Advertisement

ನಾಲ್ಕು ತಿಂಗಳಾದರೂ ಗೆದ್ದಿಲ್ಲ ಹೊಸಬ್ರು

10:50 AM Apr 28, 2017 | Team Udayavani |

ಕೆಲವು ವರ್ಷಾರಂಭವೇ ಹಾಗಿರುತ್ತದೆ, ಹೊಸಬರಿಗೆ ಆಶಾದಾಯಕ ವರ್ಷವಿದು ಎಂದು ಖುಷಿಯಿಂದ ಹೇಳುವಂತಿರುತ್ತದೆ. ಅದಕ್ಕೆ
ಕಾರಣ ವರ್ಷದ ಆರಂಭದಲ್ಲೇ ಹೊಸಬರ ಸಿನಿಮಾಗಳು ಗೆದ್ದು, ಹೊಸಬರಿಗೆ ಭರವಸೆ, ಧೈರ್ಯ ತಂದು ಕೊಡುತ್ತವೆ. ಯಾವುದೇ ಹೊಸ ತಂಡದ ಸಿನಿಮಾಗಳು ಗೆದ್ದರೂ, ಚಿತ್ರರಂಗಕ್ಕೆ ಬರುವ ಹೊಸಬರಿಗೆ ಇದು ಸ್ಫೂರ್ತಿ ಎಂದರೆ ತಪ್ಪಿಲ್ಲ. ಆ ಸ್ಫೂರ್ತಿಯೇ ಹೊಸಬರಿಗೆ ದಾರಿ. ಆದರೆ, ಈ ವರ್ಷ ಆರಂಭವಾಗಿ ನಾಲ್ಕು ತಿಂಗಳಾಗುತ್ತಾ ಬಂದಿದೆ. ಆದರೆ, ಇಲ್ಲಿವರೆಗೆ ಹೊಸ ಬರಿಗೆ ಹಾಗೂ ಹೊಸಬರ ಮೇಲಿನ ಭರವಸೆಯನ್ನು ಹೆಚ್ಚಿಸುವಂತಹ ಯಾವುದೇ ಸಿನಿಮಾ ಬಂದಿಲ್ಲ ಎಂಬ ಮಾತು ಈಗ ಚಿತ್ರರಂಗದಲ್ಲಿ
ಕೇಳಿಬರುತ್ತಿದೆ. ಅದಕ್ಕೆ ಉದಾಹರಣೆಯಾಗಿ ಸಾಕಷ್ಟು ಸಿನಿಮಾಗಳಿವೆ. ಈ ನಾಲ್ಕು ತಿಂಗಳಲ್ಲಿ ಸಂಪೂರ್ಣ ಹೊಸಬರ ತಂಡವೇ
ಸೇರಿಕೊಂಡು ಮಾಡಿರುವ 15ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿವೆ. ಇದು ಸಂಪೂರ್ಣ ಹೊಸಬರ ತಂಡದ ಕಥೆಯಾದರೆ ಹೊಸ ನಿರ್ದೇಶಕರು, ಪರಿಚಿತ ಮುಖಗಳನ್ನಿಟ್ಟುಕೊಂಡು ಮಾಡಿರುವ ಸಿನಿಮಾಗಳ ಸಂಖ್ಯೆ ಇನ್ನೂ ಇದೆ. ಇವೆರಡು ಸೇರಿದರೆ 25ಕ್ಕೂ ಹೆಚ್ಚು ಹೊಸಬರ ಸಿನಿಮಾಗಳು ಈ ನಾಲ್ಕು ತಿಂಗಳಲ್ಲಿ ಬಿಡುಗಡೆಯಾಗಿವೆ. “ನೋ ಬಾಲ್‌’, “ಹಾಯ್‌’, “ಜಲ್ಸಾ’, “ಸ್ಟೈಲ್‌ ರಾಜಾ’, “ಏನೆಂದು ಹೆಸರಿಡಲಿ’, “ಪ್ರೀತಿ ಪ್ರೇಮ’, “ರಶ್‌’, “ಟಾನಿಕ್‌’, “ಅಜರಾಮರ’ ಹೀಗೆ ಸಾಕಷ್ಟು ಸಂಪೂರ್ಣ ಹೊಸಬರ
ಚಿತ್ರಗಳು ಬಿಡುಗಡೆಯಾಗಿವೆ. ಜೊತೆಗೆ ಹಳಬರ ಹಾಗೂ ಹೊಸಬರ ಕಾಂಬಿನೇಶನ್‌ನ “ಎರಡು ಕನಸು’, “ಸೆ„ಲ್‌ ಪ್ಲೀಸ್‌’, “ಕಾಲ್‌ಕೇಜಿ ಪ್ರೀತಿ’, “ಏನ್‌ ನಿನ್‌ ಪ್ರಾಬ್ಲಿಂ’ ಸೇರಿದಂತೆ ಬಿಡುಗಡೆಯಾದ ಚಿತ್ರಗಳು ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ವಿಫ‌ಲವಾಗಿವೆ.

