ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ನಾಲ್ಕು ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ.
ನಗರದ ಪೂರ್ವ ಪೊಲೀಸ್ ಠಾಣೆಯ ಪೇದೆ ಹಾಗೂ ಗುಂಡ್ಲುಪೇಟೆಯ ಮಹದೇವಪ್ರಸಾದ್ ನಗರದ ಮೂವರಿಗೆ ಕೋವಿಡ್ 19 ಪಾಸಿಟಿವ್ ಆಗಿದೆ.
ಗುಂಡ್ಲುಪೇಟೆ ಪಟ್ಟಣದ ಮಹದೇವಪ್ರಸಾದ್ ನಗರದ 45 ವರ್ಷದ ಮಹಿಳೆ ಹಾಗೂ 55 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಗೃಹಿಣಿಯರಾಗಿದ್ದ ಇವರಿಬ್ಬರು ಬೀಡಿ ಕಟ್ಟುವ ವೃತ್ತಿ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ರವಿ ತಿಳಿಸಿದರು.
ಈ ಮಹಿಳೆಯರು ಶನಿವಾರ ಗುಂಡ್ಲುಪೇಟೆ ಆಸ್ಪತ್ರೆಗೆ ವಾಂತಿ, ತಲೆನೋವು, ಮೈಕೈ ನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋದಾಗ ಅವರ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ. ಈಗಾಗಲೇ ಸೋಂಕಿತನಾಗಿರುವ 8311ರ ರೋಗಿಯಿಂದಾಗಿ ಇವರಿಗೆ ಸೋಂಕು ಹರಡಿರಬಹುದೆಂದು ಶಂಕಿಸಲಾಗಿದೆ. ಮಹದೇವಪ್ರಸಾದ್ ನಗರದ ಇನ್ನಷ್ಟು ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುವುದು ಎಂದು ಅವರು ತಿಳಿಸಿದರು.
ಇದಲ್ಲದೇ, ನಗರದ ಪೂರ್ವ ಪೊಲೀಸ್ ಠಾಣೆಯ ಪೇದೆಯೊಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಪೇದೆಗೆ random ಟೆಸ್ಟ್ ನಡೆಸಲಾಗಿತ್ತು. ಮಂಗಳವಾರ ಮಧ್ಯಾಹ್ನ ಫಲಿತಾಂಶ ಪಾಸಿಟಿವ್ ಬಂದಿದೆ.
ಈ ಹಿನ್ನೆಲೆಯಲ್ಲಿ ರಾಮಸಮುದ್ರದಲ್ಲಿರುವ ಪೂರ್ವ ಠಾಣೆಯನ್ನು ಸ್ಯಾನಿಟೈಸ್ ಮಾಡಿ ಸೀಲ್ ಡೌನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೇ ಗುಂಡ್ಲುಪೇಟೆಯ 8311ಸಂಖ್ಯೆಯ ರೋಗಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇನ್ನೋರ್ವ ವ್ಯಕ್ತಿಗೂ ಮಂಗಳವಾರ ಕೋವಿಡ್ ದೃಢಪಟ್ಟಿದೆ.
ಮಂಗಳವಾರದ ನಾಲ್ಕು ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 8 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಗುಂಡ್ಲುಪೇಟೆಯ ಮಹದೇವಪ್ರಸಾದ್ ನಗರದಲ್ಲಿ ಒಟ್ಟು 5, ಭೂಮಾಪಕಿ, ಪೊಲೀಸ್ ಪೇದೆ ಸೇರಿದಂತೆ 7 ಸಕ್ರಿಯ ಪ್ರಕರಣಗಳು. ಓರ್ವ ಗುಣಮುಖನಾಗಿ ಮನೆಗೆ ಹಿಂದಿರುಗಿದ್ದಾನೆ.