Advertisement

ಡಿಸೆಂಬರ್‌ 31ರ ಮೇಲೆ ಸಿನಿಮಂದಿ ಕಣ್ಣು: ಒಂದೇ ದಿನ 4 ಸಿನಿಮಾ

09:28 AM Dec 06, 2021 | Team Udayavani |

ಡಿಸೆಂಬರ್‌ಗೂ ಕನ್ನಡ ಚಿತ್ರರಂಗಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಅದೇನೆಂದರೆ ಡಿಸೆಂಬರ್‌ ಕೊನೆಯ ವಾರದಲ್ಲಿ ಬಿಡುಗಡೆಯಾದ ಸಿನಿಮಾಗಳು ಹಿಟ್‌ ಆಗುತ್ತವೆ ಎಂಬ ನಂಬಿಕೆ. ಅದಕ್ಕೆ ಪೂರಕವಾಗಿ ಡಿಸೆಂಬರ್‌ನಲ್ಲಿ ತೆರೆಕಂಡ ಕೆಲವು ಸಿನಿಮಾಗಳು ಹಿಟ್‌ಲಿಸ್ಟ್‌ ಸೇರಿವೆ ಕೂಡಾ. ಹಾಗಾಗಿ, ಡಿಸೆಂಬರ್‌ ಕೊನೆ ವಾರವನ್ನು ನಂಬಿಕೊಂಡು ಬರುತ್ತಿರುವ ಸಂಪ್ರದಾಯ ಮುಂದುವರೆಯುತ್ತಾ ಬರುತ್ತಿದೆ. ಈ ಸಲವೂ ಡಿಸೆಂಬರ್‌ ಕೊನೆಯ ವಾರ ಅಂದರೆ ಡಿ.31ರಂದು ಕನ್ನಡದಿಂದ ಒಂದಷ್ಟು ಚಿತ್ರಗಳು ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಪ್ರಜ್ವಲ್‌ ನಟನೆಯ “ಅರ್ಜುನ್‌ ಗೌಡ’, ದಿಗಂತ್‌ ನಟಿಸಿರುವ “ಹುಟ್ಟುಹಬ್ಬದ ಶುಭಾಶಯಗಳು’, ಯೋಗಿ ನಟನೆಯ “ಒಂಭತ್ತನೇ ದಿಕ್ಕು’ ಹಾಗೂ ಅಜೇಯ್‌ ರಾವ್‌-ರಚಿತಾ ಜೋಡಿಯ “ಲವ್‌ ಯು ರಚ್ಚು’ ಚಿತ್ರಗಳು ಈಗಾಗಲೇ ಘೋಷಿಸಿಕೊಂಡಿವೆ. ಈ ಚಿತ್ರಗಳ ಕುರಿತು ಒಂದು ರೌಂಡಪ್‌..