Advertisement

ಒಂದು ಕ್ಷಣ ನೀವು ನೆನಪಿನ ರಿವೈಂಡ್‌ ಬಟನ್‌ ಒತ್ತಿ, ನಿಮಗೆ ಯಾವ ಸಿನಿಮಾ ನೆನಪಾಗಿದೆ ಹೇಳಿ. ಖಂಡಿತಾ ಸುಲಭವಾಗಿ ಹೇಳ್ಳೋದು ಕಷ್ಟ. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ, ಟೀಸರ್‌ ಮೂಲಕ ಕುತೂಹಲ ಕೆರಳಿಸಿದ್ದ ಹೊಸಬರ ಸಿನಿಮಾಗಳು ಚಿತ್ರಮಂದಿರದಲ್ಲಿ ನಿಲ್ಲಲೇ ಇಲ್ಲ. ಹಾಗಾದರೆ ಹೊಸಬರನ್ನು ಪ್ರೇಕ್ಷಕ ಒಪ್ಪಲಿಲ್ಲವೇ ಅಥವಾ ಪ್ರೇಕ್ಷಕ ಒಪ್ಪುವಂತಹ ಸಿನಿಮಾಗಳನ್ನು ಹೊಸಬರು ಕೊಡಲಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಸಿನಿಮಾ ವಿಷಯದಲ್ಲಿ ಪ್ರೇಕ್ಷಕ ಅದ್ಭುತ ತೀರ್ಪುಗಾರ. ಒಳ್ಳೆಯ
ಸಿನಿಮಾಗಳನ್ನು ಆತ ಪ್ರೀತಿಯಿಂದ ಗೆಲ್ಲಿಸುತ್ತಾನೆ. ಅದರ ಹಿಂದೆ ಯಾರಿದ್ದಾರೆ, ಏನೇನು ನಡೆದಿದೆ ಎಂಬುದುರ ಬಗ್ಗೆ ಆತ ತಲೆಕೆಡಿಸಿಕೊಳ್ಳುವುದಿಲ್ಲ. ಸಿನಿಮಾ ಮನರಂಜನೆ ಕೊಟ್ಟರೆ ಆತ ಆ ಸಿನಿಮಾವನ್ನು ಅಪ್ಪಿಕೊಳ್ಳುತ್ತಾನೆ. ಇಷ್ಟವಾಗದ ಸಿನಿಮಾಗಳನ್ನು ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕಿಡುತ್ತಾನೆ ಎಂದು ಈ ಹಿಂದಿನಿಂದಲೂ ಚಿತ್ರರಂಗದ ಅನೇಕ ಅನುಭವಿಗಳು ಹೇಳುತ್ತಲೇ ಬಂದಿದ್ದಾರೆ. ಅಲ್ಲಿಗೆ ತಪ್ಪು ಯಾರದ್ದು ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.ನೀವು ಈ ನಾಲ್ಕು ತಿಂಗಳಲ್ಲಿ ಬಂದ ಸಂಪೂರ್ಣ ಹೊಸಬರ ಸಿನಿಮಾಗಳನ್ನು ಗಮನಿಸಿದರೆ, ಅಲ್ಲಿ ಸಿನಿಮಾ ಮಾಡಬೇಕು, ಚಿತ್ರರಂಗಕ್ಕೆ ಬರಬೇಕೆಂಬ ಉತ್ಸಾಹ, ತುಡಿತ ಕಾಣುತ್ತದೆಯೇ ಹೊರತು, ಚಿತ್ರರಂಗದಲ್ಲಿ ಗಟ್ಟಿನೆಲೆ ನಿಲ್ಲಬೇಕು, ಅದಕ್ಕಾಗಿ ಪೂರ್ವತಯಾರಿ ಮಾಡಿಕೊಳ್ಳಬೇಕು ಎಂಬ ದೂರದೃಷ್ಟಿತ್ವದ
