ರಾಯ್ ಪುರ್:ಭದ್ರತಾ ಪಡೆ ನಡೆಸಿದ ಎನ್ ಕೌಂಟರ್ ಗೆ ನಾಲ್ವರು ನಕ್ಸಲೀಯರು ಸಾವನ್ನಪ್ಪಿರುವ ಘಟನೆ ಚತ್ತೀಸ್ ಗಢದ ನಕ್ಸಲ್ ಬಂಡುಕೋರರು ಹೆಚ್ಚಾಗಿರುವ ಸುಕ್ಮಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ ಎಂದು ವರದಿ ತಿಳಿಸಿದೆ.
ಜಗರ್ಗುಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯಪ್ರದೇಶದಲ್ಲಿ ಈ ಎನ್ ಕೌಂಟರ್ ನಡೆದಿದೆ. ಇಂದು ಬೆಳಗ್ಗೆ (ಆಗಸ್ಟ್ 12-2020) ಭದ್ರತಾ ಪಡೆ ಸೇರಿದಂತೆ ವಿವಿಧ ತಂಡಗಳು ಜಂಟಿಯಾಗಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಆರಂಭಿಸಿತ್ತು ಎಂದು ಇನ್ಸ್ ಪೆಕ್ಟರ್ ಜನರಲ್ ಪೊಲೀಸ್ (ಬಸ್ತಾರ್ ವಲಯ) ಸುಂದರ್ ರಾಜ್ ಪಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಕಾರ್ಯಾಚರಣೆಯಲ್ಲಿ ನಾಲ್ವರು ನಕ್ಸಲೀಯರು ಸಾವಿಗೀಡಾಗಿದ್ದಾರೆ. ಜಿಲ್ಲಾ ಮೀಸಲು ಪಡೆ (ಡಿಆರ್ ಜಿ), 201 ಬೆಟಾಲಿಯನ್ ಕೋಬ್ರಾ ಮತ್ತು 223 ಬೆಟಾಲಿಯನ್ ಸಿಆರ್ ಪಿಎಫ್ ಸುಕ್ಮಾ ಜಿಲ್ಲೆಯ ಜಗರ್ಗುಂಡಾ ಅರಣ್ಯಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಖಚಿತ ಮಾಹಿತಿ ಮೇರೆಗೆ ಜಗರ್ಗುಂಡಾ ಕುಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ರಾಜಧಾನಿ ರಾಯ್ ಪುರ್ ನಿಂದ 450 ಕಿಲೋ ಮೀಟರ್ ದೂರದಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ವರದಿ ಹೇಳಿದೆ.
ಕಾರ್ಯಾಚರಣೆ ವೇಳೆ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ದಟ್ಟ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರ ವಿರುದ್ಧದ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ವರದಿ ತಿಳಿಸಿದೆ.