Advertisement

ಕಮಲದ ಕೋಟೆ ಜಯಿಸಲು ಕಾಂಗ್ರೆಸ್‌, ಜೆಡಿಎಸ್‌ ತಯಾರಿ

11:43 AM Mar 16, 2018 | |

ಬೆಂಗಳೂರು: ವಿದ್ಯಾವಂತ, ಪ್ರಜ್ಞಾವಂತ ಮತದಾರರು ಹೆಚ್ಚಿರುವ ಕ್ಷೇತ್ರ ಬಸವನಗುಡಿ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಇತಿಹಾಸದಲ್ಲಿ ಮುತ್ಸದ್ದಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ದಿ ರಾಮಕೃಷ್ಣ ಹೆಗಡೆ ಮತ್ತು ನೀರಾವರಿ ತಜ್ಞ ಎಚ್‌.ಎನ್‌. ನಂಜೇಗೌಡರನ್ನು ಆರಿಸಿ ಕಳಿಸಿರುವುದು ಈ ಕ್ಷೇತ್ರದ ಹೆಗ್ಗಳಿಕೆ. ಪ್ರತಿಷ್ಠಿತ ಕ್ಷೇತ್ರದಲ್ಲಿ ಯೋಜಿತ ಬಡಾವಣೆಗಳು ಹೆಚ್ಚಾಗಿದ್ದರೂ, ರೆವಿನ್ಯೂ ಪ್ರದೇಶವೂ ಸಾಕಷ್ಟಿದೆ.

Advertisement

ಮಧ್ಯಮ, ಕೆಳ ಮಧ್ಯಮ ವರ್ಗದವರೇ ಗಣನೀಯ ಸಂಖ್ಯೆಯಲ್ಲಿದ್ದಾರೆ. ದೊಡ್ಡ ಬಸವಣ್ಣನ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ, ಇತಿಹಾಸ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನ ಸೇರಿದಂತೆ ಸಾಕಷ್ಟು ಧಾರ್ಮಿಕ ಕೇಂದ್ರಗಳನ್ನು ಈ ಕ್ಷೇತ್ರ ಒಳಗೊಂಡಿದೆ. ಜತೆಗೆ ವರ್ಲ್ಡ್ ಫೇಮಸ್‌ ಕಡ್ಲೆಕಾಯಿ ಪರಿಷೆ ನಡೆಯುವುದು ಕೂಡ ಇದೇ ಬಸವನಗುಡಿಯಲ್ಲಿ. ರಾಜಕೀಯವಾಗಿಯೂ ಸಾಕಷ್ಟು ಮಹತ್ವ ಪಡೆದಿರುವ ಕ್ಷೇತ್ರದಲ್ಲಿ ಬ್ರಾಹ್ಮಣ ಹಾಗೂ ಒಕ್ಕಲಿಗ ಸಮುದಾಯದ ಮತಗಳು ಗಣನೀಯ ಸಂಖ್ಯೆಯಲ್ಲಿದ್ದು, ನಿರ್ಣಾಯಕವೆನಿಸಿವೆ.

ಕ್ಷೇತ್ರ ಪುನರ್‌ವಿಂಗಡಣೆ ನಂತರವೂ ಮೂಲ ಹೆಸರು ಉಳಿಸಿಕೊಂಡ ಬಸವನಗುಡಿಯಲ್ಲಿ 2008 ಹಾಗೂ 2013ರಲ್ಲಿ ಬಿಜೆಪಿಯ ರವಿಸುಬ್ರಹ್ಮಣ್ಯ ಗೆಲುವು ಸಾಧಿಸಿದ್ದು, ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿದ್ದಾರೆ. 2008ರ ಚುನಾವಣೆಯಲ್ಲಿ ರವಿಸುಬ್ರಹ್ಮಣ್ಯ ಆಯ್ಕೆಯಾದಾಗ ಬಿಜೆಪಿ ಸರ್ಕಾರವಿತ್ತು. 2010ರ ಪಾಲಿಕೆ ಚುನಾವಣೆಯಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬಂದಿತ್ತು.

