Advertisement

ನಾಳೆಯಿಂದ ನಾಲ್ಕು ದಿನ ಕೃಷಿ ಮೇಳ

11:51 AM Nov 14, 2018 | |

ಬೆಂಗಳೂರು: ಅಪ್ಪಟ ರೈತರ ಜಾತ್ರೆ “ಕೃಷಿ ಮೇಳ’ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. “ಕೃಷಿ ಆದಾಯ ವೃದ್ಧಿಗೆ ಪೂರಕ ತಂತ್ರಜ್ಞಾನಗಳು’ ಎಂಬ ಘೋಷವಾಕ್ಯದಡಿ ಈ ಬಾರಿ ಮೇಳ ಮೈದಳೆಯಲಿದೆ.

Advertisement

ನ.15ರಿಂದ 18ರವರೆಗೆ ನಡೆಯಲಿರುವ ಮೇಳದಲ್ಲಿ ಡ್ರೋಣ್‌, ಸೆನ್ಸರ್‌ ಮತ್ತಿತರ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಬೇಸಾಯ ಪದ್ಧತಿಗಳು, ರೈತರನ್ನು ಕಾಡುತ್ತಿರುವ ಸಮಸ್ಯೆಗಳು, ಪರಿಹಾರೋಪಾಯಗಳು, ಉತ್ಪನ್ನಗಳ ಮೌಲ್ಯವರ್ಧನೆ, ಮಾರುಕಟ್ಟೆ, ಹೊಸ ತಳಿಗಳು ಸೇರಿದಂತೆ ಅಕ್ಷರಶಃ “ಕೃಷಿ ಕಣಜ’ ಅನಾವರಣಗೊಳ್ಳಲಿದೆ. ಸುಮಾರು 10ರಿಂದ 12 ಲಕ್ಷ ಜನ ಇದಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇವೇಗೌಡ ಹೆಸರಲ್ಲಿ ಪ್ರಶಸ್ತಿ: ಇತ್ತೀಚೆಗೆ ಬಿಡುಗಡೆಯಾದ ವಿವಿಧ ತಳಿಗಳ ಪ್ರಾತ್ಯಕ್ಷಿಕೆ, ಖುಷ್ಕಿ ಬೇಸಾಯಕ್ಕೆ ಸೂಕ್ತ ಬೆಳೆ ಪದ್ಧತಿಗಳು, ಸಿರಿಧಾನ್ಯಗಳು ಮತ್ತು ಅವುಗಳ ಮಹತ್ವ, ಇಸ್ರೇಲ್‌ಗೆ ಭೇಟಿ ನೀಡಿದ್ದ ಕೃಷಿ ತಜ್ಞರು ಮತ್ತು ಪ್ರಗತಿಪರ ರೈತರೊಂದಿಗೆ ಸಂವಾದ, ಸಾವಯವ ಕೃಷಿ ಸೇರಿದಂತೆ ಒಟ್ಟು 740ಕ್ಕೂ ಹೆಚ್ಚು ಮಳಿಗೆಗಳು ತಲೆಯೆತ್ತಲಿವೆ.

ತಂತ್ರಜ್ಞಾನಕ್ಕೆ ಹೆಚ್ಚು ಒತ್ತುಕೊಟ್ಟಿದ್ದು, ಹತ್ತಕ್ಕೂ ಅಧಿಕ ಕೃಷಿಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಈ ಬಾರಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಹೆಸರಿನಲ್ಲಿ ರಾಜ್ಯಮಟ್ಟದ ಅತ್ಯುತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಫ‌ಲಕ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ ಎಂದು ಹೇಳಿದರು.

ಅಲ್ಲದೆ, ರಾಜ್ಯಮಟ್ಟದ ಪ್ರತಿಷ್ಠಿತ ಡಾ.ಎಂ.ಎಚ್‌.ಮರಿಗೌಡ ಅತ್ಯುತ್ತಮ ತೋಟಗಾರಿಕಾ ಪ್ರಶಸ್ತಿ, ಲೇಟ್‌ ಸಿ.ಬೈರೇಗೌಡ ಸ್ಮಾರಕ ಅತ್ಯುತ್ತಮ ರೈತ ಪ್ರಶಸ್ತಿ, ಕಾರ್ಪ್‌ ಪ್ರಶಸ್ತಿ, ಡಾ.ಆರ್‌.ದ್ವಾರಕಿನಾಥ್‌ ಪ್ರತಿಷ್ಠಾಪಿಸಿದ ಅತ್ಯುತ್ತಮ ರೈತ ಮತ್ತು ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಜತೆಗೆ ತಾಲೂಕು ಮಟ್ಟದಲ್ಲಿ ಯುವ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ನೀಡಲಾಗುತ್ತಿದೆ.

Advertisement

ಮೇಳಕ್ಕೆ 15ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ಹಾಗೂ ಕುಲಾಧಿಪತಿ ವಜುಭಾಯಿ ವಾಲಾ ಚಾಲನೆ ನೀಡಲಿದ್ದಾರೆ. ಸಚಿವರಾದ ಎನ್‌.ಎಚ್‌.ಶಿವಶಂಕರ ರೆಡ್ಡಿ, ಕೃಷ್ಣ ಬೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಅಧಿಕಾರಿಗಳಾದ ಎಂ.ಮಹೇಶ್ವರ ರಾವ್‌, ಐಎಸ್‌ಎನ್‌ ಪ್ರಸಾದ್‌, ಡಾ.ವಂದಿತಾ ಶರ್ಮ, ಡಾ.ಕೆ.ಜಿ.ಜಗದೀಶ್‌ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಡಾ.ರಾಜೇಂದ್ರ ಪ್ರಸಾದ್‌ ಮಾಹಿತಿ ನೀಡಿದರು.  

ಮೇಳಕ್ಕೆ ಯಾವ ಬಸ್‌?: ಮೆಜೆಸ್ಟಿಕ್‌ನಿಂದ ಹೊರಡುವ ಬಿಎಂಟಿಸಿ ಬಸ್‌ಗಳ ಸಂಖ್ಯೆ: 277, 280, 281, 282, 283, 284, 284ಎ, ಬಿ, ಸಿ ಮತ್ತು ಡಿ, 285, 286ಎ, 289, 289ಎ, 402, 298ಎಂ, 299 ಹಾಗೂ ಸುವರ್ಣ ಸಾರಿಗೆ ಮೂಲಕ ರೈತರು ಮೇಳದ ಸ್ಥಳ ತಲುಪಬಹುದು. ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಮುಖ್ಯ ದ್ವಾರದಿಂದ ಕೃಷಿ ಮೇಳದ ಸ್ಥಳಕ್ಕೆ ಆಗಮಿಸಲು ಕೃಷಿ ವಿವಿಯಿಂದ ಪ್ರತ್ಯೇಕ ವಾಹನಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಇದರೊಂದಿಗೆ ಕಡಿಮೆ ದರದಲ್ಲಿ ರೈತರಿಗೆ ಊಟದ ವ್ಯವಸ್ಥೆ ಇರಲಿದೆ. 

ಮೇಳದ ಸಮಯ: ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ

ಉಚಿತ ಆರೋಗ್ಯ ತಪಾಸಣೆ: ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮೇಳದಲ್ಲಿ ಮನೋವೈದ್ಯರಿಂದ ಉಚಿತ ಆಪ್ತ ಸಮಾಲೋಚನೆ ಏರ್ಪಡಿಸಲಾಗಿದೆ. ಜತೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದ್ದು, ಜಮೀನುಗಳಲ್ಲಿ ಹಾವು, ಚೇಳು, ಜೇನು ಕಡಿದ ಸಂದರ್ಭಗಳಲ್ಲಿ ತಕ್ಷಣ ರೈತರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿ ತಿಳಿಸಿಕೊಡಲಾಗುವುದು. ಅಲ್ಲದೆ, ಕಣ್ಣಿನ ಪರೀಕ್ಷೆ, ಮಧುಮೇಹದ ಸ್ಕ್ರೀನಿಂಗ್‌ ಟೆಸ್ಟ್‌, ಎಲುಬುಗಳಲ್ಲಿ ಖನಿಜಾಂಶಗಳ ಬಗ್ಗೆ ಸ್ಕ್ರೀನಿಂಗ್‌ ಟೆಸ್ಟ್‌ ಕೂಡ ಏರ್ಪಡಿಸಲಾಗುವುದು ಎಂದು ಕುಲಪತಿ ತಿಳಿಸಿದರು. 

ಮೇಳಕ್ಕೆ ಬರುವವರಿಗೆ “ಆ್ಯಪ್‌’ ಗೈಡ್‌: ಕೃಷಿ ಮೇಳಕ್ಕೆ ಬರುವವರ ಅನುಕೂಲಕ್ಕಾಗಿಯೇ ವಿಶ್ವವಿದ್ಯಾಲಯವು ಪ್ರತ್ಯೇಕ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಅಗತ್ಯ ಇರುವವರು ಇದನ್ನು ಡೌನ್‌ಲೋಡ್‌ ಮಾಡಿಕೊಂಡು ನೆರವು ಪಡೆಯಬಹುದು. 

ಪ್ಲೇ ಸ್ಟೋರ್‌ನಲ್ಲಿ “ಕೃಷಿ ಮೇಳ-2018 ಬೆಂಗಳೂರು’ ಎಂದು ಟೈಪ್‌ ಮಾಡಿದರೆ, ವಿವಿಯ ಚಿಹ್ನೆ ಇರುವ ಆ್ಯಪ್‌ ಬರುತ್ತದೆ. ಅದನ್ನು ಡೌನ್‌ಲೋಡ್‌ ಮಾಡಿಕೊಂಡರೆ, ಅದರಲ್ಲಿ ಬಸ್‌, ಮಾರ್ಗ ನಕ್ಷೆ, ವಿಶೇಷ ಬಸ್‌ ಸೌಲಭ್ಯ, ತಾಕುಗಳು, ಪ್ರದರ್ಶನ ಮಳಿಗೆಗಳು, ವಾಹನ ನಿಲುಗಡೆ ಪ್ರದೇಶ ಸೇರಿದಂತೆ ಪ್ರತಿಯೊಂದು ಮಾಹಿತಿ ಲಭ್ಯವಿರುತ್ತದೆ. ಬಳಕೆದಾರರು ಇಲ್ಲಿ ಸಲಹೆಗಳನ್ನು ಕೂಡ ನೀಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next