Advertisement

ವ್ಯಾಪಾರಿ ಅಪಹರಿಸಲು ಯತ್ನಿಸಿದ್ದ ನಾಲ್ವರ ಬಂಧನ

11:59 AM Jun 09, 2018 | Team Udayavani |

ಬೆಂಗಳೂರು: ಕಳೆದ ತಿಂಗಳು ನಡೆದ ಪಿಠೊಪಕರಣ ವ್ಯಾಪಾರಿ ಬಿಲ್ಡರ್‌ ಮಸೂದ್‌ ಅಲಿ ಅಪಹರಣ ಯತ್ನ ಪ್ರಕರಣ ಭೇದಿಸಿರುವ ಪುಲಿಕೇಶಿನಗರ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಚೇಳಿಕೆರೆಯ ಶೇಝ್ ಜುಬೇರ್‌ (26), ಆರ್‌.ಟಿ.ನಗರದ ಮೆಹ್ತಾಬ್‌ (27), ಕೆ.ಜಿ.ಹಳ್ಳಿಯ ನಿಯಾಮತುಲ್ಲಾ (19) ಮತ್ತು ಡಿ.ಜೆ.ಹಳ್ಳಿಯ ಸೈಯದ್‌ ಇಸ್ರಾರ್‌ (22) ಬಂಧಿತರು. ಈ ಪೈಕಿ ಆರೋಪಿ ಜುಬೇರ್‌ ಉದ್ಯಮಿ ಮಸೂದ್‌ ಅಲಿಗೆ ಪರಿಚಿತನಾಗಿದ್ದು, ಅಪಹರಣ ಮಾಡಿ ಐದು ಕೋಟಿ ರೂ.ಗೆ ಬೇಡಿಕೆ ಇಡಲು ತನ್ನ ಸಹಚರರೊಂದಿಗೆ ಸಂಚು ರೂಪಿಸಿದ್ದ.

ಅದರಂತೆ ಮೇ 21ರಂದು ಫ್ರೆಜರ್‌ಟೌನ್‌ನ ಆಸಾಯ್‌ ರಸ್ತೆಯಲ್ಲಿ ಕಾರಿನಲ್ಲಿ ಹೋಗುವಾಗ ಅಲಿ ಅವರನ್ನು ಅಹರಿಸಲು ಯತ್ನಿಸಿದ್ದು, ಪ್ರತಿರೋಧ ವ್ಯಕ್ತಪಡಿಸಿದಾಗ ಗುಂಡಿನ ದಾಳಿ ನಡೆಸಿದ್ದರು. ಅದೃಷ್ಟವಶಾತ್‌ ಉದ್ಯಮಿ ಪ್ರಾಣಾಪಾಯದಿಂದ ಪಾರಾಗಿದ್ದರು. ಮೊಬೈಲ್‌ ನೆಟ್‌ವರ್ಕ್‌ ಹಾಗೂ ಇತರೆ ತಾಂತ್ರಿಕ ತನಖೆಯಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಆರೋಪಿ ಶೇಝ್ ಜುಬೇರ್‌ ಎಂಜಿನಿಯರ್‌ ಆಗಿದ್ದು, ಮೆಹ್ತಾಬ್‌ ಎನ್‌ಫೀಲ್ಡ್‌ ಕಂಪನಿಯ ಮಾಜಿ ನೌಕರ. ನಿಯಾಮತುಲ್ಲಾ ಮೊಬೈಲ್‌ ಸಿಮ್‌ ಕಾರ್ಡ್‌ ಅಂಗಡಿ ಇಟ್ಟುಕೊಂಡಿದ್ದ. ಸೈಯ್ಯದ್‌ ಇಸ್ರಾರ್‌ ಪಿಓಪಿ ಕೆಲಸ ಮಾಡಿಕೊಂಡಿದ್ದ.

5 ಕೋಟಿ ರೂ.ಗೆ ಬೇಡಿಕೆ: ಈ ಹಿಂದೆ ಶೇಝ್ ಜುಬೇರ್‌ ಸಂಬಂಧಿಯೊಬ್ಬರು ಉದ್ಯಮಿ ಮಸೂದ್‌ ಅಲಿ ಅವರಿಂದ ಫ್ಲಾಟ್‌ವೊಂದನ್ನು ಖರೀದಿಸಿದ್ದರು. ಆಗ ಪರಿಚಯವಾದ ಜುಬೇರ್‌, ಆಗಾಗ ಮಸೂದ್‌ ಅಲಿ ಮನೆಗೆ ಹೋಗುತ್ತಿದ್ದ. ಜತೆಗೆ ಮಸೂದ್‌ ಅಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹೊಂದಿರುವ ಬಗ್ಗೆ ತಿಳಿದುಕೊಂಡಿದ್ದ.