ಕೊರತು ಎದ್ದು ಕಾಣುತ್ತದೆ. ಹಾಗಾಗಿಯೇ ಜನವರಿಂದ ಮೊನ್ನೆ ಮೊನ್ನೆವರೆಗೆ ತೆರೆಕಂಡ ಬಹುತೇಕ ಹೊಸಬರ ಸಿನಿಮಾಗಳು
ಗಾಂಧಿನಗರದ ಸಿದ್ಧಸೂತ್ರಗಳ ಜೊತೆಗೆ ಬಂದುವೇ ಹೊರತು, ಅದರಾಚೆ ಯೋಚನೆ ಮಾಡುವ ಗೋಜಿಗೆ ಹೋಗಲೇ ಇಲ್ಲ.
ಒಂದೆರಡು ಹೊಸ ನಿರ್ದೇಶಕರ ಚಿತ್ರಗಳು ಅದರ ವಸ್ತು ಹಾಗೂ ನಿರೂಪಣೆಯಿಂದ ಗಮನ ಸೆಳೆದರೂ ಅದು ಸಾಮಾನ್ಯ ಪ್ರೇಕ್ಷಕನಿಗೆ
ಚಿತ್ರಮಂದಿರಗಳಲ್ಲಿ ಸಿಗಲಿಲ್ಲ. ಇನ್ನೇನು ಸಿನಿಮಾ ಕಚ್ಚಿಕೊಂಡಿತು ಎನ್ನುವಷ್ಟರಲ್ಲಿ ಥಿಯೇಟರ್‌ನಿಂದ ಆ ಸಿನಿಮಾಗಳು ಹೊರಬಿದ್ದುವು.
 ಒಂದು ಸಂಪೂರ್ಣ ಹೊಸಬರ ತಂಡ ಸಿನಿಮಾ ಮಾಡುತ್ತದೆ ಎಂದರೆ ಅಲ್ಲಿ ಒಬ್ಬ ಹೀರೋ, ಹೀರೋಯಿನ್‌, ನಿರ್ದೇಶಕ, ಸಂಗೀತ
ನಿರ್ದೇಶಕ, ಛಾಯಾಗ್ರಾಹಕ, ಸಂಕಲನಕಾರ ಸೇರಿದಂತೆ ಸಾಕಷ್ಟು ಮಂದಿ ಸೇರಿಕೊಳ್ಳುತ್ತಾರೆ ಮತ್ತು ಅವರೆಲ್ಲವೂ ಹೊಸಬರೇ ಆಗಿರುತ್ತಾರೆ ಕೂಡಾ. ಅಲ್ಲಿಗೆ ಇಡೀ ತಂಡದ ಭವಿಷ್ಯ ಆ ಸಿನಿಮಾದ ಮೇಲೆ ನಿಂತಿರುತ್ತದೆ. ಇತ್ತೀಚಿನ ಒಂದಷ್ಟು ಹೊಸ ತಂಡಗಳಿಗೆ ತಾವು ಚಿತ್ರರಂಗದಲ್ಲಿ ಲಾಂಚ್‌ ಆಗುತ್ತಿರುವ ಖುಷಿಯೇ ಹೆಚ್ಚಾಗುತ್ತಿದೆಯೇ ಹೊರತು, ಹೊಸತನ ಮೆರೆಯಬೇಕು, ಹೊಸ ಬಗೆಯ ಕಾನ್ಸೆಪ್ಟ್ಗಳ ಮೂಲಕ ತನ್ನದೇ ಒಂದು ಛಾಪು ಮೂಡಿಸಬೇಕೆಂಬ ಛಲ ಕಡಿಮೆಯಾಗುತ್ತಿದೆ.

