ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಮತ್ತು ಅಂತಿಮ ಪಂದ್ಯ ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂ ನಲ್ಲಿ ಆರಂಭವಾಗಿದೆ. ಒದ್ದೆ ಪಿಚ್ ಕಾರಣದಿಂದ ಟಾಸ್ ತಡವಾಗಿ ನಡೆದಿದ್ದು, ಮೊದಲ ಸೆಶನ್ ನ ಪಂದ್ಯ ನಷ್ಟವಾಗಿದೆ.
ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ನಾಯಕ ವಿರಾಟ್ ಕೊಹ್ಲಿ ಅವರು ಇಂದಿನ ಪಂದ್ಯಕ್ಕೆ ತಂಡಕ್ಕೆ ಸೇರಿದ್ದಾರೆ. ಗಾಯಗೊಂಡಿರುವ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಬದಲಿಗೆ ಟಾಮ್ ಲ್ಯಾಥಂ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕೊನೆಗೂ ಪಂದ್ಯ ಆರಂಭ: ಭಾರತ ತಂಡದಲ್ಲಿ 3 ಬದಲಾವಣೆ, ಕಿವೀಸ್ ಗೂ ಹೊಸ ನಾಯಕ
ಈ ಸರಣಿಯಲ್ಲಿ ಹೊಸ ದಾಖಲೆಯೊಂದಕ್ಕೆ ಪಾತ್ರವಾಗಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕು ಮಂದಿ ನಾಯಕರು ಕಾಣಿಸಿಕೊಂಡ ದಾಖಲೆಯಾಗಿದೆ. ಮೊದಲ ಪಂದ್ಯದಲ್ಲಿ ಉಭಯ ತಂಡಗಳಲ್ಲಿ ಅಜಿಂಕ್ಯ ರಹಾನೆ ಮತ್ತು ಕೇನ್ ವಿಲಿಯಮ್ಸನ್ ನಾಯಕರಾಗಿದ್ದರೆ, ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಟಾಮ್ ಲ್ಯಾಥಂ ನಾಯಕರಾಗಿದ್ದಾರೆ.
ಈ ಹಿಂದೆ 1889ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಎರಡು ಪಂದ್ಯಕ್ಕೆ ನಾಲ್ಕು ಮಂದಿ ನಾಯಕರಾಗಿದ್ದರು. ಇಲ್ಲಿ ಮೊದಲ ಪಂದ್ಯಕ್ಕೆ ದ.ಅಫ್ರಿಕಾದ ನಾಯಕತ್ವವನ್ನು ಒವೆನ್ ಡನೆಲ್ ವಹಿಸಿದ್ದರೆ, ಎರಡನೇ ಪಂದ್ಯದಲ್ಲಿ ವಿಲಿಯಂ ಮಿಲ್ಟನ್ ನಾಯಕರಾಗಿದ್ದರು. ಇಂಗ್ಲೆಂಡ್ ತಂಡದಲ್ಲಿ ಮೊದಲ ಪಂದ್ಯಕ್ಕೆ ಐಬ್ರೆ ಸ್ಮಿತ್ ಮತ್ತು ಎರಡನೇ ಪಂದ್ಯಕ್ಕೆ ಮಾಂಟಿ ಬೌಡೆನ್ ನಾಯಕರಾಗಿದ್ದರು.