Advertisement

ಈ ಹಿನ್ನೆಲೆಯಲ್ಲಿ ಅಲಿ ಅವರನ್ನು ಅಪಹರಿಸಿ 5 ಕೋಟಿ ರೂ.ಗೆ ಬೇಡಿಕೆ ಇಡಲು ತೀರ್ಮಾನಿಸಿದ್ದ. ಅದರಂತೆ ಮೂರು ತಿಂಗಳ ಹಿಂದೆ ತನ್ನ ಮನೆಯಲ್ಲಿಯೇ ಇತರೆ ಆರೋಪಿಗಳ ಜತೆ ಸೇರಿ ಅಪಹರಣಕ್ಕೆ ಸಂಚು ರೂಪಿಸಿದ್ದ. ಬಳಿಕ ಮಸೂದ್‌ ಅಲಿಯ ಪ್ರತಿ ಚಲನವಲನಗಳ ಬಗ್ಗೆ ನಿಗಾವಹಿಸಿದ್ದು, ನಿತ್ಯ ಓಡಾಡುವ ರಸ್ತೆ ಹಾಗೂ ಕಚೇರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.

ಪ್ರತಿರೋಧಿಸಿದ್ದಕ್ಕೆ ಗುಂಡೇಟು: ಮೇ 21ರಂದು ಅಪಹರಣಕ್ಕೆ ಸಂಚು ರೂಪಿಸಿ ಅಂದು ಮನೆಯಿಂದ ಸೇಂಟ್‌ ಮಾರ್ಕ್ಸ್ ರಸ್ತೆಯಲ್ಲಿರುವ ಪಿಠೊಪಕರಣ ಅಂಗಡಿಗೆ ಹೋಗುತ್ತಿದ್ದ ಅಲಿ ಅವರನ್ನು, ಆಸಾಯ್‌ ರಸ್ತೆಯಲ್ಲಿ ಆರೋಪಿಗಳು ಅಡ್ಡಗಟ್ಟಿದ್ದಾರೆ. ಬಳಿಕ ಅವರ ಕಾರಿನಲ್ಲೇ ಅಪಹರಿಸಲು ಯತ್ನಿಸಿದ್ದಾರೆ. ಆದರೆ, ಮಸೂದ್‌ ಅಲಿ ಪ್ರತಿರೋಧ ತೋರಿದಾಗ ಆರೋಪಿಗಳು ತಮ್ಮ ಬಳಿಯಿದ್ದ ಪಿಸ್ತೂಲ್‌ನಿಂದ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ನಂಬರ್‌ ಪ್ಲೇಟ್‌ ಬದಲಿಸಿದ್ದರು: ಆರೋಪಿಗಳ ಪೈಕಿ ಮೆಹ್ತಾಬ್‌ ತನ್ನ ಮನೆಯಲ್ಲಿ ಶುಭ ಕಾರ್ಯವಿದೆ. ಕುಟುಂಬ ಸದಸ್ಯರು ಬೇರೆಡೆ ಹೋಗಬೇಕಿದೆ ಎಂದು ಕಾರೊಂದನ್ನು ಎರಡು ದಿನಗಳಿಗೆ ಬಾಡಿಗೆಗೆ ಪಡೆದಿದ್ದ. ಅಪಹರಣಕ್ಕೂ ಮೊದಲು ಕಾರಿನ ಮೂಲ ನಂಬರ್‌ ಪ್ಲೇಟ್‌ ಬದಲಿಸಿ ನಕಲಿ ಪ್ಲೇಟ್‌ ಅಳವಡಿಸಿದ್ದ. ಕೃತ್ಯವೆಸಗಿ ಹೋಗುವಾಗ ಕಾರಿನ ನಂಬರ್‌ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದರೆ, ತನಿಖೆ ವೇಳೆ ಆರೋಪಿಗಳು ಬಳಸಿರುವುದು ನಕಲಿ ನಂಬರ್‌ ಪ್ಲೇಟ್‌ ಎಂದು ತಿಳಿಯಿತು.

Advertisement

Udayavani is now on Telegram. Click here to join our channel and stay updated with the latest news.

Next