Advertisement

ಅಳಿವಿನಂಚಿನ ಕೊಂಡುಕುರಿ ಸಂತತಿ ಮೂರು ಪಟ್ಟು ಹೆಚ್ಚಳ

11:12 PM Dec 31, 2021 | Team Udayavani |

ದಾವಣಗೆರೆ: ಏಷ್ಯಾ ಖಂಡದಲ್ಲಿಯೇ ಅಳಿವಿನಂಚಿನಲ್ಲಿರುವ ಅಪರೂಪದ ವನ್ಯಜೀವಿ ಎನ್ನಿಸಿದ “ಕೊಂಡುಕುರಿ’ ಸಂತತಿ ಈಗ ಮೂರು ಪಟ್ಟು ಹೆಚ್ಚಾಗಿದೆ. ತನ್ನ ಸೂಕ್ಷ್ಮ ಹಾಗೂ ನಾಚಿಕೆ ಸ್ವಭಾವದಿಂದ ಎಲ್ಲರನ್ನೂ ಆಕರ್ಷಿಸುವ ಇದರ ಸಂತತಿ ಹೆಚ್ಚುತ್ತಿರುವುದು ಪ್ರಾಣಿಪ್ರಿಯರಲ್ಲಿ ಸಂತಸ ಮೂಡಿಸಿದೆ.

Advertisement

1972ರ ಷೆಡ್ನೂಲ್‌-1ರಲ್ಲಿ ಜಗತ್ತಿನ ವಿನಾಶದ ಪ್ರಾಣಿಗಳಲ್ಲಿ ಕೊಂಡುಕುರಿ ಸಹ ಸೇರಿದೆ. ಇಂಟರ್‌ನ್ಯಾಷನಲ್‌ ಯೂನಿಯನ್‌ ಫಾರ್‌ ದ ಕನ್ಸ್‌ರ್ವೇಶನ್‌ ಆ್ಯಂಡ್‌ ನೇಚರ್‌ ಆ್ಯಂಡ್‌ ನೇಚರ್‌ ರಿಸೋರ್ಸ್‌ (ಐಯುಸಿಎನ್‌) ಪ್ರಕಾರವೂ ಇದು ಅಳಿವಿನ ಅಂಚಿನಲ್ಲಿರುವ ವರ್ಗಕ್ಕೆ ಸೇರಿದೆ. ಇದರ ಸಂತತಿ ಈಗ ಮೂರು ಪಟ್ಟು ಹೆಚ್ಚಾಗಿರುವುದು ಜೀವಸಂಕುಲದ ಸೌಂದರ್ಯ ವೃದ್ಧಿಗೂ ಕಾರಣವಾಗಿದೆ.

ದೇಶದ ಏಕೈಕ ಕೊಂಡಕುರಿ ಅಭಯಾರಣ್ಯ ಎಂಬ ಖ್ಯಾತಿಗೆ ಭಾಜನವಾಗಿರುವ ಜಿಲ್ಲೆಯ ಜಗಳೂರು ತಾಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶವನ್ನು ಕೊಂಡುಕುರಿ ಅಭಯಾರಣ್ಯವನ್ನಾಗಿ ಘೋಷಿಸುವ ಮೊದಲು, ಅಂದರೆ 10 ವರ್ಷಗಳ ಹಿಂದೆ ಇಲ್ಲಿ ಕೊಂಡುಕುರಿಗಳ ಸಂಖ್ಯೆ ಅಂದಾಜು 50ರಷ್ಟಿತ್ತು. ಈಗ ಅವುಗಳ ಸಂಖ್ಯೆ 200ರ ಆಸುಪಾಸಿನಲ್ಲಿದೆ.

ಏನಿದು ಕೊಂಡುಕುರಿ?
ಕೊಂಡುಕುರಿ ವನ್ಯಜೀವಿಯಾಗಿದ್ದು ಜಿಂಕೆಯಷ್ಟೇ ಸೂಕ್ಷ್ಮ ಹಾಗೂ ನಾಚಿಕೆ ಸ್ವಭಾವದ ಬಲು ಅಪರೂಪದ ವನ್ಯಜೀವಿ ಸಂಕುಲವಿದು. ಇದಕ್ಕೆ Four Horned Antelope ಎಂತಲೂ ಕರೆಯುತ್ತಾರೆ. ಗಂಡು ಕೊಂಡುಕುರಿಗೆ ನಾಲ್ಕು ಕೊಂಬುಗಳಿದ್ದು ನೋಡಲು ಆಕರ್ಷಕವಾಗಿರುತ್ತದೆ. ಸಾಮಾನ್ಯವಾಗಿ ಹೆಣ್ಣು ಕೊಂಡುಕುರಿಗೆ ಕೊಂಬು ಇರುವುದಿಲ್ಲ. ಒಂದೇ ಕಡೆ ಹಿಕ್ಕೆ (ಮಲ) ಹಾಕುವುದು ಈ ಜೀವಿಯ ವಿಶೇಷ. ಕುರುಚಲು ಅರಣ್ಯ ಇವುಗಳ ವಾಸಸ್ಥಾನ.