ಉತ್ಸಾಹದಿಂದ ಬಂದ ತಂಡ ಸೋತರೆ ತಂಡದ ಅಷ್ಟೂ ಮಂದಿಯ ಸಿನಿ ಕನಸು ಕಮರಿದಂತೆ ಎಂಬ ಬಗ್ಗೆ ಯೋಚಿಸುವ ತಂಡ
ಕಡಿಮೆಯಾಗಿದೆ. ಭವಿಷ್ಯ ಗಟ್ಟಿಮಾಡಿಕೊಳ್ಳಲು ಬರುವವರಿಗಿಂತ ಇದ್ದಷ್ಟು ದಿನ ಮಿಂಚುವ ಎಂದು ಬರುವವರ ಸಂಖ್ಯೆ ಹೆಚ್ಚಾಗುವ
ಮೂಲಕ ಸಕ್ಸಸ್‌ ರೇಟ್‌ ಕೂಡಾ ಕುಸಿಯುತ್ತಿದೆ “ಸಿಂಪಲ್ಲಾಗ್‌ ಒಂದ್‌ ಲವ್‌ಸ್ಟೋರಿ’, “ಉಳಿದವರು ಕಂಡಂತೆ’, “ರಾಮಾ ರಾಮಾ ರೇ’, “ಗೋಧಿ ಬಣ್ಣ ಸಾಧಾರಣ ಮೈ ಕಟ್ಟು’, “ಕರ್ವ’, “ತಿಥಿ’ ಸೇರಿದಂತೆ ಒಂದಷ್ಟು ಸಿನಿಮಾಗಳು ಗೆದ್ದುವು, ಮೆಚ್ಚುಗೆ ಪಾತ್ರವಾದುವು ಎಂದರೆ ಅದಕ್ಕೆ ಕಾರಣ ಸಿನಿಮಾದ ವಿಭಿನ್ನತೆಯಿಂದ. ಆ ಸಿನಿಮಾ ತಂಡಕ್ಕೂ ಪ್ರೇಕ್ಷಕನಿಗೂ ಯಾವುದೇ ಸಂಬಂಧವಿರಲಿಲ್ಲ. ಆದರೆ ಗೆದ್ದವು. ಅದು ಸಂಭಾಷಣೆಯಾಗಿರಬಹುದು ಅಥವಾ ಒಂದು ಸಿನಿಮಾವನ್ನು ಟ್ರೀಟ್‌ ಮಾಡಿರುವ ರೀತಿಯಿಂದ ಇರಬಹುದು. ಪ್ರೇಕ್ಷಕನನ್ನು ಸಂತುಷ್ಟನಾಗಿಸುವಲ್ಲಿ ಯಶಸ್ವಿಯಾಗಿದ್ದವು. ಹಾಗಾಗಿಯೇ ಪ್ರೇಕ್ಷಕ ಕೂಡಾ ಹಿಂದೆ-ಮುಂದೆ ನೋಡದೇ ಸಿನಿಮಾವನ್ನು ಎತ್ತಿ ಹಿಡಿದ. ಆದರೆ, ಈ ನಾಲ್ಕು ತಿಂಗಳಿನಲ್ಲಿ ಅಂತಹ ಪ್ರಯತ್ನವಾಗಿಲ್ಲ. ಕೆಲವು ಹೊಸ ನಿರ್ದೇಶಕರು ತಾನು ಮಾಸ್‌ ಡೈರೆಕ್ಟರ್‌,
ಲವ್‌ಸ್ಟೋರಿ ಸ್ಪೆಷಲಿಸ್ಟ್‌ ಎನಿಸಿಕೊಳ್ಳಬೇಕೆಂದುಕೊಂಡರೆ, ಇನ್ನು ಹೊಸ ಹೀರೋಗಳು ಕೂಡಾ ಸ್ಟಾರ್‌ ಆಗಬೇಕೆಂದುಕೊಂಡೇ ಬರುತ್ತಾರೆ. ಅವರಿಗೊಂದು ಇಂಟ್ರೋಡಕ್ಷನ್‌ ಫೈಟ್‌ ಬೇಕು, ಮಾಸ್‌ ಡೈಲಾಗ್‌ ಬೇಕು. ಇದು ಆ ಹೀರೋಗಷ್ಟೇ ಹೊಸತಾಗಿರುತ್ತದೆ. ಆದರೆ, ಪ್ರೇಕ್ಷಕನಿಗೆ ಸ್ಟಾರ್‌ ಸಿನಿಮಾಗಳಲ್ಲೇ ಅದನ್ನು ನೋಡಿ ನೋಡಿ ಸಾಕಾಗಿ ಹೋಗಿರುತ್ತದೆ. ಮತ್ತೆ ಹೊಸಬರ ಸಿನಿಮಾಗಳಲ್ಲೂ ಅದೇ ರಿಪೀಟ್‌ ಆದರೆ ಪ್ರೇಕ್ಷಕ ನಿಸ್ಸಾಹಕ.

