ಮಹಾನಗರ: ಶಕ್ತಿನಗರ ಮುಖ್ಯ ರಸ್ತೆಯ ಬಿಕರ್ನಕಟ್ಟೆ ಜಂಕ್ಷನ್ ನಿಂದ ಕೈಕಂಬ ಜಂಕ್ಷನ್‌ವರೆಗಿನ ರಸ್ತೆ ಕಾಮಗಾರಿಯನ್ನು ಶಾಸಕ ಜೆ.ಆರ್.ಲೋಬೋ ಅವರು ಗುದ್ದಲಿಪೂಜೆಯನ್ನು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಭವಿಷ್ಯದಲ್ಲಿ ಅತ್ಯಾಧುನಿಕ ಪ್ರದೇಶವಾಗಿ ಮಾರ್ಪಾಡಾಗುತ್ತಿರುವ ಶಕ್ತಿನಗರದ
ಮುಖ್ಯ ರಸ್ತೆಯನ್ನು ವಿಸ್ತರಿಸಲು ಪಾಲಿಕೆಯ ಪ್ರೀಮಿಯಮ್ ಎಫ್.ಎ.ಆರ್. ನಿಧಿಯಿಂದ 1.12 ಕೋಟಿ ರೂ. ಮಂಜೂರಾಗಿದೆ. ಅದಲ್ಲದೇ ಮುಖ್ಯಮಂತ್ರಿಗಳ 100 ಕೋಟಿ ರೂ. ಅನುದಾನದಿಂದ 91 ಲಕ್ಷ ರೂ. ಮಂಜೂರಾತಿ ಆಗಿದೆ. ಈ ಎರಡು ಅನುದಾನದಿಂದ ರಸ್ತೆ ವಿಸ್ತರಣೆ, ಚರಂಡಿ ಹಾಗೂ ಫುಟ್‌ಪಾತ್ ರಚನೆ ಕಾಮಗಾರಿ ಹಾಗೂ ರಸ್ತೆ ಅಭಿವೃದ್ಧಿಗೊಳಿಸಲಾಗುವುದು.
ಈ ಎಲ್ಲ ಕಾಮಗಾರಿಗೆ ಜನರ ಸಹಕಾರ ಅತೀ ಅಗತ್ಯವಾಗಿದೆ. ರಸ್ತೆ ಅಭಿವೃದ್ಧಿಯಾದರೆ ಈ ಪ್ರದೇಶದಲ್ಲಿ ಇನ್ನೂ ಅನೇಕ ಕಟ್ಟಡಗಳು ನಿರ್ಮಾಣವಾಗಲಿವೆ. ಜನರ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಇದರಿಂದ ಜನರ ಜೀವನ ಶೈಲಿ ಉತ್ತಮಗೊಳ್ಳಲಿದೆ ಎಂದರು.
ಈ ಸಂದರ್ಭ ಕಾರ್ಪೊರೇಟರ್ ಜುಬೈದಾ ಅಜೀಜ್, ಮಾಜಿ ಮೇಯರ್ ಅಬ್ದುಲ್ ಅಜೀಜ್, ಕೆ.ಎಸ್.ಆರ್.ಟಿ.ಸಿ. ನಿರ್ದೇಶಕ ಟಿ.ಕೆ. ಸುಧೀರ್, ಆಲ್ವಿನ್ ಪಾಯಿಸ್, ಸುನೀತ್ ಡೇಸಾ, ಪಾಲಿಕೆಯ ಅಧಿಕಾರಿಗಳಾದ ದೇವರಾಜ್, ಲಕ್ಷ್ಮಣ್ ಪೂಜಾರಿ, ಗುತ್ತಿಗೆದಾರ ಸುಲೈಮಾನ್ ಆಸೀಫ್ ಉಪಸ್ಥಿತರಿದ್ದರು.