ಕೊಡಗನ್ನು ಮರೆತ ರಾಜ್ಯ ಸರಕಾರ
ಮಡಿಕೇರಿ : ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಮೂಲ ಕಾರಣ ವಾಗಿರುವ ಕಾವೇರಿ ನದಿ ಹುಟ್ಟುವ ಕೊಡಗು ಜಿಲ್ಲೆಗೆ ರಾಜ್ಯ ಸರಕಾರದ ಬಜೆಟ್‌ನಲ್ಲಿ ಯಾವುದೇ ವಿಶೇಷ ಕೊಡುಗೆಗಳನ್ನು ನೀಡದೆ ನಿರಾಶೆ ಮೂಡಿಸಿದೆ.
ಪ್ರತಿವರ್ಷ ವಿಶೇಷ ಪ್ಯಾಕೇಜ್‌ನ ಹೆಸರಿ ನಲ್ಲಿ ಕೊಡಗಿನ ಜನರ ಕಣ್ಣೊರೆಸುವ ತಂತ್ರವಾದರೂ ನಡೆಯುತ್ತಿತ್ತು. ಆದರೆ, ಈ ಬಾರಿಯ ಚುನಾವಣೆಯ ಬಜೆಟ್‌ನಲ್ಲಿ ಕಾಂಗ್ರೆಸ್ ಸರಕಾರ ಜಿಲ್ಲೆಗೆ ಯಾವುದೇ ಕೊಡುಗೆಯನ್ನು ನೀಡದೆ ನಿರ್ಲಕ್ಷ್ಯ ತೋರಿದೆ.
ನಾಮಕಾವಸ್ಥೆಗೆ ಕಾರವಾರ ಮತ್ತು ಚಿಕ್ಕಮಗಳೂರಿಗೆ ನೀಡಿದಂತೆ ಮಡಿಕೇರಿಗೆ ವಿಮಾನ ಇಳಿದಾಣವನ್ನು ನೀಡಿದ್ದು ಬಿಟ್ಟರೆ ಮಹತ್ವದ ಯಾವುದೇ ಘೋಷಣೆಗಳಾಗಲಿ, ಪ್ಯಾಕೇಜ್‌ಗಳನ್ನಾಗಲಿ ನೀಡಿಲ್ಲ. ಕೊಡಗಿನಲ್ಲಿ ಪ್ರಮುಖವಾಗಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾದ ಯೋಜನೆ ಗಳ ಅಗತ್ಯವಿತ್ತು. ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಕಾವೇರಿ ನದಿ ಸಂಪೂರ್ಣ ವಾಗಿ ಕಲುಷಿತಗೊಳ್ಳುತ್ತಿದ್ದು, ಕಾವೇರಿ ನದಿಯ ಸ್ವತ್ಛತೆಯನ್ನು ಕಾಪಾಡಲು ಮಹತ್ವಾಕಾಂಕ್ಷೆಯ ಯೋಜನೆ ಘೋಷಣೆಗೊಳ್ಳುವ ನಿರೀಕ್ಷೆ ಇತ್ತಾದರೂ ಎಲ್ಲವೂ ಹುಸಿಯಾಗಿದೆ.
ಕೊಡಗಿನಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಕೆಲವು ತಾಲ್ಲೂಕು ರಚನೆಯ ಬಗ್ಗೆ ಬೇಡಿಕೆ ಇತ್ತು. ಇವುಗಳ ಬಗ್ಗೆಯೂ ಸರಕಾರಗಮನ ಹರಿಸಿಲ್ಲ. ಬರ ಪರಿಸ್ಥಿತಿ ನಿರ್ವಹಣೆಗೆ ಹೆಚ್ಚಿನ ಅನುದಾನ, ಜಿಲ್ಲೆಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆಗಳು, ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರವಾಹದ ಸಂದರ್ಭ ಪರಿಹಾರೋಪಾಯ ಸೇರಿ ದಂತೆ ಯಾವುದಕ್ಕೂ ಅನುದಾನವನ್ನು ಘೋಷಿಸಿಲ್ಲ. ಕಳೆದ ಬಜೆಟ್‌ನಲ್ಲಿ ಮಡಿಕೆೇರಿಯ ಹೆಸರುವಾಸಿ ಪ್ರವಾಸಿ ತಾಣ ರಾಜಾಸೀಟು ಉದ್ಯಾನವನದ ಅಭಿವೃದ್ಧಿಗಾಗಿ ಅನುದಾನವನ್ನು ಮೀಸಲಿಡಲಾಗಿತ್ತಾದರೂ ಈ ಯೋಜನೆಯ ಅನುಷ್ಠಾನ ಇನ್ನು ಕೂಡ ಕೈಗೂಡಿಲ್ಲ.
