ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಳೆದ ಐದೂವರೆ ವರ್ಷಗಳಲ್ಲಿ ಮೂರ್ನಾಲ್ಕು ಬಾರಿ ವಿಮಾನ ಅವಗಢಗಳು ಸಂಭವಿಸಿದೆ. ಮೂರು ವರ್ಷದ ಹಿಂದೆ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಇದ್ದ ವಿಶೇಷ ವಿಮಾನ ಇಲ್ಲಿ ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷ ಕಂಡು ದೊಡ್ಡ ಸುದ್ದಿಯಾಗಿತ್ತು.
ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗುಣಮಟ್ಟದ ಸೌಲಭ್ಯ, ತಾಂತ್ರಿಕತೆಯನ್ನು ಹೊಂದಿದೆ. ಆದರೆ ಕಳೆದ ಐದು ವರ್ಷಗಳಲ್ಲಿ ಮೂರು ಅವಗಢಗಳು ಚಿಂತೆ ಮೂಡಿಸುವಂತೆ ಮಾಡಿವೆಯಾದರು, ಅದೃಷ್ಟವಶಾತ್ ಯಾವುದೇ ಅನಾಹುತ ಆಗಿಲ್ಲವೆಂಬುದು ಸಮಾಧಾನದ ವಿಚಾರವಾಗಿದೆ.
ಇದನ್ನೂ ಓದಿ:ಹುಬ್ಬಳ್ಳಿ ಏರ್ ಪೋರ್ಟ್ ನಲ್ಲಿ ಇಂಡಿಗೋ ವಿಮಾನದ ಟೈರ್ ಸ್ಫೋಟ
2015ರ ಮಾರ್ಚ್ 9ರ ರಾತ್ರಿ 7:30ಗಂಟೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಸ್ಪೈಸ್ ಜೆಟ್ ವಿಮಾನ ಮಳೆಯ ನಡುವೆಯೇ ಲ್ಯಾಂಡಿಂಗ್ ಆಗಿತ್ತಾದರು, ರನ್ ವೇ ಬಿಟ್ಟು ಕೆಲ ಮೀಟರ್ ವರೆಗೆ ಸಾಗಿ ನಿಂತಿತ್ತು. ಲ್ಯಾಂಡಿಂಗ್ ವೇಳೆ ಪೈಲಟ್ ನಿಯಂತ್ರಣ ಕಳೆದುಕೊಂಡಿತ್ತು ಎನ್ನಲಾಗುತ್ತಿದೆ. ವಿಮಾನದಲ್ಲಿದ್ದ ಸುಮಾರು 78 ಜನ ಪ್ರಯಾಣಿಕರು, ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಹೊರ ಬಂದಿದ್ದರು.
ವಿಮಾನದ ಎಡ ಭಾಗದಲ್ಲಿ ಜಖಂಗೊಂಡಿತ್ತು. ಕೆಲ ತಿಂಗಳುವರೆಗೆ ಹುಬ್ಬಳ್ಳಿಗೆ ವಿಮಾನ ಯಾನ ಸಂಪರ್ಕ ಸ್ಥಗಿತಗೊಂಡಿತ್ತು. ಅನಂತರದಲ್ಲಿ ಇಲ್ಲಿನ ವಿಮಾನ ನಿಲ್ದಾಣದ ರನ್ ವೇ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿತ್ತು.
ರಾಹುಲ್ ಗಾಂಧಿ ಇದ್ದ ವಿಮಾನ: 2018ರ ಏಪ್ರಿಲ್ 26 ರಂದು ಚುನಾವಣಾ ಪ್ರಚಾರಕ್ಕೆಂದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನ VT-AVH ದಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಆಗಮಿಸಿದ್ದರು. ವಿಮಾನ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಾಗ ಎಂಜಿನ್ ವಿಫಲವಾಗಿತ್ತು. ತಕ್ಷಣಕ್ಕೆ ಪೈಲಟ್ ಮ್ಯಾನ್ಯುಯಲ್ ಎಂಜಿನ್ ಸಹಾಯದೊಂದಿಗೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದ. ವಿಮಾನ ಸುಮಾರು 15 ಅಡಿ ಎತ್ತರದಲ್ಲಿದ್ದಾಗ ಈ ಘಟನೆ ನಡೆದಿತ್ತು. ನಂತರದಲ್ಲಿ ರಾಹುಲ್ ಗಾಂಧಿಯವರು ತಾವು ಬದುಕುಳಿದಿದ್ದೆ ಪವಾಡ ಎಂದಿದ್ದರಲ್ಲದೆ, ಹರಕೆ ತೀರಿಸಲು ಕೆಲ ದೇವಸ್ಥಾನಗಳಿಗೂ ತೆರಳಿದ್ದರು.
ಇದನ್ನೂ ಓದಿ:ಮರವೂರು ಸೇತುವೆ ಬಿರುಕು: ಬಜಪೆ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಇಲ್ಲಿದೆ ರಸ್ತೆ ಮಾಹಿತಿ
ಈ ಹಿಂದೆ ಸಚಿವರಾಗಿದ್ದ ರೋಷನ್ ಬೇಗ್ ಇನ್ನಿತರ ಸಚಿವರಿದ್ದ ವಿಮಾನ ಸಹ ರನ್ ವೇ ಜಾರಿ ಸಾಗಿದ್ದ ಘಟನೆ ನಡೆದಿತ್ತು.
ಇದೀಗ ಜೂ.14ರಂದು ಕೇರಳದ ಕಣ್ಣೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ತರಳಬೇಕಾಗಿದ್ದ ಇಂಡಿಗೋ ವಿಮಾನ ಸೋಮವಾರ ರಾತ್ರಿ ಟೈರ್ ಸ್ಫೋಟಗೊಂಡು ರನ್ ವೇ ಬಿಟ್ಟು ಜಾರಿದೆಯಾದರೂ ಯಾವುದೇ ಅಪಾಯವಿಲ್ಲದೆ 15 ಜನ ಪ್ರಯಾಣಿಕರು, ಸಿಬ್ಬಂದಿ ಸುರಕ್ಷಿತವಾಗಿ ಹೊರ ಬಂದಿದ್ದಾರೆ.