Advertisement
ನೇಪಾಳದ ಭಜಂಗ್ ಜಿಲ್ಲೆಯ ಭೀಮ್ ಬಹದ್ದೂರ್ ತಾಪಾ (31), ಜಯರಾಜ್ ಬಹದ್ದೂರ್ ಪೂರಿ (25), ಧರ್ಮರಾಜ್ ಬಹದ್ದೂರ್ ಬಹೋರಾ(40) ಮತ್ತು ಗಣೇಶ್ ಬಹದ್ದೂರ್ ತಾಪಾ (34) ಬಂಧಿತರು. ಇವರ ಬಂಧನದಿಂದ ಬನಶಂಕರಿ ಹಾಗೂ ಜೆ.ಪಿ.ನಗರ ಠಾಣೆಯ ಎರಡು ಪ್ರಕರಣಗಳು ಪತ್ತೆಯಾಗಿದ್ದು, 14 ಲಕ್ಷ ಮೌಲ್ಯದ 425ಗ್ರಾಂ ತೂಕದ ಚಿನ್ನಾಭರಣ, 5 ಕೆ.ಜಿ. ಬೆಳ್ಳಿ ವಸ್ತುಗಳು, ವಿದೇಶಿ ಕರೆನ್ಸಿಗಳು, ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
Related Articles
Advertisement
ಬಂಧಿತರ ಪೈಕಿ ಭೀಮ್, ಜಯರಾಜ್, ಧರ್ಮರಾಜ್ ಈ ಮೊದಲು ಜೆ.ಪಿ.ನಗರದಲ್ಲಿ ಕಳವು ಮಾಡಿದ್ದ ಚಿನ್ನಾಭರಣವನ್ನು ಗಣೇಶ್ ಬಹದ್ದೂರ್ ತಾಪಾನಿಗೆ ಮಾರಾಟ ಮಾಡಿದ್ದರು. ಈತ ತನ್ನ ಸ್ವಂತ ಊರಾದ ನೇಪಾಳಕ್ಕೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದ. ಭೀಮ್ ಬಹದ್ದೂರ್ ವಿರುದ್ಧ ಮಂಗಳೂರಿನಲ್ಲಿ ಕಳವು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋದಲ್ಲೆಲ್ಲ ಒಂದು ಹೆಸರು!: ಬಂಧಿತರು ಮಂಗಳೂರು, ಉಡುಪಿ ಹಾಗೂ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡಿದ್ದು, ಹೋದ ಕಡೆಗಳಲ್ಲಿ ತಮ್ಮ ಕೃತ್ಯ ನಡೆಸಲು ತಮ್ಮ ಹೆಸರನ್ನು ಬದಲಿಸಿಕೊಳ್ಳುತ್ತಿದ್ದರು.
ಈ ಹಿಂದೆ ಮಂಗಳೂರು, ಉಡುಪಿಯಲ್ಲಿ ಕೆಲಸ ಮಾಡುವಾಗ ತಮ್ಮ ಹೆಸರುಗಳನ್ನು, ಹೇಮರಾಜ್ ತಾಪಾ, ಜಯರಾಜ್ ಪೂರಿ, ಜಗದೀಶ್ ಹಾಗೂ ಗಗನ್ ತಾಪಾ ಎಂದು ಬದಲಾಯಿಸಿಕೊಳ್ಳುತ್ತಿದ್ದರು. ಆದರೆ, ಎಲ್ಲಿಯೂ ನೇಪಾಳ ಮೂಲದ ವ್ಯಕ್ತಿಗಳೆಂದು ಪರಿಚಯಿಸಿಕೊಂಡಿರಲಿಲ್ಲ ಎಂದು ಶರಣಪ್ಪ ತಿಳಿಸಿದ್ದಾರೆ.