Advertisement

ಪ್ರಜ್ವಲ್‌ ನಟನೆಯಲ್ಲಿ ಅರ್ಜುನ್‌ ಗೌಡ

“ಅರ್ಜುನ್‌ ಗೌಡ’- ಇದು ನಿರ್ಮಾಪಕ ರಾಮು ಅವರ ಕನಸಿನ ಸಿನಿಮಾ. ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿರುವ ರಾಮು ಅವರು, ಈ ಚಿತ್ರದ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಆದರೆ, ಕನಸು ಈಡೇರುವ ಮುನ್ನವೇ ಕೋವಿಡ್‌ಗೆ ಬಲಿಯಾದ ರಾಮು ಅವರ ಕನಸನ್ನು ಈಡೇರಿಸಲು ಅವರ ಪತ್ನಿ ಮಾಲಾಶ್ರೀ ಮುಂದಾಗಿದ್ದಾರೆ. ಪ್ರಜ್ವಲ್‌ ದೇವರಾಜ್‌ ನಾಯಕರಾಗಿರುವ ಈ ಚಿತ್ರವನ್ನು ಈಗ ಅದ್ಧೂರಿಯಾಗಿ ರಿಲೀಸ್‌ ಮಾಡಲು ಮುಂದಾಗಿದ್ದಾರೆ. ಚಿತ್ರವನ್ನು ಲಕ್ಕಿ ಶಂಕರ್‌ ನಿರ್ದೇಶಿಸಿದ್ದಾರೆ. ಚಿತ್ರದ ಲಿರಿಕಲ್‌ ವಿಡಿಯೋ ಡಿ.8ರಂದು ಬಿಡುಗಡೆಯಾಗಲಿದೆ. ಸುಮಾರು 200ಕ್ಕೂ ಹೆಚ್ಚು ತಂತ್ರಜ್ಞರನ್ನು ಬಳಸಿಕೊಂಡು “ಅರ್ಜುನ್‌ ಗೌಡ’ ಚಿತ್ರದ ರೀ-ರೆಕಾರ್ಡಿಂಗ್‌ ಕಾರ್ಯಗಳನ್ನು ಬೆಂಗಳೂರು ಮಾತ್ರವಲ್ಲದೆ ಮುಂಬೈ, ಚೆನ್ನೈ ಹಾಗೂ ಕೊಲ್ಕತ್ತದ ಪ್ರಸಿದ್ದ ಸ್ಟುಡಿಯೋಗಳಲ್ಲಿ ಮಾಡಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ “ಅರ್ಜುನ್‌ ಗೌಡ’ ಚಿತ್ರದ ಟ್ರೇಲರ್‌ ನೋಡುಗರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಆ್ಯಕ್ಷನ್‌ ದೃಶ್ಯಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಲಕ್ಕಿ ಶಂಕರ್‌ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್ ಗೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್‌ ಜೋಡಿಯಾಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:ವಂಚನೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್ ಗೆ ದೇಶ ತೊರೆಯದಂತೆ ತಡೆದ ಅಧಿಕಾರಿಗಳು!

ದಿಗಂತ್‌ ಹುಟ್ಟುಹಬ್ಬದ ಶುಭಾಶಯಗಳು

Advertisement

ದಿಗಂತ್‌ “ಹುಟ್ಟುಹಬ್ಬದ ಶುಭಾಶಯಗಳು’ ಎಂಬ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿರುವ ಬಗ್ಗೆ ನೀವು ಕೇಳಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಡಿ.31ರಂದು ಬಿಡುಗಡೆಯಾಗುತ್ತಿದೆ. ಈ ಮೂಲಕ ದೊಡ್ಡ ಗ್ಯಾಪ್‌ನ ನಂತರ ದಿಗಂತ್‌ ನಾಯಕರಾಗಿ ನಟಿಸಿದ ಸಿನಿಮಾವೊಂದು ಬಿಡುಗಡೆಯಾದಂತಾಗುತ್ತದೆ. ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ನಡಿ ಟಿ.ಆರ್‌.ಚಂದ್ರಶೇಖರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಾಗರಾಜ್‌ ಬೇತೂರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್‌ ಕುತೂಹಲ ಹುಟ್ಟುಹಾಕಿದೆ. ದಿಗಂತ್‌ ಅವರ ಪಾತ್ರ ಕೂಡಾ ಈ ಸಿನಿಮಾದಲ್ಲಿ ಸಾಕಷ್ಟು ವಿಭಿನ್ನವಾಗಿದ್ದು, ಅವರ ಕೆರಿಯರ್‌ಗೆ ಬ್ರೇಕ್‌ ನೀಡಲಿದೆಯಂತೆ. ಚಿತ್ರಕ್ಕೆ ಶ್ರೀಧರ್‌ ಸಂಭ್ರಮ್‌ ಸಂಗೀತ, ಅಭಿಲಾಶ್‌ ಅವರ ಛಾಯಾಗ್ರಹಣ, ಯೋಗರಾಜ್‌ ಭಟ್‌ ಸಾಹಿತ್ಯವಿದೆ.

