ಬೆಂಗಳೂರು/ಹುಬ್ಬಳ್ಳಿ: ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ ರಾಜ್ಯಾದ್ಯಂತ ಅಕ್ಷರಶಃ ಅವಾಂತರ ಸೃಷ್ಟಿಸಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಬದುಕು ದುರ್ಭರವಾಗಿದೆ. ಮಳೆಯಿಂದಾಗಿ ರಾಜ್ಯದಲ್ಲಿ ಶುಕ್ರವಾರ ನಾಲ್ವರು ಅಸುನೀಗಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ತುದೂರು ಗ್ರಾಮದಲ್ಲಿ ಗದ್ದೆಯ ಹೊಂಡಕ್ಕೆ ಬಿದ್ದು ಶಂಕರ್ ಬಿನ್ ಲಿಂಗಾನಾಯ್ಕ (53) ಮೃತಪಟ್ಟಿದ್ದಾರೆ. ಮುಂಡರಗಿ ಬಳಿ ಹಳ್ಳದಲ್ಲಿ ಟಿಪ್ಪುಸುಲ್ತಾನ ಅಕºರಸಾಬ ದೊಡ್ಡಮನಿ (28) ಎಂಬವರು ಬೈಕ್ ಸಮೇತ ಕೊಚ್ಚಿ ಹೋಗಿದ್ದಾರೆ. ಕುಮಟಾದ ಗುಡೇ ಅಂಗಡಿಯಲ್ಲಿ ನೀರಿನ ಪಂಪ್ ಸ್ವಿಚ್ ಹಾಕಲು ಹೋದ ಸುಮಾ ಎಂಬ ಮಹಿಳೆ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾರೆ. ಶಿವಮೊಗ್ಗದ ಆರ್‌ಎಂಎಲ್ ನಗರದ ರಾಜ ಕಾಲುವೆಯ ಮಳೆ ನೀರಿನಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿದೆ.
ವರದಾ, ಗಂಗಾವಳಿ, ಘಟಪ್ರಭಾ ಸೇರಿ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ತೀರ ಪ್ರದೇಶಗಳಲ್ಲಿ ಮತ್ತೆ ನೆರೆ ಭೀತಿ ಎದುರಾಗಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನಲ್ಲಿ 5 ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ತುಂಗಾ, ಭದ್ರಾ, ಹೇಮಾವತಿ, ಮಲಪ್ರಭಾ ನದಿಗಳ ಒಳ ಹರಿವು ಹೆಚ್ಚಾಗಿದ್ದರಿಂದ ಆತಂಕ ಆರಂಭವಾಗಿದೆ. ಧಾರವಾಡ ಜಿಲ್ಲೆಯ ಬೆಣ್ಣಿ ಮತ್ತು ಗೂಗಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಕೊಪ್ಪಳ, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಬೆಳೆಗಳೆಲ್ಲ ನೆಲಕಚ್ಚಿವೆ. ಮನೆಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಧಾರವಾಡ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ಎರಡು ದಿನಗಳಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಉತ್ತರ ಕನ್ನಡದ ಕರಾವಳಿ ಮತ್ತು ಘಟ್ಟದ ಮೇಲಿನ ತಾಲೂಕುಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ.
ಇಂದೂ ಶಾಲೆಗೆ ರಜೆ
ಸಿಎಂ ತವರು ಹಾವೇರಿ ಜಿಲ್ಲೆಯಲ್ಲಿ ಒಂದೇ ದಿನ 87 ಮನೆಗಳು ಧರೆಗುರು ಳಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 354 ವಿದ್ಯುತ್ ಕಂಬ, 45 ಟ್ರಾನ್ಸ್‌ಫಾರ್ಮರ್ ಹಾನಿಗೀಡಾಗಿವೆ. ಲಿಂಗನಮಕ್ಕಿ, ಟಿಬಿ ಡ್ಯಾಂಗೆ ಒಳ ಹರಿವು ಗಣನೀಯ ಪ್ರಮಾಣ ದಲ್ಲಿ ಹೆಚ್ಚಾಗಿದೆ. ಮಳೆ ಮುಂದುವರಿ ದಿದ್ದರಿಂದ ಹಾವೇರಿ, ಗದಗ ಮತ್ತು ವಿಜಯನಗರ ಜಿಲ್ಲೆಯ ಕೊಟ್ಟೂರು, ಕೂಡ್ಲಗಿ, ಹಗರಿಬೊಮ್ಮನಹಳ್ಳಿ, ಹಡಗಲಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ಶನಿ ವಾರ ಕೂಡ ರಜೆ ಘೋಷಿಸಲಾಗಿದೆ.
Related Articles
ಕರಾವಳಿಯಲ್ಲಿ ಕಡಿಮೆ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯ ಬಿರುಸು ಕೊಂಚ ಕಡಿಮೆಯಾಗಿತ್ತು. ಗುರುವಾರ ಭರ್ಜರಿಯಾಗಿ ಸುರಿದಿದ್ದ ಮಳೆ ತುಸು ವಿರಾಮ ನೀಡಿತ್ತು.