ಅಳಿವಿನಂಚಿನಲ್ಲಿರುವ ಕೊಂಡುಕುರಿಗಳ ಸಂರಕ್ಷಣೆಯ ಅಗತ್ಯ ಮನಕಂಡು ಸರಕಾರ ರಂಗಯ್ಯನದುರ್ಗ ಮೀಸಲು ಅರಣ್ಯ ಪ್ರದೇಶನ್ನು ರಂಗಯ್ಯನದುರ್ಗ “ಕೊಂಡುಕುರಿ ಅಭಯಾರಣ್ಯ’ ಎಂದು ಘೋಷಿಸಿತು. ಇದರ ಪರಿಣಾಮ ಅಳಿವಿನಂಚಿರುವ ಕೊಂಡುಕುರಿ ಜೀವಿ ವಾಸಕ್ಕೆ ಉತ್ತಮ ಸುರಕ್ಷಿತ ಪರಿಸರ, ವಾತಾವರಣ ನಿರ್ಮಾಣವಾಗಿ ಸಂತತಿ ಹೆಚ್ಚಳಕ್ಕೂ ಅನುಕೂಲವಾಗಿದೆ.

Advertisement

ಇದನ್ನೂ ಓದಿ:ಮೊಬೈಲ್‌ ಕಂಪನಿಗಳಿಂದ 6,500 ಕೋಟಿ ವಂಚನೆ ಪತ್ತೆ

ಅಭಯಾರಣ್ಯ ಘೋಷಣೆಯಿಂದ ಕೊಂಡುಕುರಿ ಅರಣ್ಯ ಪ್ರದೇಶ ಮಾನವನ ಹಸ್ತಕ್ಷೇಪ ನಿರ್ಬಂಧಿಸಲ್ಪಟ್ಟು ಕೊಂಡುಕುರಿ ಸಹಿತ ಉಳಿದ ಜೀವಸಂಕುಲಕ್ಕೆ ಸುರಕ್ಷೆಯ ನೆಲೆಯಾಗಿ ಮಾರ್ಪಟ್ಟಿದೆ. ಇಲಾಖೆಯಿಂದ ಬೇಸಗೆ ನೀರಿನ ತೊಟ್ಟಿ ಮಾಡಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಕೊಂಡುಕುರಿಗಳಿಗೆ ತಿನ್ನಲು ಬೇಕಾದ ಎಳೆಹುಲ್ಲು, ದಿಂಡುಗದ ಎಲೆ, ಬಿಕ್ಕೆಮರದ ಚೆಕ್ಕೆ ಅಪಾರ ಪ್ರಮಾಣದಲ್ಲಿದೆ. ಈ ಎಲ್ಲ ಕಾರಣಗಳಿಂದ ಕೊಂಡುಕುರಿಗಳ ಸಂತತಿ ಅಧಿಕವಾಗಿದೆ.

ರಂಗಯ್ಯನದುರ್ಗ ಅರಣ್ಯ ಪ್ರದೇಶವನ್ನು ಕೊಂಡುಕುರಿ ಅಭಯಾರಣ್ಯ ಪ್ರದೇಶವಾಗಿ ಘೋಷಿಸಿದ್ದರಿಂದ ಕೊಂಡುಕುರಿಗಳ ರಕ್ಷಣೆ ಹಾಗೂ ಸಂತತಿ ಹೆಚ್ಚಳಕ್ಕೆ ಅನುಕೂಲವಾಗಿದೆ. ಅಭಯಾರಣ್ಯ ಘೋಷಣೆಗೆ ಮೊದಲು ಕೇವಲ 50ರಷ್ಟಿದ್ದ ಸಂತತಿ ಈಗ 200ರ ಆಸುಪಾಸಿನಲ್ಲಿದೆ.
– ಎಚ್‌.ಎಸ್‌. ಚಂದ್ರಶೇಖರ್‌, ಉಪವಲಯ ಅರಣ್ಯಾಧಿಕಾರಿ

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next