ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಾಜಿ ಸಚಿವ, ಹಾಲಿ ಸಂಸದ ಮನ್ ಸುಖ್ ಭಾಯಿ ವಾಸವ್ ಅವರು ಭಾರತೀಯ ಜನತಾ ಪಕ್ಷಕ್ಕೆ ಮಂಗಳವಾರ(ಡಿಸೆಂಬರ್ 29, 2020) ರಾಜೀನಾಮೆ ನೀಡಿರುವುದಾಗಿ ವರದಿ ತಿಳಿಸಿದೆ.
ಗುಜರಾತ್ ನ ಭರುಚ್ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಗೆಲುವು ಸಾಧಿಸಿರುವ ವಾಸವ್ ಅವರು, ಬಜೆಟ್ ಅಧಿವೇಶನ ಸಂದರ್ಭದಲ್ಲಿ ಲೋಕಸಭೆಗೆ ರಾಜೀನಾಮೆಗೆ ನೀಡುವುದಾಗಿ ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಅವರಿಗೆ ವಾಸನ್ ಅವರು ಬರೆದ ಪತ್ರದಲ್ಲಿ, ನಾನು ಪಕ್ಷಕ್ಕೆ ನಿಷ್ಠಾವಂತನಾಗಿದ್ದೇನೆ. ಪಕ್ಷದ ಆದರ್ಶಗಳಿಗೆ ಬದ್ಧನಾಗಿದ್ದೇನೆ. ಮನುಷ್ಯನ ಸಹಜ ಗುಣ ಎಂಬಂತೆ ತಿಳಿದೋ ಅಥವಾ ತಿಳಿಯದೆಯೋ ತಪ್ಪುಗಳನ್ನು ಎಸಗುತ್ತಾರೆ. ನನ್ನ ತಪ್ಪಿನಿಂದ ಪಕ್ಷಕ್ಕೆ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ವಿವರಿಸಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ನಾನು ಸ್ಪೀಕರ್ ಅವರನ್ನು ಭೇಟಿಯಾಗಿ, ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ದಯವಿಟ್ಟು ನನ್ನ ರಾಜೀನಾಮೆ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುವಂತೆ ಪತ್ರದಲ್ಲಿ ವಾಸವ್ ತಿಳಿಸಿದ್ದಾರೆ.
ಇದನ್ನೂ ಓದಿ:ನಾಳೆ ಹಳ್ಳಿ ಫೈಟ್ ಫಲಿತಾಂಶ ಅಖೈರು : 209 ಗ್ರಾಪಂಗಳ ಭವಿಷ್ಯ ನಿರ್ಧಾರ
ಇದೊಂದು ವಾಸವ್ (63ವರ್ಷ) ಅವರು ಒತ್ತಡ ಹೇರುವಿಕೆಯ ತಂತ್ರವಾಗಿದೆ ಎಂದು ಊಹಾಪೋಹ ಹರಿದಾಡುತ್ತಿದೆ. ಹಲವು ವಿಚಾರಗಳಲ್ಲಿ ಪಕ್ಷ ಸಮರ್ಪಕವಾಗಿ ಸ್ಪಂದಿಸದಿರುವುದೇ ಸಂಸದ ವಾಸವ್ ಅವರ ಅಸಮಧಾನಕ್ಕೆ ಕಾರಣ ಎಂದು ವರದಿಯೊಂದು ತಿಳಿಸಿದೆ.