Advertisement

ಚತುಷ್ಪಥ ರಸ್ತೆ ವಿಸ್ತರಣೆ ಕಾಮಗಾರಿ: ಹೆಬ್ರಿ-ಉಡುಪಿ ಸಂಚಾರ ಎಚ್ಚರ

10:56 AM Jun 26, 2023 | Team Udayavani |

ಉಡುಪಿ: ತೀರ್ಥಹಳ್ಳಿ-ಮಲ್ಪೆ ರಾ.ಹೆ 169ಎ ವಿಭಾಗದ ಹೆಬ್ರಿ-ಮಲ್ಪೆ ಚತುಷ್ಪಥ ರಸ್ತೆ ವಿಸ್ತ ರಣೆ ಕಾಮಗಾರಿ ನಡೆಯುತ್ತಿದ್ದು ಮಳೆಗಾಲ ಹಿನ್ನೆಲೆಯಲ್ಲಿ ಹೆಬ್ರಿ-ಉಡುಪಿ ಕಡೆಗೆ ಸಂಚರಿಸುವರು ಎಚ್ಚರದಿಂದ ವಾಹನ ಚಲಾಯಿಸಬೇಕಿದೆ.

Advertisement

ಕಾಮಗಾರಿಗೆ ಅಲ್ಲಲ್ಲಿ ತಯಾರಿ ನಡೆಸಲಾಗಿದೆ ಮತ್ತು ಕಾಮಗಾರಿ ಆರಂಭವಾದ ಕಡೆಗಳಲ್ಲಿ ಮಣ್ಣು, ಕಲ್ಲುಗಳಿಂದ ಕೂಡಿದ ರಸ್ತೆಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಕೆಲವು ಕಡೆಗಳಲ್ಲಿ ದ್ವಿಚಕ್ರ ವಾಹನ ಸವಾರರು ವೇಗದಿಂದ ಚಲಿಸಿದಲ್ಲಿ ಸ್ಕಿಡ್‌ ಆಗಿಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಈ ರಸ್ತೆಯಲ್ಲಿ ಬಸ್ಸು-ಸರಕು ಸಾಗಾಟ, ಟೂರಿಸ್ಟ್‌ ವಾಹನಗಳು ಓಡಾಡುವುದರಿಂದ ಹೆಚ್ಚಿನ ಮುಂಜಾಗ್ರತೆ ವಹಿಸಬೇಕಿದೆ. ಹೆದ್ದಾರಿ ಪ್ರಾಧಿಕಾರ, ಪೊಲೀಸ್‌ ಇಲಾಖೆ,ಸ್ಥಳೀಯಾಡಳಿತ ಈ ಬಗ್ಗೆ ನಿಗಾವಹಿಸುವುದು ಅಗತ್ಯವಾಗಿದೆ.

ಕಳೆದ ಮೂರು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ. 355.72 ಕೋಟಿ ರೂ. ವೆಚ್ಚದಲ್ಲಿ ಹೆಬ್ರಿಯಿಂದ-ಪರ್ಕಳವರೆಗೆ ಮತ್ತು ಮಲ್ಪೆಯಿಂದ-ಕರಾವಳಿ ಜಂಕ್ಷನ್‌ವರೆಗೆ ಎರಡು ವಿಭಾಗದಲ್ಲಿ ಕಾಮಗಾರಿ ನಡೆಯಲಿದೆ. ಒಟ್ಟು 28.3 ಕಿ.ಮೀ. ಉದ್ದದ ರಸ್ತೆ ಇದಾಗಿದ್ದು, ಪ್ರಸ್ತುತ ಆತ್ರಾಡಿ ಒಂದು ಕಡೆಯಲ್ಲಿ, ಹಿರಿಯಡಕದಲ್ಲಿ ಎರಡು ಕಡೆಗಳಲ್ಲಿ 2 ಕಿ. ಮೀ. , ಹೆಬ್ರಿ-ಕನ್ಯಾನ 1.5 ಕಿ. ಮೀ. ರಸ್ತೆ ನಿರ್ಮಾಣಗೊಂಡಿದೆ. ಮರ ತೆರವುಗೊಳಿಸಲು ಅರಣ್ಯ ಇಲಾಖೆ ಉಡುಪಿ, ಹೆಬ್ರಿ ವಲಯಗಳ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ ಕೆಲವು ಕಡೆ ಅನುಮತಿ ನೀಡಲಾಗಿದೆ. ಕೆಲವು ಕಡೆಗಳಲ್ಲಿ ಅನುಮತಿ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಮರ ತೆರವಿಗೆ ಖಾಸಗಿ ಏಜೆನ್ಸಿ ಅವರಿಗೆ ವಹಿಸಲಾಗಿದೆ. ಮರ ತೆರವುಗೊಂಡ ಭಾಗದಲ್ಲಿ ಕಾಮಗಾರಿ ನಡೆಸುತ್ತಿದೆ.

ಮಳೆಯಲ್ಲಿ ಕೆಲಸ ಸ್ಥಗಿತ ?
ನಿರಂತರ ಮಳೆಯಾಗುತ್ತಿದ್ದರೆ ಕೆಲಸ ಮಾಡಲು ಆಗುವುದಿಲ್ಲ. ಮುಂದಿನ ಕಾಮಗಾರಿಗೆ ಅನುಕೂಲವಾಗುವಂತೆ ಸಿದ್ಧತೆ ಕೆಲಸಗಳು ಒಂದು ಕಡೆಯಲ್ಲಿ ನಡೆಯುತ್ತಿರುತ್ತದೆ. ಸಂಪೂರ್ಣ ಕಾಮಗಾರಿ ಸ್ಥಗಿತಗೊಳಿಸುವುದಿಲ್ಲ. ಆಗಸ್ಟ್‌ ನಲ್ಲಿ ಹೆಬ್ರಿ-ಪರ್ಕಳ ಕಾಮಗಾರಿ ವೇಗ ಪಡೆದುಕೊಳ್ಳುತ್ತದೆ. ಮಾರ್ಚ್‌ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಹೆ. ಪ್ರಾಧಿಕಾರ ತಿಳಿಸಿದೆ.

ಮಲ್ಪೆ-ಕರಾವಳಿ ಬೈಪಾಸ್‌ ಕಾಮಗಾರಿ ಯಾವಾಗ ?
ಮಲ್ಪೆ-ಕರಾವಳಿ ಬೈಪಾಸ್‌ ಕಾಮಗಾರಿಗೆ ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಕೆಲಸಗಳು ಬಾಕಿ ಇದೆ. ಚುನಾವಣೆ ಘೋಷಣೆಯಾದ ಅನಂತರ ಈ ಪ್ರಕ್ರಿಯೆ ನಡೆದಿಲ್ಲ. ತ್ರೀಡಿ ನೋಟಿಫಿಕೇಶನ್‌ ಪೂರ್ಣಗೊಂಡಿದೆ. ಇನ್ನೂ “ಅವಾರ್ಡ್‌’ ಆಗಬೇಕು (ಸಂತ್ರಸ್ತರಿಗೆ ಭೂ ಪರಿಹಾರ) ಸದ್ಯಕ್ಕೆ ಕುಂದಾಪುರದ ಎಸಿ ಅವರು ಭೂಸ್ವಾಧೀನ ಅಧಿಕಾರಿಗಳಾಗಿದ್ದು, ಭೂಸ್ವಾಧೀನ ಕೆಲಸ ಪೂರ್ಣಗೊಂಡ ಅನಂತರ ತತ್‌ಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

Advertisement

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next