ಇತ್ತೀಚೆಗೆ ವಿತರಕರೊಬ್ಬರು ಮಾತನಾಡುತ್ತಾ, ಹೊಸಬರ ಸಿನಿಮಾಗಳು ಕಾನ್ಸೆಪ್ಟ್ ಹಾಗೂ ಕತೆ  ವಿಭಿನ್ನವಾಗಿದ್ದರಷ್ಟೇ ಹೋಗುತ್ತದೆ. ಜೊತೆಗೆ ಸಿನಿಮಾ ಅವಧಿ ಕೂಡಾ ಎರಡು ಗಂಟೆಯೊಳಗಡೆ ಇರಬೇಕು. ಆದರೆ, ಇತ್ತೀಚೆಗೆ ಬರುತ್ತಿರುವ ಹೊಸಬರು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ತಾವು ಕಷ್ಟಪಟ್ಟು ಶಾಟ್‌ ತೆಗೆದಿದ್ದೇವೆ, ಯಾರೂ ಮಾಡದ ಜಾಗದಲ್ಲಿ ಶೂಟಿಂಗ್‌ ಮಾಡಿದ್ದೇವೆ ಎಂದು ಇದ್ದಬದ್ದ ದೃಶ್ಯ ಸೇರಿಸಿ ಸಿನಿಮಾದ ಅವಧಿಯನ್ನು ಹೆಚ್ಚಿಸುತ್ತಾರೆ. ಆದರೆ, ಪ್ರೇಕ್ಷಕ ಬಯಸೋದು ಕೇವಲ ಮನರಂಜನೆಧಿ 
ಯನ್ನಷ್ಟೇ. ನೀನು ಎಲ್ಲಿ ಕ್ಯಾಮರಾ ಇಟ್ಟಿದ್ದೀಯಾ, ಯಾವ ಲೊಕೇಶನ್‌ಗೆ ಹೋಗಿದ್ದೀಯಾ ಅನ್ನೋದು ಮುಖ್ಯವಲ್ಲ. ಕೊಟ್ಟ ಕಾಸಿಗೆ ಎರಡು ಗಂಟೆ ವಿಭಿನ್ನ ರೀತಿಯಲ್ಲಿ ಮನರಂಜನೆ ಕೊಟ್ಟರೆ ಪ್ರೇಕ್ಷಕ ತೃಪ್ತಿಯಾಗುತ್ತಾನೆ ಎಂಬುದನ್ನು ಸಿನಿಮಾ ಮಾಡುವವರು ಅರ್ಥಮಾಡಿಕೊಳ್ಳಬೇಕು ಎನ್ನುತ್ತಿದ್ದರು. ಆ ನಿಟ್ಟಿನಲ್ಲಿ ಹೊಸಬರು ಯೋಚಿಸಬೇಕಾಗಿದೆ. ಇಲ್ಲವಾದರೆ ಬಂದ ದಾರಿಗೆ ಸುಂಕ
ಎಂದು ವಾಪಸ್ಸಾಗಬೇಕಾಗುತ್ತದೆ.

ರವಿಪ್ರಕಾಶ್‌ ರೈ

Advertisement
Advertisement

Udayavani is now on Telegram. Click here to join our channel and stay updated with the latest news.

Next