ್ವೆ ಡಿಐಜಿ ಶರಣಪ್ಪ, ರೈಲ್ವೆ ಎಸ್ಪಿ ಸೌಮ್ಯಲತಾ ಭೇಟಿ ನೀಡಿ‌,‌ ಗಾಯಗೊಂಡ ಸಿಬ್ಬಂದಿಗಳಿಂದ ಘಟನೆಯ ಮಾಹಿತಿ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next