ಬೋಲ್ಡ್‌ ಸ್ಟೋರಿ ಲವ್‌ ಯು ರಚ್ಚು

ಗುರುದೇಶಪಾಂಡೆ ನಿರ್ಮಾಣದಲ್ಲಿ ಮೂಡಿಬಂದಿರುವ “ಲವ್‌ ಯು ರಚ್ಚು’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಇದೇ ಡಿಸೆಂಬರ್‌ 31ರಂದು ಚಿತ್ರವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ಪ್ರಚಾರದ ಭಾಗವಾಗಿ ಚಿತ್ರದ “ಮುದ್ದು ನೀನು… ಮುದ್ದು ನೀನು’ ಎಂಬ ರೊಮ್ಯಾಂಟಿಕ್‌ ಮೆಲೋಡಿ ಹಾಡನ್ನು ಬಿಡುಗಡೆಗೊಳಿಸಿತ್ತು. ಇದೀಗ ಈ ಹಾಡು ಚಿತ್ರತಂಡ ನಿರೀಕ್ಷೆಗೂ ಮೀರಿ ಸಿನಿಪ್ರಿಯರನ್ನು ತಲುಪಲು ಯಶಸ್ವಿಯಾಗಿದೆ. ಜೊತೆಗೆ ಟೈಟಲ್‌ ಟ್ರ್ಯಾಕ್‌ ಕೂಡಾ ಹಿಟ್‌ಲಿಸ್ಟ್‌ ಸೇರಿದೆ. ಒಂದೆಡೆ ಚಿತ್ರದ ಮೆಲೋಡಿ ಹಾಡು ಸೌಂಡ್‌ ಮಾಡುತ್ತಿದ್ದರೆ, ಮತ್ತೂಂದೆಡೆ ಅದೇ ಹಾಡಿನಲ್ಲಿ ಅಜೇಯ್‌ ರಾವ್‌ ಮತ್ತು ರಚಿತಾ ರಾಮ್‌ ಜೋಡಿಯ ಆನ್‌ಸ್ಕ್ರೀನ್‌ ಕೆಮಿಸ್ಟ್ರಿ ಕೂಡ ಜೋರಾಗಿ ಸೌಂಡ್‌ ಮಾಡುತ್ತಿದೆ. ಅದರಲ್ಲೂ ರಚಿತಾ ಬೋಲ್ಡ್‌ ಲುಕ್‌ ಅದಾದ ಬಳಿಕ ಚಿತ್ರದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ರಚಿತಾ “ರೊಮ್ಯಾನ್ಸ್‌’ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಈ ಎಲ್ಲ ಬೆಳವಣಿಗೆಗಳು ಇದೀಗ “ಲವ್‌ ಯು ರಚ್ಚು’ ಚಿತ್ರಕ್ಕೆ ಪ್ಲಸ್‌ ಆಗಿದೆ.

ಒಂಬತ್ತನೇ ದಿಕ್ಕು

ನಿರ್ದೇಶಕ ದಯಾಳ್‌ ಡಿ. 31ಕ್ಕೆ “ಒಂಬತ್ತನೇ ದಿಕ್ಕು’ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದ್ದಾರೆ. ತಮ್ಮ “ಒಂಬತ್ತನೇ ದಿಕ್ಕು’ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ದಯಾಳ್‌ ಪದ್ಮನಾಭನ್‌, “ಹೊಸಥರದ ಸಬೆjಕ್ಟ್‌ನ ಸಿನಿಮಾ ಮಾಡಬೇಕು ಅಂತ ಅಂದುಕೊಳ್ಳುತ್ತಿದ್ದಾಗ ಈ ಸಿನಿಮಾ ಮಾಡುವ ಐಡಿಯಾ ಬಂತು. ಇದೊಂದು ಇಂದಿನ ಸ್ಟೈಲ್‌ನ ಪಕ್ಕಾ ಕಮರ್ಶಿಯಲ್‌ ಎಲಿಮೆಂಟ್ಸ್‌ ಇರುವ ಆ್ಯಕ್ಷನ್‌ ಕಂ ಕ್ರೈಂ-ಥ್ರಿಲ್ಲರ್‌ ಸಬ್ಜೆಕ್ಟ್ ಸಿನಿಮಾ. ನಮ್ಮ ಕಾನೂನಿನಲ್ಲಿ ಬರುವ ಸೆನ್ಸಿಟಿವ್‌ ವಿಷಯವೊಂದನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ. ಅದೇನು ಅನ್ನೋದನ್ನ ಸ್ಕ್ರೀನ್‌ ಮೇಲೆ ನೋಡ್ಬೇಕು. ಒಂದು ದಿನದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಕಥೆಯನ್ನ ಸ್ಕ್ರೀನ್‌ ಮೇಲೆ ಹೇಳಿದ್ದೇವೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ವಿವರಣೆ ಕೊಡುತ್ತಾರೆ. ಇನ್ನು “ಒಂಬತ್ತನೇ ದಿಕ್ಕು’ ಚಿತ್ರದಲ್ಲಿ ಲೂಸ್‌ಮಾದ ಯೋಗಿ ನಾಯಕನಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next