ಲೋಕಸಭಾ ಕ್ಷೇತ್ರವೂ ಬಿಜೆಪಿಗೆ ಒಲಿದಿದ್ದರೂ ಆ ಅವಧಿಯಲ್ಲಿ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ ಎಂಬ ಮಾತು ಇಂದಿಗೂ ಇದೆ. ಅಭಿವೃದ್ಧಿ ಕಾರ್ಯದಲ್ಲಿನ ಏರುಪೇರು ಸಹ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ, ಕಮಲದ ಭದ್ರಕೋಟೆ ಎನಿಸಿರುವ ಕ್ಷೇತ್ರಕ್ಕೆ ಲಗ್ಗೆ ಇಡಲು ಕಾಂಗ್ರೆಸ್‌, ಜೆಡಿಎಸ್‌ ಸಜ್ಜಾಗಿವೆ. ಮೇಲ್ಮೋಟಕ್ಕೆ ನೋಡಿದರೆ ಕ್ಷೇತ್ರದಲ್ಲಿ ಹೇಳಿಕೊಳ್ಳುವಂಥ ದೊಡ್ಡ ಸಮಸ್ಯೆ ಇಲ್ಲ.

ಸಂಚಾರ ದಟ್ಟಣೆ, ಕೆಲವೆಡೆ ಅಭಿವೃದ್ಧಿಯಲ್ಲಿ ತಾರತಮ್ಯ ಇರುವುದು ಕಂಡುಬರುತ್ತದೆ. ಆಯ್ದ ಪ್ರತಿಷ್ಠಿತ ಬಡಾವಣೆಗಳಿಗಷ್ಟೇ ಅಭಿವೃದ್ಧಿಗೆ ಸೀಮಿತವಾಗಿದೆ ಎಂಬ ದೂರೂ ಇದೆ. ಬಸವನಗುಡಿ ವಿಧಾನಸಭೆ ಕ್ಷೇತ್ರವು ಬಸವನಗುಡಿ, ವಿದ್ಯಾಪೀಠ, ಕತ್ರಿಗುಪ್ಪೆ, ಗಿರಿನಗರ, ಶ್ರೀನಗರ, ಹನುಮಂತನಗರ ವಾರ್ಡ್‌ಗಳನ್ನು ಹೊಂದಿದ್ದು, ಈ ಆರೂ ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರಿದ್ದಾರೆ.

Advertisement

ಕ್ಷೇತ್ರದ ಬೆಸ್ಟ್‌ ಏನು?: ಒಳಚರಂಡಿ ಹಾಗೂ ಮಳೆ ನೀರು ಒಂದೇ ಕಾಲುವೆಯಲ್ಲಿ ಹರಿಯುತ್ತಿದ್ದ ಕಾರಣ ಭಾರೀ ಮಳೆ ಸುರಿದಾಗ ಕಾಲುವೆಗಳಲ್ಲಿ ಪ್ರವಾಹ ಉಂಟಾಗಿ ಕ್ಷೇತ್ರದ ಕೆಲವೆಡೆ ಮನೆಗಳಿಗೆ ನೀರು ನುಗ್ಗುತ್ತಿತ್ತು. ಆ ಹಿನ್ನೆಲೆಯಲ್ಲಿ ಒಳಚರಂಡಿ ನೀರನ್ನು ಪ್ರತ್ಯೇಕ ಕೊಳವೆಗಳಲ್ಲಿ ಹರಿಸುವಂತೆ ಮಾಡುವ ವ್ಯವಸ್ಥೆ ಕಲ್ಪಿಸುವ ಕಾರ್ಯ ನಡೆದಿದೆ. ಈಗಾಗಲೇ ಶೇ.85ರಷ್ಟು ಕೆಲಸ ಪೂರ್ಣಗೊಂಡಿದ್ದು, ಒಳಚರಂಡಿ ನೀರು, ಮಳೆ ನೀರು ಕಾಲುವೆ ಸೇರದೆ ಪ್ರತ್ಯೇಕವಾಗಿ ಹರಿಯಲಿದೆ. ಇದು ಆ ಭಾಗದ ಜನರಿಗೆ ನೆಮ್ಮದಿ ತರಲಿದೆ.

ಕ್ಷೇತ್ರದ ದೊಡ್ಡ ಸಮಸ್ಯೆ?: ಬಸವನಗುಡಿ ಕ್ಷೇತ್ರದ ಬಹುತೇಕ ಪ್ರದೇಶಗಳಲ್ಲಿ ರಸ್ತೆಗಳು ಕಿರಿದಾಗಿದ್ದು, ಸಂಚಾರ ದಟ್ಟಣೆ ತೀವ್ರವಾಗಿದೆ. ಮುಖ್ಯವಾಗಿ ವಿದ್ಯಾಪೀಠ ವೃತ್ತ, ಅಶೋಕನಗರ ಮುಖ್ಯರಸ್ತೆಯಲ್ಲಿ ಸದಾ ವಾಹನ ದಟ್ಟಣೆಯಿಂದ ಜನ ತೊಂದರೆ ಅನುಭವಿಸುವಂತಾಗಿದೆ. ತ್ಯಾಗರಾಜನಗರ ಮುಖ್ಯ ರಸ್ತೆಯಲ್ಲೂ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಬಿಎಂಟಿಸಿ 13ನೇ ಘಟಕಕ್ಕೆ ಹೊಂದಿಕೊಂಡಂತಿರುವ ವೆಂಕಟಾದ್ರಿ ಕಲ್ಯಾಣ ಮಂಟಪ ಬಳಿಯಿಂದ ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಸಿ.ಟಿ.ಬೆಡ್‌ವರೆಗಿನ ಮಳೆ ನೀರು ಕಾಲುವೆಗೆ ಕಾಂಕ್ರಿಟ್‌ ಮೇಲ್ಛಾವಣಿ ನಿರ್ಮಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಕಾರ್ಯ ಪೂರ್ಣಗೊಂಡಿಲ್ಲ. ಬೀದಿ ವ್ಯಾಪಾರಿಗಳ ಹಾವಳಿಯೂ ತೀವ್ರವಾಗಿದ್ದು, ರಸ್ತೆ- ಪಾದಚಾರಿ ಮಾರ್ಗದ ಒತ್ತುವರಿ ತೀವ್ರವಾಗಿದೆ.

ಟಿಕೆಟ್‌ ಆಕಾಂಕ್ಷಿಗಳು
ಬಿಜೆಪಿ:
ಎಲ್‌.ಎ.ರವಿಸುಬ್ರಹ್ಮಣ್ಯ, ಕೆಂಪೇಗೌಡ, ಕಟ್ಟೆ ಸತ್ಯನಾರಾಯಣ
ಜೆಡಿಎಸ್‌: ಬಾಗೇಗೌಡ  (ಘೋಷಿತ ಅಭ್ಯರ್ಥಿ)
ಕಾಂಗ್ರೆಸ್‌: ಕೆ.ಚಂದ್ರಶೇಖರ್‌,  ಪ್ರೊ.ಬಿ.ಕೆ.ಚಂದ್ರಶೇಖರ್‌,  ಸುಧೀಂದ್ರ 

ಹಿಂದಿನ ಫ‌ಲಿತಾಂಶ
-ಎಲ್‌.ಎ.ರವಿಸುಬ್ರಹ್ಮಣ್ಯ (ಬಿಜೆಪಿ)- 43883
-ಕೆ. ಬಾಗೇಗೌಡ (ಜೆಡಿಎಸ್‌)- 24163
-ಪ್ರೊ.ಬಿ.ಕೆ.ಚಂದ್ರಶೇಖರ್‌ (ಕಾಂಗ್ರೆಸ್‌)- 21588

ಕ್ಷೇತ್ರದ ಮಹಿಮೆ: ಐತಿಹಾಸಿಕ ಕಡಲೇಕಾಯಿ ಪರಿಷೆ ನಡೆಯುವ ದೊಡ್ಡ ಬಸವಣ್ಣ ದೇವಾಲಯ, ಸಂಕ್ರಾಂತಿಯಂದು ಶಿವಲಿಂಗದ ಮೇಲೆ ಸೂರ್ಯರಶ್ಮಿ ಬೀಳುವ ಗವಿಗಂಗಾಧರೇಶ್ವರ ದೇವಾಲಯ ಈ ಕ್ಷೇತ್ರದಲ್ಲಿರುವುದು ವಿಶೇಷ. ರಾಜಕೀಯವಾಗಿಯೂ ಕ್ಷೇತ್ರ ಖ್ಯಾತಿ ಪಡೆದಿದ್ದು, ರಾಜ್ಯದ ಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯ ರಾಮಕೃಷ್ಣ ಹೆಗಡೆ ಅವರು ಬಸವನಗುಡಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಟಿ.ಆರ್‌.ಶಾಮಣ್ಣ, ನೀರಾವರಿ ತಜ್ಞ ಎಚ್‌.ಎನ್‌.ನಂಜೇಗೌಡ ಸಹ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಶಾಸಕರು ಏನಂತಾರೆ?
ಕ್ಷೇತ್ರದಾದ್ಯಂತ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದರಿಂದ ಸರಗಳ್ಳತನ, ಮನೆಗಳವು ಸೇರಿ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ಹೊಸದಾಗಿ ಐದು ಉದ್ಯಾನ ನಿರ್ಮಿಸಲಾಗಿದೆ. ಒಳಚರಂಡಿ ನೀರನ್ನು ಪ್ರತ್ಯೇಕವಾಗಿ ಕೊಳವೆಗೆ ಹರಿಸುವ ಕಾಮಗಾರಿ ಶೇ.85ರಷ್ಟು ಪೂರ್ಣಗೊಂಡಿದೆ. ಸದ್ಯದಲ್ಲೇ ಉಚಿತ ವೈ-ಫೈ ಝೋನ್‌ ಬರಲಿದೆ. ವಿದ್ಯಾಪೀಠ ವೃತ್ತ, ಅಶೋಕನಗರ ಮುಖ್ಯರಸ್ತೆಯ ಸಂಚಾರ ದಟ್ಟಣೆಗೂ ಪರಿಹಾರ ಕಂಡುಕೊಳ್ಳುವ ಚಿಂತನೆಯಿದೆ.
-ಎಲ್‌.ಎ.ರವಿಸ್ರುಬಹ್ಮಣ್ಯ

ರಸ್ತೆಗಳು ಉತ್ತಮವಾಗಿದ್ದರೂ ಚರಂಡಿ, ಫ‌ುಟ್‌ಪಾತ್‌ ಹಾಳಾಗಿವೆ. ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಿಲ್ಲ. ಕೆಲವೆಡೆ ಗಾಂಜಾ ಮಾರಾಟ ಹಾವಳಿ ಇದೆ. ಚುನಾವಣೆಯಿಂದಾಗಿ ಈಗ ಕಣ್ಣಿಗೆ ಕಾಣುವ ಕೆಲಸಗಳಾಗುತ್ತಿದ್ದು, ಜನ ಬಯಸುವ ಅಭಿವೃದ್ಧಿ ಆಗುತ್ತಿಲ್ಲ.
-ಸದಾಶಿವ

ಕುಡಿಯುವ ನೀರು, ಒಳಚರಂಡಿ ಸೌಲಭ್ಯಗಳಿವೆ. ಪಾದಚಾರಿ ಮಾರ್ಗಗಳು ಉತ್ತಮವಾಗಿವೆ. ಸಮರ್ಪಕ ಕಸ ನಿರ್ವಹಣೆಗೆ ಇನ್ನಷ್ಟು ಆದ್ಯತೆ ನೀಡಬೇಕು. ಅಗತ್ಯವಿರುವ ಬಹುತೇಕ ಸೌಲಭ್ಯಗಳಿದ್ದು, ಈ ಭಾಗದಲ್ಲಿ ಈಜುಕೊಳ ನಿರ್ಮಿಸಿದರೆ ಅನುಕೂಲ.
-ಜಯರಾಜ್‌

ಒಂದು ರಸ್ತೆಗೆ ಡಾಂಬರು ಹಾಕಿದರೆ ಮತ್ತೂಂದು ರಸ್ತೆಗೆ ಡಾಂಬರಿಲ್ಲ. ಒಳಚರಂಡಿ ಮ್ಯಾನ್‌ಹೋಲ್‌ಗ‌ಳನ್ನು ಸ್ವತ್ಛಗೊಳಿಸಿ ಹಲವು ವರ್ಷಗಳೇ ಕಳೆದಿವೆ. ಅಭಿವೃದ್ಧಿಯಲ್ಲಿನ ತಾರತಮ್ಯದಿಂದ ಸೌಲಭ್ಯಗಳು ಕೆಲವೇ ವರ್ಗದ ಜನರಿಗೆ ಸಿಗುತ್ತಿರುವುದು ದುರದೃಷ್ಟಕರ.
ಅನುಸೂಯ

ರಸ್ತೆಗಳು ಉತ್ತಮವಾಗಿದ್ದು, ಒಳಚರಂಡಿ ವ್ಯವಸ್ಥೆಯೂ ಸುಸ್ಥಿತಿಯಲ್ಲಿದೆ. ಆದರೆ ಚರಂಡಿಗಳು ಹೂಳು ತುಂಬಿದ್ದರೆ, ಫ‌ುಟ್‌ಪಾತ್‌ಗಳು ಹಾಳಾಗಿವೆ. ಕೆಂಪೇಗೌಡ ನಗರಕ್ಕೆ ಬಸ್‌ ಸೌಕರ್ಯ ಕಡಿಮೆಯಾಗಿದೆ. ಚುನಾವಣೆ ಬಂತೆಂದು ತರಾತುರಿಯಲ್ಲಿ ಕೆಲಸಗಳು ನಡೆಯುತ್ತಿವೆ.
-ಕೃಷ್ಣಪ್ಪ

* ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next