ಬಳ್ಳಾರಿ: ಪ್ರಜಾತಾಂತ್ರಿಕವಾದ ರೀತಿಯಲ್ಲಿ ಶಿಕ್ಷಣ ತಜ್ಞರನ್ನು, ಉಪನ್ಯಾಸಕರನ್ನು, ವಿದ್ಯಾರ್ಥಿ ಸಂಘಟನೆಗಳನ್ನು, ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಮೂಲಕ ಪರೀಕ್ಷೆಯ ವೇಳಾಪಟ್ಟಿ ರೂಪಿಸಬೇಕು ಹಾಗೂ ವಿದ್ಯಾರ್ಥಿಗಳ ಎಲ್ಲ ಶೈಕ್ಷಣಿಕ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಎಐಡಿಎಸ್‌ಒ ಹಾಗೂ ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿ ಪದಾಧಿಕಾರಿಗಳು ಬಿಐಟಿಎಂ ಕಾಲೇಜು ಪ್ರಾಚಾರ್ಯ ವಿ.ಸಿ. ಪಾಟೀಲ್, ಆರ್ ವೈಎಂಇಸಿ ಕಾಲೇಜು ಪ್ರಾಚಾರ್ಯ ಡಾ| ಕೆ.ವೀರೇಶ್ ಮೂಲಕ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಎಲ್ಲ ಕಾಲೇಜುಗಳಲ್ಲಿ ಆನ್‌ಲೈನ್ ತರಗತಿಗಳನ್ನು ಪರಿಚಯಿಸಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಕಾಲೇಜುಗಳಲ್ಲಿ ಆನ್ ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಈ ತರಗತಿಗಳು ಅರ್ಥವಾಗದೇ ಇರುವುದು ಆತಂಕಕಾರಿ ವಿಷಯ. ಆನ್ ಲೈನ್ ತರಗತಿಗಳ ಆಧಾರದ ಮೇಲೆ ಪರೀಕ್ಷೆಗಳನ್ನು ನಡೆಸುತ್ತಿರುವುದು ಸರಿಯಲ್ಲ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಪೋಷಕರ ಸಹಾಯದೊಂದಿಗೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಬಹಳ ಕಷ್ಟಪಟ್ಟು ಈ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಸೇರಿರುತ್ತಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಬಹಳ ಅಲ್ಪಾವಧಿಯ ಸೂಚನೆಯಲ್ಲಿ ಅವರೆಲ್ಲರೂ ತಮ್ಮ-ತಮ್ಮ ಪ್ರದೇಶಗಳಿಗೆ ಹಿಂದಿರುಗಬೇಕಾಯಿತು ಎಂದು ಪದಾಧಿಕಾರಿಗಳು ತಿಳಿಸಿದರು.ಎಐಡಿಎಸ್‌ಒ ಮತ್ತು ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿ ಜೂ.9ರಂದು ಅಖೀಲ ಕರ್ನಾಟಕ ಆಗ್ರಹ ದಿನ ಎಂದು ಕರೆ ನೀಡಿದ್ದು, ಈ ಹಿನ್ನೆಲೆ ನಗರದ ಇಂಜಿನಿಯರಿಂಗ್ ಕಾಲೆಜುಗಳಿಗೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಿದರು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಜಿ.ಸುರೇಶ್, ಜಿಲ್ಲಾ ಕಾರ್ಯದರ್ಶಿ ರವಿಕಿರಣ್ ಜೆ.ಪಿ ಹಾಗೂ ಜಿಲ್ಲಾ ಮುಖಂಡರಾದ ಕೆ.ಈರಣ್ಣ ವಿದ್ಯಾರ್ಥಿಗಳು ಇದ್ದರು.