ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದಲ್ಲಿ ಹಲವು ವರ್ಷಗಳಿಂದ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ನಾಲ್ಕು ಆಟಗಾರರು ಈ ಬಾರಿ ರಾಜ್ಯ ತಂಡದಿಂದ ಹೊರ ಹೋಗಲು ನಿರ್ಧರಿಸಿದ್ದಾರೆ. ಈ ಬಾರಿಯ ರಣಜಿ ಸೀಸನ್ ನಲ್ಲಿ ಬೇರೆ ರಾಜ್ಯ ತಂಡದಲ್ಲಿ ಆಡಲು ನಾಲ್ವರು ಆಟಗಾರರು ನಿರ್ಧರಿಸಿದ್ದಾರೆ.
ಆಲ್ ರೌಂಡರ್ ಶ್ರೇಯಸ್ ಗೋಪಾಲ್, ಬ್ಯಾಟರ್ ಕೆವಿ ಸಿದ್ಧಾರ್ಥ್, ರೋಹನ್ ಕದಂ ಮತ್ತು ಮಾಜಿ ನಾಯಕ ಕರುಣ್ ನಾಯರ್ ರಾಜ್ಯ ತಂಡ ತೊರೆದು ಈ ಬಾರಿ ರಣಜಿ ಕೂಟದಲ್ಲಿ ಬೇರೆ ತಂಡದ ಪರ ಆಡಲಿದ್ದಾರೆ.
ಶ್ರೇಯಸ್ ಗೋಪಾಲ್ ಅವರು ಕೇರಳ ತಂಡಕ್ಕೆ ಹೋದರೆ, ಕೆವಿ ಸಿದ್ಧಾರ್ಥ ಮತ್ತು ರೋಹನ್ ಕದಂ ಅವರು ಗೋವಾ ತಂಡದತ್ತ ಸಾಗಿದ್ದಾರೆ. ಸದ್ಯ ಇಂಗ್ಲೆಂಡ್ ನಲ್ಲಿ ಮೈನರ್ ಕೌಂಟಿ ಆಡುತ್ತಿರುವ ಕರುಣ್ ನಾಯರ್ ಅವರು ವಿದರ್ಭ ತಂಡದಲ್ಲಿ ಮುಂದಿನ ಕ್ರಿಕೆಟ್ ಜೀವನ ಕಳೆಯಲಿದ್ದಾರೆ.
ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ ಮತ್ತು ಮನೀಷ್ ಪಾಂಡೆ ಅವರಂತಹ ಪ್ರಮುಖರೊಂದಿಗೆ ಮತ್ತು ಯುವ ಬ್ಯಾಟರ್ ಗಳ ತಂಡಕ್ಕೆ ಬರುತ್ತಿರುವ ಕಾರಣದಿಂದ, ಕಳೆದ ಋತುವಿನಲ್ಲಿ ಬೆಂಚ್‌ನಲ್ಲಿದ್ದ ಸಿದ್ಧಾರ್ಥ್ ತಮ್ಮ ಅದೃಷ್ಟವನ್ನು ಬೇರೆಡೆ ಪ್ರಯತ್ನಿಸುತ್ತಿದ್ದಾರೆ.
ಆಕ್ರಮಣಕಾರಿ ಎಡಗೈ ಆಟಗಾರ ರೋಹನ್ ಕದಂ ಅವರ ಕರ್ನಾಟಕ ವೃತ್ತಿಜೀವನವು 2021ರ ನವೆಂಬರ್ ನಲ್ಲಿ ಕೊನೆಯಾಗಿತ್ತು. ಮಾರ್ಚ್ 2017 ರಲ್ಲಿ ಪದಾರ್ಪಣೆ ಮಾಡಿದ ಕದಂ ಕರ್ನಾಟಕಕ್ಕಾಗಿ ನಾಲ್ಕು ಪ್ರಥಮ ದರ್ಜೆ, 13 ಲಿಸ್ಟ್ ಎ ಮತ್ತು 29 ಟಿ 20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ.