ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಜಿಲ್ಲೆಯಲ್ಲಿ ಮಂಗಳವಾರ ಮೂವರು ಮಹಿಳೆಯರು, ಒಬ್ಬ ಪುರುಷ ಸೇರಿ ನಾಲ್ವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನ ಕಾರಣದಿಂದ ಸಾವನ್ನಪ್ಪಿದವರ ಸಂಖ್ಯೆ 28ಕ್ಕೆ ಏರಿಕೆಯಾಗಿದ್ದು, ಕಳೆದ ಮೂರು ದಿನಗಳಲ್ಲಿ 18 ಜನರು ಸಾವಿಗೀಡಾಗಿದ್ದಾರೆ.
ಬಳ್ಳಾರಿ ತಾಲೂಕು ಕೋಳೂರು ಗ್ರಾಮದ 31 ವರ್ಷದ ಮಹಿಳೆ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದು, ಜೂನ್ 28 ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಹೃದಯ ಸಮಸ್ಯೆಯಿಂದ ಜೂ.29 ರಂದು ಮೃತಪಟ್ಟಿದ್ದಾರೆ. ಸಾವಿಗೂ ಮುನ್ನ ಇವರ ಗಂಟಲು ದ್ರವ ಪರೀಕ್ಷಿಸಿದಾಗ ಪಾಸಿಟಿವ್ ಎಂದು ಬಂದಿದ್ದು, ಎಸ್ ಓಪಿ ನಿಯಮಗಳ ಪ್ರಕಾರ ಅಂತ್ಯಸಂಸ್ಕಾರ ಮಾಡಲಾಯಿತು ಎಂದು ಡಿಸಿ ಎಸ್.ಎಸ್.ನಕುಲ್ ಮಾಹಿತಿ ನೀಡಿದ್ದಾರೆ.
ಅದೇ ರೀತಿ ಹೊಸಪೇಟೆಯ ಎನ್ ಸಿ ಕಾಲೋನಿಯ ಬೃಂದಾವನ ಅಪಾರ್ಟ್ ಮೆಂಟ್ ನಲ್ಲಿನ 63 ವರ್ಷದ ವೃದ್ಧ ರಕ್ತದೊತ್ತಡ, ನಿಮೋನಿಯಾ ಸಮಸ್ಯೆಯಿಂದ ಜೂ.28 ರಂದು ಆಸ್ಪತ್ರೆಯಲ್ಲಿ ದಾಖಲಾಗಿ, ಜೂ.29 ರಂದು ಸೋಮವಾರ ಅಸುನೀಗಿದ್ದಾರೆ.
ಬಳ್ಳಾರಿಯ 55 ವರ್ಷದ ಮಹಿಳೆ ರಕ್ತದೊತ್ತಡ, ಹೃದಯ ಸಮಸ್ಯೆಯಿಂದ ಜೂ.27ರಂದು ದಾಖಲಾಗಿ ಜೂ.29 ರಂದು ಮೃತಪಟ್ಟಿದ್ದಾರೆ. ಜಿಲ್ಲೆಯ ಸಂಡೂರಿನ ಕೆಎಚ್ ಬಿ ಕಾಲೋನಿಯ 58 ವರ್ಷದ ಮಹಿಳೆಯು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು, ಜೂನ್ 29 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ಅಸುನೀಗಿದ್ದಾರೆ. ಇವರೆಲ್ಲರ ಸಾವಿಗೂ ಮುನ್ನ ಕೋವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಎಂದು ಬಂದಿದ್ದು, ಎಸ್ ಒಪಿ ನಿಯಮಗಳ ಪ್ರಕಾರ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಡಿಸಿ ನಕುಲ್ ತಿಳಿಸಿದ್ದಾರೆ.