Advertisement

ನಾಗರಹೊಳೆಯಲ್ಲಿ 4 ಕೊಂಬಿನ ಹುಲ್ಲೆ ಪ್ರತ್ಯಕ್ಷ

03:05 PM Oct 21, 2020 | Suhan S |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾ‌ನದ ವೀರನಹೊಸಳ್ಳಿ ವಲಯ ವ್ಯಾಪ್ತಿಯಲ್ಲಿ ಪ್ರಾಣಿ ಸಂಕುಲದಲ್ಲಿ ಅಳಿವಿನ ‌ ಅಂಚಿನಲ್ಲಿರುವ ನಾಲ್ಕು ಕೊಂಬಿನ ಹುಲ್ಲೆ (ಆಂತಿಲೋಪ್‌) ಕಾಣಿಸಿಕೊಂಡಿದ್ದು, ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿದೆ.

Advertisement

ಆಂಗ್ಲಭಾಷೆಯಲ್ಲಿ ಫೋರ್‌ ಹಾರ್ನಡ್‌ ಆಂತಿಲೋಪ್‌ (ಹಿಂದಿಯಲ್ಲಿ ಚೌಸಿಂಗ) ಎಂದು ಕರೆಸಿಕೊಳ್ಳುವ‌ ಈ ವನ್ಯಜೀವಿಯ ತಲೆಯ ಮೇಲೆ ನಾಲ್ಕು ಪುಟ್ಟ ಆಕರ್ಷಕ ಕೊಂಬುಗಳನ್ನು ಹೊಂದಿದೆ. ಈ ಅಪರೂಪದ ಪ್ರಾಣಿಯ ಸಂರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ.

ಪ್ರಾಚೀನ ‌ ಜಾತಿಯ ಪ್ರಾಣಿ: ಅತ್ಯಂತ ಪ್ರಾಚೀನ ‌ ಜಾತಿಯ ಪ್ರಾಣಿಯೆಂದೇ ವನ್ಯಜೀವಿ ತಜ್ಞರಿಂದ ಗುರುತಿಸಲ್ಪಡುವ ‌ ನಾಲ್ಕು ಕೊಂಬಿನ ‌ ಹುಲ್ಲೆ ವೀರನಹೊಸಳ್ಳಿ ವಲಯದಲ್ಲಿ ಕಾಣಿಸಿಕೊಂಡಿದೆ. ಇಲಾಖೆಯು ದಟ್ಟಾರಣ್ಯ ಭಾಗದಲ್ಲಿಅಳವಡಿಸಿರುವ ಕ್ಯಾಮರಾ ಕಣ್ಣಿಗೆ ಈ ಮುದ್ದಾದ ಪ್ರಾಣಿ ಕಾಣಿಸಿಕೊಂಡಿದೆ.

ಆಕರ್ಷಕ ನಾಲ್ಕು ಕೊಂಬಿನ ಪ್ರಾಣಿ: ಸುಮಾರು 15-20 ಕೆ.ಜಿ. ತೂಕ ಹೊಂದಿರುವ ಹುಲ್ಲೆಯು ಜಿಂಕೆಯನ್ನೇ ಹೋಲುವಂತಿದೆ. ಆದರೆ, ಗಾತ್ರದಲ್ಲಿ ಅಷ್ಟು ದೊಡ್ಡದಲ್ಲ. ಈ ಹುಲ್ಲೆಯ ತಲೆಯ ಮೇಲೆ ಅತ್ಯಾಕರ್ಷಕ ನಾಲ್ಕು ಕೊಂಬುಗಳಿವೆ. ಹಿಂಭಾಗದ ಕೊಂಬುಗಳು 15-20 ಸೆಂ.ಮೀ.ಉದ್ದವಿದ್ದು, ಮುಂಭಾಗದ ಕೊಂಬುಗ ‌ಳು 4-5 ಸೆಂ.ಮೀ ಉದ್ದವಿರುತ್ತವೆ. ಸಾಂಬಾ, ಚುಕ್ಕಿ ಜಿಂಕೆಗಳಿಗೆ ಎರಡೇ ಕೊಂಬುಗಳಿರುತ್ತವೆ. ಇವುಗಳಲ್ಲಿ ಗಂಡುಹೆಣ್ಣು ಒಂದಾಗುವ ಸಮಯದಲ್ಲಿ ಕೊಂಬುಗಳು ಮುರಿದು ಹೋಗಿ (ಆಂಟ್ಲರ್‌) ಮತ್ತೆ ಬೆಳೆಯುತ್ತವೆ. ಆದರೆ, ನಾಲ್ಕು ಕೊಂಬಿನ ಹುಲ್ಲೆಯಲ್ಲಿ ನಾಲ್ಕು ಕೊಂಬುಗಳು (ಆಂಟಿಲೋಪ್‌) ಶಾಶ್ವತವಾಗಿರುತ್ತವೆ ಮತ್ತು ಕೊಂಬುಗಳು ಸುರುಳಿ ಸುರುಳಿಯಾಗಿರದೇ ನೀಳವಾಗಿರುತ್ತವೆ. ಗಂಡು ಹುಲ್ಲೆ ಮಾತ್ರ ಕೊಂಬನ್ನು ಹೊಂದಿರುತ್ತದೆ. ಹೆಣ್ಣು ಹುಲ್ಲೆಗೆ ಕೊಂಬಿರುವುದಿಲ್ಲ.

ನಾಗರಹೊಳೆ ಪ್ರಶಸ್ತ್ಯ  ಸ್ಥಳ: ಪಶ್ಚಿಮ ಬಂಗಾಳ, ಬಿಹಾರ ಹಾಗೂ ಕರ್ನಾಟಕದ ಸಂಡೂರು ಅರಣ್ಯದಲ್ಲಿ ಇಂತಹ ‌ ಪ್ರಾಣಿಯನ್ನು ನೋಡಿದವರು ದಾಖಲಿಸಿದ್ದಾರೆ. ನಾಲ್ಕು ಕೊಂಬಿನ ಹುಲ್ಲೆ ಹೆಚ್ಚಾಗಿ ಕುರು ಚಲು ಹುಲ್ಲುಗಾವಲು ಪ್ರದೇಶದಲ್ಲಿ ವಾಸಿಸುತ್ತದೆ. ವೀರನಹೊಸಳ್ಳಿ ವಲಯದಲ್ಲಿ ಕುರು ಚಲು, ಪೊದೆಗಳು ಹೇರಳವಾಗಿದೆ. ಅಲ್ಲದೆ ಮೇಟಿಕುಪ್ಪೆ ವಲಯ ವ್ಯಾಪ್ತಿಯಲ್ಲೂ ಕೆಲವೊಮ್ಮೆ ಈ ಪ್ರಾಣಿ ಕಾಣಿಸಿಕೊಂಡಿದೆ. ಉದ್ಯಾನವನದ ಉಳಿದ ಯಾವುದೇ ಭಾಗದಲ್ಲೂ ಇದು ಕಾಣಿಸಿಕೊಂಡಿಲ್ಲ.

Advertisement

ಒಂಟಿ ಜೀವನ, ನಾಚಿಕೆ ಸ್ವಭಾವ: ಈ ಹುಲ್ಲೆ ಮರಿ ಅತ್ಯಂತ ನಾಚಿಕೆ ಸ್ವಭಾವ ಹೊಂದಿದೆ. ಪುಕ್ಕಲು ಸ್ವಭಾವ ಕೂಡ ಇದೆ. ಇವುಗಳ ಜೀವಿತಾವಧಿ 10 ವರ್ಷ. ತನ್ನ ಸುತ್ತ ಮುತ್ತ ಯಾರಾದರೂ ಕಾಣಿಸಿ ಕೊಳ್ಳುತ್ತಾರೆಂಬ ಸುಳಿವು ಸಿಕ್ಕ ಕೂಡಲೇ ಕ್ಷಣ ಮಾತ್ರದಲ್ಲಿ ಕಣ್ಮರೆಯಾಗಿ ಬಿಡುತ್ತವೆ. ಇವುಗಳು ಗುಂಪಾಗಿ ಜೀವನ ನಡೆಸುವುದಿಲ್ಲ. ಒಂಟಿ ಯಾಗಿಯೇ ಬದುಕುವುದು ಇವುಗಳ ಅಭ್ಯಾಸ. ಸಂತಾನೋತ್ಪತ್ತಿ ವೇಳೆ ಗಂಡು ಹೆಣ್ಣು ಒಂದಾಗಿರುತ್ತವೆ. 8 ತಿಂಗಳು ಗರ್ಭಾವಸ್ಥೆ ಅವಧಿ. ಇವೆಲ್ಲದರ ಕುರಿತು ಅಧ್ಯಯನ ನಡೆಸಲು ಗಣತಿ ಕಾರ್ಯ ನಡೆಸಲು ಕೂಡ‌ ಇಲಾಖೆಗೆ ಕಷ್ಟಕರವಾಗಿದೆ.

ನೀರಿನ ಸೆಲೆ ಬೇಕು: ನಾಲ್ಕು ಕೊಂಬಿನ ಹುಲ್ಲೆ ಪದೇ ಪದೆ ನೀರು ಕುಡಿಯುವ ಅಭ್ಯಾಸ ಹೊಂದಿದೆ. ಕಾಡಿನಲ್ಲಿ ಕೆರೆಕಟ್ಟೆಗಳು ಇರುವ ‌ ಆಸುಪಾಸಿನಲ್ಲೇ ಇವು ವಾಸಿಸುತ್ತವೆ. ಹಾಗಾಗಿ ಇವು ಕಾಣಿಸಿಕೊಳ್ಳುವ ಪ್ರದೇಶದಲ್ಲಿ ನೀರಿನ ಸೆಲೆಯಿದೆ ಎಂದೇ ಅರ್ಥೈಸಿಕೊಳ್ಳಬಹುದಾಗಿದೆ. ನೀರಿನ ಸೆಲೆಯಿದ್ದಲ್ಲಿ ಹುಲ್ಲುಗಾವಲು ಕೂಡ ಯತೇತ್ಛವಾಗಿ ಬೆಳೆದಿರುವುದು ಇದಕ್ಕೆ ವರವಾಗಿ ಪರಿಣಮಿಸಿದೆ.

ಹಿಕ್ಕೆ ಹಾಕುವಲ್ಲಿ ಶಿಸ್ತು: ನಾಲ್ಕು ಕೊಂಬಿನ ‌ ಹುಲ್ಲೆಗಳು ಜಿಂಕೆ, ಕುರಿಗಳಂತೆ ಎಲ್ಲೆಂದರಲ್ಲಿ ಹಿಕ್ಕೆಹಾಕುವುದಿಲ್ಲ. ಕಾಡಿನ ವ್ಯಾಪ್ತಿಯಲ್ಲಿ ಅದಕ್ಕಾಗಿಯೇ ಒಂದು ನಿರ್ದಿಷ್ಟ ಜಾಗವನ್ನು ಗುರುತಿಸಿಕೊಂಡು ಅದೇ ಜಾಗದಲ್ಲಿ ಹಿಕ್ಕೆ ಹಾಕುವುದು ಇದರ ವಿಶಿಷ್ಟತೆ. ಇವು ತಮ್ಮ ಗಡಿಗಳನ್ನು ಗುರುತಿಸಿಕೊಳ್ಳುವವಿಧಾನ ಕೂಡ ಇದಾಗಿರಬಹುದು ಎನ್ನುತ್ತಾರೆ ಪ್ರಾಣಿತಜ್ಞರು.

ಇತ್ತೀಚೆಗೆ ಮುಕ್ತಾಯಗೊಂಡಿರುವ 66ನೇ ವನ್ಯಜೀವಿ ಸಪ್ತಾಹದ ‌ ಅಂಗವಾಗಿ ರಣಹದ್ದುಗಳು, ಚಿಪ್ಪುಹಂದಿ, ಕೂರ, ನಾಲ್ಕು ಕೊಂಬಿನ ‌ ಹುಲ್ಲೆ, ನೀರುನಾಯಿ, ಹಾರುವ ಅಳಿಲು ಸೇರಿದಂತೆ ವನ್ಯಜೀವಿಗಳ ಕುರಿತು ಮಾಹಿತಿ ಮತ್ತು ಸಂತತಿಗಳ ಉಳಿವಿಗೆ ಇಲಾಖೆ ಮುಂದಾಗಿರುವುದು ವನ್ಯಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಕಠಿಣ ಕಾನೂನು: ಇಂಟರ್‌ನ್ಯಾಷನಲ್‌ ಯೂನಿಯನ್‌ ಫಾರ್‌ ಕನ್ಸರ್‌ವೆಷನ್‌ ಆಫ್ ನೇಚರ್‌ ಆ್ಯಂಡ್‌ ನ್ಯಾಚುರಲ್‌ ರಿಸೋರ್ಸ್‌ ಸಂಸ್ಥೆಯು ನಾಲ್ಕು ಕೊಂಬಿನ ಹುಲ್ಲೆಯನ್ನು ಅಳಿವಿನಂಚಿ ನಲ್ಲಿರುವ ಪ್ರಾಣಿಸಂಕುಲವೆಂದು ಘೋಷಿಸಿದೆ. ಭಾರತದಲ್ಲಿ 1972 ರ ‌ ವನ್ಯಜೀವಿ ಸಂರ‌ಕ್ಷಣಾ ಕಾಯ್ದೆಯಡಿ ಷೆಡ್ಯೂಲ್‌(1)ರಡಿ ಪ್ರಾಣಿಯ ಹತ್ಯೆಯನ್ನು ಅತ್ಯಂತ ಕಠಿಣ ಕಾನೂನಡಿ ಸೇರ್ಪಡೆಗೊಳಿಸಲಾಗಿದೆ.

ನಾಲ್ಕು ಕೊಂಬಿನ ಹುಲ್ಲೆ ವೈಶಿಷ್ಟ್ಯ : ನಾಲ್ಕುಕೊಂಬಿನ ಈ ಹುಲ್ಲೆಯು ಬಹುತೇಕವಾಗಿ ಜಿಂಕೆ ರೂಪವನ್ನು ಹೋಲುತ್ತದೆ. ಆದರೆ,ಗಾತ್ರದಲ್ಲಿ ಚಿಕ್ಕದ್ದಾಗಿದೆ. ಕೊಂಬುಗಳು ಸುರುಳಿ ಸುರುಳಿಯಾಗಿರದೇ ನೀಳವಾಗಿರುತ್ತವೆ. ನಾಚಿಕೆ, ಪುಕ್ಕಲು ಸ್ವಭಾವದ ಈ ಹುಲ್ಲೆ ತನ್ನ ಸುತ್ತಯಾರಾದರೂ ಇರುವ ಸುಳಿವು ಸಿಕ್ಕರೆಕ್ಷಣಮಾತ್ರದಲ್ಲಿಕಣ್ಮರೆಯಾಗುತ್ತದೆ.ಒಂಟಿಯಾಗಿಯೇ ಬದುಕುವುದು ಇವುಗಳ ಅಭ್ಯಾಸ. ನೀರಿನ ಸೆಲೆ, ಹುಲ್ಲುಗಾವಲನ್ನು ಆಶ್ರಯಿಸಿರುತ್ತದೆ. ಇದು ಎಲ್ಲೆಂದರಲ್ಲಿ ಹಿಕ್ಕೆ ಹಾಕುವುದಿಲ್ಲ.ಕಾಡಿನಲ್ಲಿ ಅದಕ್ಕಾಗಿಯೇ ಒಂದು ನಿರ್ದಿಷ್ಟ ಜಾಗವನ್ನು ಗುರುತಿಸಿಕೊಂಡು ಅದೇ ಜಾಗದಲ್ಲಿ ಹಿಕ್ಕೆ ಹಾಕುವುದು ಇದರ ವಿಶಿಷ್ಟ್ಯ

ಹುಲ್ಲೆ ಆವಾಸಸ್ಥಾನ ಸಂರಕ್ಷಣೆ :  ವಿವಿಧ ಕಾರಣಗಳಿಂದ ಇಂತಹ ಪ್ರಾಣಿಗಳಿಗೆ ಅಗತ್ಯವಾದ ಆವಾಸ ಸ್ಥಾನವನ್ನು ನಾವು ನಾಶಪಡಿಸುತ್ತಿದ್ದೇವೆ. ನಾಗರಹೊಳೆಯಲ್ಲಿ ಇರುವ ನಾಲ್ಕು ಕೊಂಬಿನ ಆಂತಿಲೋಪ್‌ಗಳ ಸಂಖ್ಯೆ ನಿರ್ದಿಷ್ಟ ವಾಗಿ ತಿಳಿದಿಲ್ಲ. ಆದರೆ, ನಾಗರಹೊಳೆಯಲ್ಲಿರುವ ಬಗ್ಗೆ ಕುರುಹು ಸಿಕ್ಕಿದ್ದು, ಅದನ್ನು ಉಳಿಸಿ ಬೆಳೆಸುವತ್ತ ಹೆಚ್ಚಿನ ಮುತು ವರ್ಜಿವಹಿಸಲಾಗುವುದು ಎಂದು ನಾಗರಹೊಳೆ ಹುಲಿಯೋಜನೆಕ್ಷೇತ್ರ ನಿರ್ದೇಶಕ ಡಿ.ಮಹೇಶ್‌ಕುಮಾರ್‌ ತಿಳಿಸಿದ್ದಾರೆ.

 

ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next