ತಿರುಪತಿಗೆ ಹೋಗುತ್ತೇವೆ ಮನೆ ನೋಡ್ಕೊ!: ಡಿ.13ರಂದು ಟೆಕ್ಕಿ ಶಶಿಕಿರಣ್ ತಂದೆ ತಿರುಪತಿಗೆ ಹೋಗುವ ಮುನ್ನ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಭೀಮ್ ಬಹದ್ದೂರ್ ತಾಪಗೆ, “ಮನೆಯವರೆಲ್ಲ ತಿರುಪತಿಗೆ ಹೋಗುತ್ತಿದ್ದೇವೆ. ನಾವು ಬರುವವರೆಗೂ ಮನೆ ಕಡೆ ನೋಡ್ಕೊ’ ಎಂದು ಹೇಳಿದ್ದರು. ಆದರೆ, ಬರುವಷ್ಟರಲ್ಲಿ ಈತನೇ ತನ್ನ ಸಹಚರರ ಮೂಲಕ ಮನೆಗಳ್ಳತನ ಮಾಡಿದ್ದ.
ನಂತರ ಯಾರಿಗೂ ತಿಳಿಯದಂತೆ ಎಂದಿನಂತೆ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ. ತಿರುಪತಿಯಿಂದ ವಾಪಸ್ ಬಂದ ಶಶಿಕಿರಣ್ ಕುಟುಂಬಸ್ಥರು ಕಳ್ಳತನವಾಗಿರುವುದನ್ನು ಕಂಡು ಅಚ್ಚರಿಗೊಂಡರು ಕಳವಿನ ಬಗ್ಗೆ ಆರೋಪಿಗೆ ಕೇಳಿದಾಗ ನನಗೆ ಗೊತ್ತಿಲ್ಲ ಎಂದಿದ್ದ. ಶಶಿಕಿರಣ್ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎಚ್ಚರ ವಹಿಸಿ..!: ಖಾಸಗಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಿಕೊಳ್ಳುವ ಮೊದಲು ಅವರ ಪೂರ್ವಾಪರ ಪರಿಶೀಲಿಸಬೇಕು.ಹಿನ್ನೆಲೆ ಬಗ್ಗೆ ಸ್ಥಳೀಯ ಪೊಲೀಸರಿಂದ ಪರಿಶೀಲನೆ ಮಾಡಿಸಿ, ಪರಿಶೀಲನಾ ಪತ್ರ ಪಡೆಯಬೇಕು. ನೇಮಕ ಮೊದಲು ಮೂಲ ದಾಖಲೆಗಳನ್ನು ಪರಿಶೀಲಿಸಬೇಕು.
ಖಾಯಂ ವಿಳಾಸ ಮತ್ತು ತಾತ್ಕಾಲಿಕ ವಿಳಾಸವನ್ನು ಖುದ್ದು ಪರಿಶೀಲನೆ ಮಾಡಿ ಅವರ ಸಂಬಂಧಿಕರು ಹಾಗೂ ಪರಿಚಯದವರ ವಿಳಾಸ, ಫೋನ್ ನಂಬರ್‌ಗಳನ್ನು ಪಡೆಯುವುದು ಒಳಿತು. ಈ ಹಿಂದೆ ಕಾರ್ಯ ನಿರ್ವಹಿಸಿ ಬಿಟ್ಟು ಬಂದಿದ್ದಲ್ಲಿ ನಡವಳಿಕೆಯ ಬಗ್ಗೆ ಹಾಗೂ ಕರ್ತವ್ಯ ಪಾಲನೆ ಬಗ್ಗೆ ಅವರಿಂದ ತಿಳಿದುಕೊಳ್ಳಬೇಕು ಎಂದು ಡಿಸಿಪಿ ಡಾ ಶರಣಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಿಸಿಟಿವಿಯಲ್ಲಿ ಸೆರೆ: ಆರೋಪಿ ಭೀಮ್ ಬಹದ್ದೂರ್ ಚಲವಲನಗಳು ಟೆಕ್ಕಿ ಶಶಿಕಿರಣ್ ಮನೆ ಆವರಣದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈತ ಎರಡು ಬಾರಿ ಮನೆಯ ಬಾಗಿಲ ಬಳಿ ಬಂದು ಬೀಗ ಹಾಕಿರುವ ಬಗ್ಗೆ ಪರಿಶೀಲನೆ ನಡೆಸುತ್ತಾನೆ. ಜತೆಗೆ ಘಟನೆಗೂ ಮುನ್ನ ಈತನ ಚಲವಲನಗಳು ತೀವ್ರ ಅನುಮಾನಕ್ಕೀಡಾಗಿದ್ದವು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.