ಜಿಲ್ಲೆಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿ ಗರು ಆಗಮಿಸುತ್ತಿದ್ದು, ಪ್ರವಾಸೋ ದ್ಯಮದ ಕ್ಷೇತ್ರದಲ್ಲಿ ಕೊಡಗನ್ನು ವಿಶ್ವಮಟ್ಟದಲ್ಲಿ ಪ್ರತಿಬಿಂಬಿಸಲು ನೂತನ ಯೋಜನೆಗಳನ್ನು ರೂಪಿಸಬಹು ದಾಗಿತ್ತು. ಆದರೆ ರಾಜ್ಯದ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ 572 ಕೋಟಿ ರೂ.ಮೀಸಲಿಟ್ಟ ರಾಜ್ಯ ಸರಕಾರ ಕೊಡಗಿನ ಪ್ರವಾಸೋದ್ಯಮ ಕ್ಷೇತ್ರಗಳ ಬಗ್ಗೆ ಚಿಂತನೆ ಹರಿಸಿಲ್ಲ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಕರಾವಳಿ ಸರ್ಫಿಂಗ್ ಉತ್ಸವದ ಬಗ್ಗೆ ಕಾಳಜಿ ತೋರಿದ ರಾಜ್ಯ ಕಾಂಗ್ರೆಸ್ ಸರಕಾರ ಪ್ರವಾಸೋದ್ಯಮದಿಂದಲೆ ಹೆಸರು ವಾಸಿ ಯಾಗಿರುವ ಪಕ್ಕದ ಕೊಡಗು ಜಿಲ್ಲೆಗೆ ಪ್ರವಾಸೋದ್ಯಮದ ಅಭ್ಯುದಯಕ್ಕಾಗಿ ಏನನ್ನೂ ನೀಡದಿರುವುದು ಜಿಲ್ಲೆಯ ಜನತೆಯ ಅಸಮಾಧಾನಕ್ಕಾಗಿ ಕಾರಣವಾಗಿದೆ.
ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ಟಿ.ಪಿ. ರಮೇಶ್, ರಾಜ್ಯ ವ್ಯಾಪಿ ಘೋಷಣೆಯಾಗಿರುವ ಯೋಜನೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಮೂಲ ಸೌಲಭ್ಯಗಳಿಗಾಗಿ ರಾಜ್ಯಾದ್ಯಂತ ಹಂಚಿಕೆಯಾಗುವಂತೆ ಜಿಲ್ಲೆಗೂ ಅನು ದಾನ ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಮಾತನಾಡಿ, ರಾಜ್ಯ ಬಜೆಟ್‌ನಿಂದ ಕೊಡಗಿನ ಜನರ ಭರವಸೆಗಳು ಹುಸಿಯಾಗಿದೆಯೆಂದು ನಿರಾಸೆ ವ್ಯಕ್ತಪಡಿಸಿದ್ದಾರೆ. ದೇಶದ ಬೆನ್ನೆಲುಬಾದ ರೈತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಅದರಲ್ಲೂ ಕೊಡಗು ಜಿಲ್ಲೆಯನ್ನು ಲೆಕ್ಕಕ್ಕಿಲ್ಲದಂತೆ ಮಾಡಲಾಗಿದೆ. ವಿರಾಜಪೇಟೆಗೆ ಜೈಲು, ಮಡಿಕೇರಿಗೆ ಏರ್‌ಸ್ಟ್ರಿಪ್, ಕಾವೇರಿ ಕೊಳ್ಳದ ನಾಲೆಗೆ ಅನುದಾನ ಬಿಟ್ಟರೆ ಬೇರೇನೂ ಇಲ್ಲ ಎಂದು ಟೀಕಿಸಿದ್ದಾರೆ.